ಆಳ್ವಾಸ್ ಪ್ರಗತಿ: 1,871 ಮಂದಿಗೆ ಉದ್ಯೋಗ – 3,259 ಜನರು ಮುಂದಿನ ಹಂತಕ್ಕೆ ಆಯ್ಕೆ – 198 ಕಂಪನಿಗಳು ಭಾಗಿ

0

ಮಂಗಳೂರು: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ಎರಡು ದಿನ ನಡೆದ ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 1,871 ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲಿಯೇ ನೇಮಕಗೊಂಡಿದ್ದಾರೆ.
ಭಾಗವಹಿಸಿದ ಒಟ್ಟು 198 ಕಂಪನಿಗಳ ಪೈಕಿ 174 ಕಂಪನಿಗಳು, 3,259 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ 2,284 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ 10,252 ಅಭ್ಯರ್ಥಿಗಳು ಭಾಗವಹಿಸಿದರು.
ಅಮೆರಿಕಾ ಮೂಲದ ಫ್ಯಾಕ್ಟ್ಸೆಟ್ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ ಕಂಪೆನಿಯು ಒಬ್ಬನನ್ನು ವಾರ್ಷಿಕ ವೇತನ 7.1 ಲಕ್ಷ ರೂಪಾಯಿಗೆ ಹಾಗೂ 20 ಅಭ್ಯರ್ಥಿಗಳನ್ನು ತಲಾ ವಾರ್ಷಿಕ 3.4 ಲಕ್ಷ ವೇತನಕ್ಕೆ ಸಂಶೋಧನಾ ವಿಶ್ಲೇಷಕರ ಹುದ್ದೆಗೆ ಆಯ್ಕೆ ಮಾಡಿದೆ.
ಇಎಕ್ಸ್ಎಲ್ ಕಂಪೆನಿಯು ಒಟ್ಟು 39 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಒಬ್ಬನಿಗೆ ಸುಮಾರು 7 ಲಕ್ಷ ರೂಪಾಯಿ ವಾರ್ಷಿಕ ವೇತನದ ಭರವಸೆ ನೀಡಿದೆ. ಉಳಿದ 38 ಅಭ್ಯರ್ಥಿಗಳಿಗೆ ತಲಾ ವಾರ್ಷಿಕ ಸುಮಾರು 4 ಲಕ್ಷ ರೂಪಾಯಿ ವೇತನದ ಭರವಸೆ ನೀಡಿದೆ. ಬ್ಲ್ಯೂಸ್ಟೋನ್ ಜ್ಯುವೆಲ್ಲರಿಯು ವಾರ್ಷಿಕ ವೇತನ 5 ಲಕ್ಷ ರೂಪಾಯಿಯ ಹುದ್ದೆಗೆ 16 ಮಂದಿಯನ್ನು ಆಯ್ಕೆ ಮಾಡಿದೆ. ಆರೋಗ್ಯ ಸಂಬಂಧಿತ ಕಲ್ಟ್ಫಿಟ್ ಕಂಪೆನಿಯು ವಾರ್ಷಿಕ ತಲಾ 4 ಲಕ್ಷ ರೂಪಾಯಿ ವೇತನಕ್ಕೆ 16 ಜನರನ್ನು ಆಯ್ಕೆ ಮಾಡಿದೆ. ಅಜೆಕ್ಸ್ ಕಂಪೆನಿಯು ವಾರ್ಷಿಕ ತಲಾ 3.5 ಲಕ್ಷ ರೂಪಾಯಿ ವೇತನಕ್ಕೆ 22 ಮಂದಿಯನ್ನು ಆಯ್ಕೆ ಮಾಡಿದೆ. ಸ್ವಿಚ್‌ಗಿಯರ್ ಕಂಪೆನಿಯು ವಾರ್ಷಿಕ ತಲಾ ವೇತನ 3.2 ಲಕ್ಷ ರೂಪಾಯಿಯಂತೆ 36 ಮಂದಿಗೆ ಉದ್ಯೋಗ ನೀಡಿದೆ. ಟ್ರಿಪ್ ಫ್ಯಾಕ್ಟರಿಯು ವಾರ್ಷಿಕ ತಲಾ 3 ಲಕ್ಷ ರೂಪಾಯಿ ವೇತನಕ್ಕೆ 37 ಮಂದಿಯನ್ನು ಆಯ್ಕೆ ಮಾಡಿದೆ. ಸ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಕಂಪೆನಿಯು ವಾರ್ಷಿಕ ತಲಾ 2.5 ಲಕ್ಷ ರೂಪಾಯಿ ವೇತನಕ್ಕೆ 18 ಜನರನ್ನು ಆಯ್ಕೆ ಮಾಡಿದೆ. ಪುತ್ತೂರಿನಿಂದ ಮೊದಲ ದಿನ 350 ಆಕಾಂಕ್ಷಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here