-ಸುಧಾಕರ್ ಕಾಣಿಯೂರು
ಕಾಣಿಯೂರು: ಮಂಜೇಶ್ವರ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಸೇತುವೆಗೆ ಭದ್ರವಾದ ತಡೆ ಬೇಲಿ ನಿರ್ಮಾಣ ಮಾಡುವಂತೆ ಆಗ್ರಹ ವ್ಯಕ್ತವಾಗುತ್ತಿದೆ.
ಮೇಲ್ದರ್ಜೆ ಇನ್ನೂ ದೂರ:
ಈ ಸೇತುವೆಯ ಮೇಲೆ ದಿನೇ ದಿನೇ ವಾಹನ ದಟ್ಟಣೆ ಅಧಿಕವಾಗುತ್ತಿದೆ. ಪ್ರಮುಖ ಯಾತ್ರಾ ಸ್ಥಳವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಹಿತ ಕಾಣಿಯೂರು, ಪಂಜ ಹಾಗೂ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪುತ್ತೂರು -ಸವಣೂರು -ಕಾಣಿಯೂರು ರಸ್ತೆಯು ಬೈತಡ್ಕ ಎಂಬಲ್ಲಿ ತಕ್ಷಣ ಕಾಣುವ ವಕ್ರ ರಸ್ತೆ ರಾತ್ರಿ ಸಮಯದಲ್ಲಿ ಸಂಚರಿಸುವವರಿಗೆ ಬಹಳ ಅಪಾಯಕಾರಿ ಆಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಸೇತುವೆಯನ್ನು ಮೇಲ್ಮಟ್ಟದ ಸೇತುವೆಯಾಗಿ ಪರಿವರ್ತಿಸಬೇಕು, ಇಲ್ಲವಾದಲ್ಲಿ ಎರಡೂ ಬದಿ ಕಬ್ಬಿಣದ ತಡೆ ಬೇಲಿಯನ್ನು ನಿರ್ಮಿಸಬೇಕು.
ಇಲ್ಲಿ ನಡೆದಿದೆ ಹಲವಾರು ಅವಘಡ:
ಬೈತಡ್ಕ ಸೇತುವೆಯ ಎರಡು ಕಡೆ ಸಮರ್ಪಕವಾದ ತಡೆಗೋಡೆ ಇಲ್ಲದ ಪರಿಣಾಮ ಇಲ್ಲಿ ಹಲವಾರು ಅವಘಡಗಳು ಸಂಭವಿಸಿದೆ. ಬೈಕ್, ಓಮ್ನಿ ಕಾರು ಸೇರಿದಂತೆ ಸೇತುವೆಯಿಂದ ಹೊಳೆಗೆ ಬಿದ್ದಿದೆ. ಮಾತ್ರವಲ್ಲದೇ ವರ್ಷದ ಹಿಂದೆಯಷ್ಟೇ ಮಳೆಗಾಲ ಸಂದರ್ಭದಲ್ಲಿ ಸೇತುವೆಗೆ ಢಿಕ್ಕಿ ಹೊಡೆದು ಕಾರೊಂದು ಹೊಳೆಗೆ ಬಿದ್ದು, ಕಾರಿನಲ್ಲಿದ್ದ ಯುವಕರಿಬ್ಬರು ಪ್ರಾಣವನ್ನು ಕಳೆದುಕೊಂಡ ಘಟನೆಯೂ ಇಲ್ಲಿ ನಡೆದು ಹೋಗಿವೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆ, ಜನಪ್ರತಿನಿಧಿಗಳು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ರಾಜ್ಯ ಹೆದ್ದಾರಿ ಬೈತ್ತಡ್ಕ ಸೇತುವೆ ಬಳಿ ಈಗಾಗಲೇ ಹಲವು ಅವಘಡಗಳು ಸಂಭವಿಸಿ ಜೀವಹಾನಿಯಾಗಿದೆ. ಈ ಸೇತುವೆಗೆ ತಡೆಬೇಲಿ ನಿರ್ಮಿಸಲು ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಈಗಾಗಲೇ ನಿರ್ಣಯ ಕೈಗೊಂಡು ಸಂಬಂಧ ಪಟ್ಟ ಇಲಾಖೆಗೆ ಕಳುಹಿಸಲಾಗಿದೆ. ಕೂಡಲೇ ಈ ಸೇತುವೆಗೆ ತಡೆಬೇಲಿ ನಿರ್ಮಿಸಿ ಅಲ್ಲಿ ಇನ್ನಷ್ಟು ಜೀವಹಾನಿ ಆಗುವುದನ್ನು ತಪ್ಪಿಸುವುದು ಸೂಕ್ತ.
-ಜಯಂತ ಅಬೀರ, ಉಪಾಧ್ಯಕ್ಷರು, ಗ್ರಾ.ಪಂ.ಬೆಳಂದೂರು
ಸುಬ್ರಹ್ಮಣ್ಯ – ಮಂಜೇಶ್ವರ ಹೆದ್ದಾರಿಯಲ್ಲಿ ಬರುವ ಬೈತ್ತಡ್ಕ ಮಸೀದಿ ಹತ್ತಿರ ಇರುವ ಸೇತುವೆಗೆ ತಡೆಗೋಡೆ ನಿರ್ಮಿಸುವುದು ಅತೀ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಸಾವು ನೋವು ಸಂಭವಿಸಿರುವುದು ಇದಕ್ಕೆ ನಿದರ್ಶನ ಆಗಿದೆ. ದೂರದ ಊರಿನ ಪ್ರವಾಸಿಗರು ಪ್ರಯಾಣಿಸುವ ಸಮಯದಲ್ಲಿ ತಕ್ಷಣ ಕಾಣುವ ವಕ್ರ ರಸ್ತೆ ರಾತ್ರಿ ಸಮಯದಲ್ಲಿ ಸಂಚರಿಸುವವರಿಗೆ ಬಹಳ ಅಪಾಯಕಾರಿ ಆಗಿದೆ. ಆದುದರಿಂದ ಸುರಕ್ಷತೆಯ ದೃಷ್ಟಿಯಿಂದ ತಡೆ ಗೋಡೆ ಅಗತ್ಯವಿದೆ. ಹಾಗೆಯೇ ಸುರಕ್ಷತೆಯ ದೃಷ್ಟಿಯಿಂದ ವೈಜ್ಞಾನಿಕವಾಗಿ ಹೊಸ ಸೇತುವೆ ನಿರ್ಮಿಸಿ ರಸ್ತೆಗೆ ನೇರವಾಗಿ ಸಂಪರ್ಕ ಕಲ್ಪಿಸಿದರೆ ಇನ್ನಷ್ಟು ಅನುಕೂಲವಾಗಲಿದೆ.
-ಅವಿನಾಶ್ ಬೈತಡ್ಕ, ನ್ಯಾಯವಾದಿ