ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಬೀದಿ ನಾಯಿಗಳ ದಂಡು ಭಯಾನಕವಾಗಿದ್ದು, ಸ್ಥಳೀಯಾಡಳಿತ ಬೀದಿ ನಾಯಿ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಜರಗಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಪೇಟೆಯ ಎಲ್ಲೆಂದರಲ್ಲಿ ನಾಯಿಗಳ ದಂಡು ಕಾಣುತ್ತಿದ್ದು, ಸಣ್ಣ ವಯಸ್ಸಿನ ಮಕ್ಕಳ ಮೇಲೆ ದಾಳಿ ಮಾಡುವ ಭೀತಿ ಕಾಡುತ್ತಿರುವುದು ಒಂದೆಡೆಯಾದರೆ, ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟುವ ಭೀತಿ ಇನ್ನೊಂದೆಡೆಯಾಗಿದೆ. ನಸುಕಿನ ವೇಳೆ ವಾಕಿಂಗ್ ತೆರಳುವ ಮಂದಿ ಬೀದಿ ನಾಯಿಗಳ ದಾಳಿಯ ಭೀತಿಯಿಂದ ಒಂಟಿಯಾಗಿ ವಾಕಿಂಗ್ ಮಾಡಲು ಹೆದರುತ್ತಿದ್ದು, ಗುಂಪು ಗುಂಪಾಗಿಯೇ ವಾಕಿಂಗ್ ಮಾಡುವ ಅನಿವಾರ್ಯತೆಯನ್ನು ಈ ನಾಯಿಗಳು ಸೃಷ್ಟಿಸಿವೆ.
ಬೀದಿ ನಾಯಿಗಳ ನಿಯಂತ್ರಣ ಅತೀ ಅಗತ್ಯ: ಫಯಾಜ್
ಏಕ ಕಾಲಕ್ಕೆ ಇಪ್ಪತ್ತು ಮೂವತ್ತು ನಾಯಿಗಳು ಗುಂಪು ಗುಂಪಾಗಿ ಬೀದಿಯಲ್ಲಿ ಕಾಣಿಸಿಕೊಂಡಿವೆ ಎಂದಾದರೆ ವಯಸ್ಕರಾದ ನಾವೇ ಹೆದರುತ್ತೇವೆ. ಇನ್ನು ಸಣ್ಣ ವಯಸ್ಸಿನ ಮಕ್ಕಳು ಒಬ್ಬಂಟಿಯಾಗಿ ನಾಯಿಗಳ ಗುಂಪಿಗೆ ಸಿಲುಕಿದರೆ ಜೀವ ಹಾನಿಯಾಗುವ ಸಾಧ್ಯತೆ ಇದೆ. ರಾತ್ರಿ ವೇಳೆಯಲ್ಲಿ ಮತ್ತು ನಸುಕಿನ ವೇಳೆಯಲ್ಲಿ ಬೀದಿ ನಾಯಿಗಳ ದಂಡಿನ ಮುಂದೆ ಸಂಚರಿಸಲು ಭಯಪಡುವ ಸ್ಥಿತಿ ಉಪ್ಪಿನಂಗಡಿಯಲ್ಲಿದೆ. ಯಾವ ಮಾರ್ಗೋಪಾಯವಾದರೂ ಸರಿ ಬೀದಿ ನಾಯಿಗಳ ನಿಯಂತ್ರಣದತ್ತ ಸ್ಥಳೀಯ ಆಡಳಿತ ಗಮನ ಹರಿಸಬೇಕಾದ ಅಗತ್ಯತೆ ಇದೆ. ಸಮಸ್ಯೆ ಬಂದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಸಮಸ್ಯೆ ಬರುವ ಮುನ್ನವೇ ಎಚ್ಚೆತ್ತುಕೊಂಡರೆ ಸಮಾಜಕ್ಕೆ ಅನುಕೂಲವಾಗುವುದೆಂದು ಯುವ ಉದ್ಯಮಿ ಫಯಾಜ್ ಅಗ್ರಹಿಸಿದ್ದಾರೆ.