ಪುತ್ತೂರು: ಶಾಲಾ ಶಿಕ್ಷಣ ಮತ್ತು ಸಾಕ್ಷಾರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಬೊಳಿಕ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.3 ರಂದು(ಇಂದು) ನಡೆಯಬೇಕಿರುವ ವಿವೇಕ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೆಯ್ಯೂರು ಗ್ರಾಪಂ ಅಧ್ಯಕ್ಷರನ್ನು ಕಡೆಗಣಿಸಲಾಗಿದೆ, ಸರಕಾರಿ ಕಾರ್ಯಕ್ರಮದ ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿಲ್ಲ ಎಂದು ಆರೋಪಿಸಿ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದ್ದು ಇದರಲ್ಲಿ ವಿವೇಕ ತರಗತಿ ಉದ್ಘಾಟಿಸಲಿರುವ ಶಾಸಕರ ಹೆಸರನ್ನು ಮಾತ್ರ ಹಾಕಲಾಗಿದೆ. ಸರಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಿಸುವಾಗ ಪ್ರೋಟೋಕಾಲ್ ಇದ್ದರೂ ಅದನ್ನು ಇಲ್ಲಿ ಪಾಲಿಸಲಾಗಿಲ್ಲ ಎಂದು ಆರೋಪಿಸಿರುವ ಶರತ್ ಕುಮಾರ್‌ರವರು ಈ ಬಗ್ಗೆ ಶಾಲಾ ಮುಖ್ಯಗುರುಗಳನ್ನು ಸಂಪರ್ಕಿಸಿದಾಗ ಇಲ್ಲಿ ಯಾವುದೇ ಪ್ರೋಟೋಕಾಲ್ ಇಲ್ಲ ಎಂಬ ಉತ್ತರವನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ವೈಯುಕ್ತಿಕವಾಗಿ ನನ್ನನ್ನು ಕರೆಯದೇ ಇದ್ದರೂ ನನಗೆ ಬೇಸರವಿಲ್ಲ ಪಂಚಾಯತ್‌ನ ಒಬ್ಬ ಅಧ್ಯಕ್ಷನಾಗಿ ಸರಕಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಿಸುವಾಗ ಅದರಲ್ಲಿ ಸರಕಾರಿ ಶಿಷ್ಟಾಚಾರದಂತೆ ಪಂಚಾಯತ್ ಅಧ್ಯಕ್ಷರ ಹೆಸರನ್ನು ನಮೂದಿಸಬೇಕಲ್ವ ಎಂದು ಪ್ರಶ್ನಿಸಿರುವ ಶರತ್ ಕುಮಾರ್ ಮಾಡಾವುರವರು ಮುಖ್ಯಗುರುಗಳು ಪ್ರೋಟೋಕಾಲ್ ಇಲ್ಲ ಎಂದು ಹೇಳಿರುವ ವಿಚಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಹಿತ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಳಿಕೊಂಡಿದ್ದಾರೆ.