ರಮೇಶ್ ಕೆಮ್ಮಾಯಿ
ಹಲೋ ನಾರಿಯಲ್’ಗೆ ಕರೆ ಮಾಡಿದರೆ ಸಾಕು
ಕೇರಳದಿಂದ ಜಿಲ್ಲೆಗೂ ಬಂತು ಹಲೋ ನಾರಿಯಲ್ ತಂಡ
ಕಂಪೆನಿಗೆ ಕರೆ ಮಾಡಿದರೆ ಸಾಕು ಕಾರ್ಮಿಕರೇ ಬರುತ್ತಾರೆ
10ಕಿ.ಮೀ.ಗಿಂತ ದೂರವಾದರೆ ಕಾರ್ಮಿಕರನ್ನು ಕರೆದೊಯ್ಯಬೇಕು
ಪುತ್ತೂರು: ನಾನಾ ಕಾರಣಗಳಿಂದಾಗಿ ಕೃಷಿ ಉತ್ಪನ್ನಗಳಿಗೆ ಬೆಲೆ ಕಡಿಮೆಯಾಗಿರುವ ಸಂಕಷ್ಟ ಒಂದೆಡೆಯಾದರೆ, ತೆಂಗು,ಅಡಿಕೆ ಕೊಯ್ಯಲು, ಕೃಷಿ ಕಾರ್ಯಗಳನ್ನು ಮಾಡಲು ಕೃಷಿಕೂಲಿ ಕಾರ್ಮಿಕರ ಕೊರತೆ ಇನ್ನೊಂದೆಡೆ. ಇದೀಗ ತೆಂಗಿನ ಕಾಯಿ ಕೊಯ್ಯುವ ಕಾರ್ಮಿಕರ ಕೊರತೆ ನೀಗಿಸುವ ಪ್ರಯತ್ನವೊಂದು ಧರಿತ್ರಿ ಸೌಹಾರ್ದ ಸಹಕಾರಿ ಸಂಘದ ಮೂಲಕ ನಡೆದಿದೆ.ದೂರವಾಣಿ ಕರೆ ಮಾಡಿದಾಕ್ಷಣ ಕಾರ್ಮಿಕರೇ ಮನೆ ಬಾಗಿಲಿಗೆ ಬಂದು ತೆಂಗಿನ ಕಾಯಿ ಕೀಳುವ, ಮರ ಸ್ವಚ್ಛಗೊಳಿಸಿ ಹೋಗುವ ವ್ಯವಸ್ಥೆಯೊಂದು ಪ್ರಾರಂಭಗೊಂಡಿದೆ.
ಮರದಿಂದ ತೆಂಗಿನಕಾಯಿ ಕೀಳುವಲ್ಲಿ ವಿಶೇಷ ಪರಣತಿ ಹೊಂದಿರುವ ಕೇರಳದ ಹಲೋ ನಾರಿಯಲ್' ತಂಡ ಈಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾರ್ಯ ವಿಸ್ತರಿಸಿದೆ.ಕೇರಳದ ತಿರುವನಂತಪುರಂನಲ್ಲಿ ಆರಂಭವಾದ ಈ ಸಂಸ್ಥೆಯ ತರಬೇತುಗೊಂಡ ಕೆಲಸಗಾರರು ಬಹಳ ಜನಪ್ರಿಯತೆ ಗಳಿಸಿದ್ದು ವ್ಯಾಪಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈಗ ಕೇರಳದ ಗಡಿ ದಾಟಿ ಜಿಲ್ಲೆಗೂ ಕಾಲಿಡುತ್ತಿದ್ದಾರೆ. ಇಲ್ಲಿನ ಮುರದಲ್ಲಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಘವು ತನ್ನ ಗ್ರಾಹಕರಿಗೆ ಹಾಗೂ ಊರಿನ ಜನತೆಗೆ ನೆರವಾಗುವ ಉದ್ದೇಶದಿಂದ ತೆಂಗಿನಕಾಯಿ ಕೀಳುವ ಕಾಯಕದವರಿಗೆ ವೇದಿಕೆ ಕಲ್ಪಿಸಿ ಜನತೆಗೆ ಅನುಕೂಲತೆ ಒದಗಿಸಿದೆ.ಕೇರಳದ
ಹಲೋ ನಾರಿಯಲ್’ ಮಾದರಿಯನ್ನು ಇರಿಸಿಕೊಂಡು ಬಂಟ್ವಾಳದ ಪಿಂಗಾರ' ಹೆಸರಿನ ತೋಟಗಾರಿಕಾ ಬೆಳೆಗಾರರ ಉತ್ಪಾದನಾ ಕಂಪನಿ ಅಸ್ತಿತ್ವಕ್ಕೆ ಬಂದು ಕಾರ್ಯನಿರ್ವಹಿಸುತ್ತಿದೆ.ತೆಂಗು ಮಾತ್ರವಲ್ಲ ಅಡಿಕೆ ಕೊಯ್ಲು ಕೂಡ ಈ ಕಂಪನಿಯ ತಂಡ ನಡೆಸುತ್ತಿದೆ.
ಹಲೋ ನಾರಿಯಲ್’ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಹೊಸ ಸೇರ್ಪಡೆ ಆದರೆ ಇದು ತೆಂಗಿಗೆ ಮಾತ್ರ ಸೀಮಿತ.ಸದ್ಯ ಹಲೋ ನಾರಿಯಲ್ ತಂಡ ತೆಂಗಿನಕಾಯಿ ಕೀಳಲು ಮತ್ತು ತೆಂಗಿನ ಮರಗಳ ಗರಿ ಸ್ವಚ್ಛಗೊಳಿಸಿ ಔಷಧ ನೀಡಲು ಮಾತ್ರ ಸೀಮಿತವಾಗಿದೆ. ಕೇರಳದ ಹಲೋ ನಾರಿಯಲ್ ಕಂಪನಿಯಲ್ಲಿ ತರಬೇತು ಪಡೆದು ಬಂದ ಮೂರು ಮಂದಿ ಉತ್ತರ ಭಾರತ ಮೂಲದ ಕಾರ್ಮಿಕರು ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರೆ ಮಾಡಿ ಬುಕ್ಕಿಂಗ್:
ಹಲೋ ನಾರಿಯಲ್‌ನ ತಂಡ ಪುತ್ತೂರಿನಲ್ಲಿದ್ದರೂ ನೇರವಾಗಿ ತಂಡವನ್ನು ಸಂಪರ್ಕಿಸಿ ತೆಂಗಿನಕಾಯಿ ಕೀಳಲು ಕಾರ್ಮಿಕರನ್ನು ಕರೆದೊಯ್ಯುವಂತಿಲ್ಲ.ಏನಿದ್ದರೂ ನಂಬರ್ (8848066091, 8301028054)ಗೆ ಕರೆ ಮಾಡಿ ಬುಕ್ಕಿಂಗ್ ಮಾಡಬೇಕು. ಈ ವೇಳೆ ತೆಂಗಿನ ಕಾಯಿ ಕೀಳಬೇಕಾದ ಜಾಗದ ಲೊಕೇಶನ್ ಕಳುಹಿಸಬೇಕು. ಆಗ ನೇರವಾಗಿ ಹಲೋ ನಾರಿಯಲ್ ಕಂಪನಿಯ ಮೊಬೈಲ್‌ನಲ್ಲಿ ಕಂಪನಿಯಿಂದ ಪುತ್ತೂರಿನಲ್ಲಿರುವ ಕೆಲಸಗಾರರಿಗೆ ಸಂದೇಶ ಹೋಗುತ್ತದೆ. ಬಳಿಕ ಅಲ್ಲಿಂದ ಕಾರ್ಮಿಕರು ಲೊಕೇಶನ್ ಆಧಾರದಲ್ಲಿ, ಕರೆ ಮಾಡಿದಲ್ಲಿಗೆ ಬಂದು ಕೆಲಸ ಮಾಡಿ ತೆರಳುತ್ತಾರೆ. ದಿನದಲ್ಲಿ ಬೆಳಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ಇವರ ಕೆಲಸದ ಅವಧಿ ಇರುತ್ತದೆ.ಒಂದು ತೆಂಗಿನ ಮರಕ್ಕೆ ರೂ.50 ಶುಲ್ಕವಿದ್ದು ಇದನ್ನು ಕೆಲಸಗಾರರಲ್ಲಿ ಪಾವತಿಸಬಹುದು. ಪುತ್ತೂರು ನಗರದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಈ ಕೆಲಸಗಾರರೇ ಪರಿಕರಗಳೊಂದಿಗೆ ಸೈಕಲ್‌ನಲ್ಲಿ ಬಂದು ಕೆಲಸ ಮುಗಿಸಿ ಹೋಗುತ್ತಾರೆ. 10 ಕಿ.ಮೀಗಿಂತ ದೂರದ ಪ್ರದೇಶಗಳಿಗಾದರೆ ಕೆಲಸ ಮಾಡಿಸುವವರೇ ಇವರನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ಈ ಕೆಲಸಗಾರರು ಸಮವಸ್ತ್ರ ಧರಿಸಿ ಕೆಲಸ ನಿರ್ವಹಿಸುತ್ತಾರೆ. ಇವರಿಗೆ ಕಂಪನಿ ವಿಮೆಯನ್ನೂ ಮಾಡಿಸಿದೆ. ಒಟ್ಟಾರೆಯಾಗಿ ತೆಂಗಿನ ಕಾಯಿ, ಅಡಿಕೆ ಕೊಯ್ಯುವ ಕೃಷಿಕೂಲಿ ಕಾರ್ಮಿಕರ ಕೊರತೆ ವ್ಯಾಪಕವಾಗಿ ಕಾಡುತ್ತಿರುವ ನಡುವೆಯೇ ಹಲೋ ನಾರಿಯಲ್ ತಂಡದ ಮೂಲಕ ಕೃಷಿಕರಿಗೆ ತೆಂಗಿನ ಕಾಯಿ ಕೊಯ್ಯಲು ಕಾರ್ಮಿಕರು ಸುಲಭವಾಗಿ ದೊರೆಯುವಂತಾಗಿರುವುದು ಕೃಷಿಕರಲ್ಲಿ ಖುಷಿ ಮೂಡಿಸಿದೆ ಎಂದರೆ ತಪ್ಪಾಗದು.