ಅಭಿವೃದ್ಧಿಯಲ್ಲಿ ಕಡಬ, ಸುಳ್ಯಕ್ಕೆ ಸಮಾನ ಆದ್ಯತೆ-ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿಕೆ

0

ಕಾಣಿಯೂರು: ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಕಡಬ ಹಾಗೂ ಸುಳ್ಯ ತಾಲೂಕುಗಳು ಬರುತ್ತಿದ್ದು, ಇವೆರಡೂ ನನ್ನ ಕಣ್ಣುಗಳಿದ್ದಂತೆ. ಎರಡು ತಾಲೂಕುಗಳಿಗೂ ಸಮಾನ ಆದ್ಯತೆ ನೀಡಿ, ಎರಡೂ ತಾಲೂಕುಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅ.2 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.


ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ರಸ್ತೆಗಳು ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಎಲ್ಲಾ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಎಷ್ಟು ಅನುದಾನ ಬರಲಿದೆ ಎಂಬುದು ಗೊತ್ತಿಲ್ಲ. ಆದರೆ ಬಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.


ಹೂಳು ತೆರವಿಗೆ ಕ್ರಮ:
ನದಿಗಳಲ್ಲಿ ತುಂಬಿರುವ ಹೂಳು ತೆರವಿಗೆ ಈಗಾಗಲೇ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಈಗಾಗಲೇ ಸಂಪಾಜೆ ಭಾಗದಲ್ಲಿ ನದಿಯ ಹೂಳು ತೆರವು ಮಾಡಲಾಗಿದೆ. ಮುಂದೆ ಸುಳ್ಯ ಪಯಸ್ವಿನಿ, ಸುಬ್ರಹ್ಮಣ್ಯದ ಕುಮಾರಧಾರ ನದಿಯ ಹೂಳು ತೆರವಿಗೂ ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕರು ತಿಳಿಸಿದರು.


ನದಿಗಳಿಗೆ ಕಸ, ತ್ಯಾಜ್ಯ ಹಾಕುವುದನ್ನು ಜನರೇ ಸ್ವಯಂ ಪ್ರೇರಿತರಾಗಿ ನಿಲ್ಲಿಸಬೇಕು ಎಂದವರು ಹೇಳಿದರು. ಶಾಸಕರಾದ ಮೇಲೆ ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿದ್ದೆ. ಆದರೆ ಈವರೆಗೂ ಶಾಸಕರಿಗೆ ಅನುದಾನ ಬಂದಿಲ್ಲ, ಮುಂದೆ ಬರುವ ಅನುದಾನ ಹಾಗೂ ತಾ.ಪಂ. ಜಿ.ಪಂ. ಅನುದಾನವನ್ನು ಹೊಂದಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜಾನುವಾರುಗಳ ಸಂರಕ್ಷಣೆ ಉದ್ದೇಶದಿಂದ ಗೋಶಾಲೆಗಳನ್ನು ತೆರೆದು ಖಾಸಗಿ ಕಂಪೆನಿಗೆ ಜವಾಬ್ದಾರಿ ನೀಡಿ, ನಿರ್ವಹಿಸುವ ಆಶಯ ಇಟ್ಟುಕೊಂಡಿದ್ದೇನೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

LEAVE A REPLY

Please enter your comment!
Please enter your name here