ಹಣ ಗಳಿಸುವುದಕ್ಕಿಂತ ಔದ್ಯೋಗಿಕ ಸಾರ್ಥಕತೆ ನಿಜವಾದ ಯಶಸ್ಸು : ಸತ್ಯಶಂಕರ್ ಕೆ.
ಪುತ್ತೂರು: ಪ್ರತಿಯೊಬ್ಬನೂ ತನ್ನ ಜೀವನಕ್ಕೊಂದು ಸ್ಪಷ್ಟವಾದ ಗುರಿಯನ್ನು ಹೊಂದಬೇಕು. ಕನಸೊಂದು ನನಸಾಗುವಲ್ಲಿ ದೀರ್ಘ ಸಮಯ ಹಾಗೂ ನಿರಂತರ ಶ್ರಮೆ ಅಗತ್ಯ. ಜೀವನದಲ್ಲಿ ಯಶಸ್ಸು ಗಳಿಸುವುದೆಂದರೆ ನಾವು ತೊಡಗಿರುವ ವೃತಿಯಲ್ಲಿ ಉನ್ನತ ಸ್ಥಾನವನ್ನು ತಲುಪುದು. ಹಣವನ್ನು ಗಳಿಸುವುದು ಮಾತ್ರ ಜೀವನದ ಉದ್ದೇಶವಾಗದೆ, ಉದ್ಯೋಗದಲ್ಲಿ ಸಾರ್ಥಕತೆಯನ್ನು ಮೆರೆಯುವುದು ಯಶಸ್ಸೆಂದು ಗಣಿಸಲ್ಪಡುತ್ತದೆ ಎಂದು ಪುತ್ತೂರಿನ ಬಿಂದು ಸಂಸ್ಥೆಯ ಸ್ಥಾಪಕ, ಎಸ್.ಜಿ ಕಾರ್ಪೋರೇಟ್ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸತ್ಯ ಶಂಕರ ಕೆ ಹೇಳಿದರು.
ಅವರು ಬಪ್ಪಳಿಗೆ ಶ್ರೀ ಶಂಕರ ಸಭಾಭವನದಲ್ಲಿ ಬುಧವಾರ ನಡೆದ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆ ಹಾಗೂ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳೆರಡರ ವಾರ್ಷಿಕೋತ್ಸವ ಕಾರ್ಯಕ್ರಮ ಮಾನಸೋಲ್ಲಾಸ 2023-24ರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಸೋಲು ಎದುರಾದಾಗ ಅದನ್ನು ಹಿಮ್ಮೆಟ್ಟಿಸುವ ಛಲ ನಮ್ಮೊಳಗಿರಬೇಕಾಗುತ್ತದೆ. ಹೀಗಾಗಿ ಪ್ರತಿಯೊಂದು ಸನ್ನಿವೇಶವನ್ನೂ ಧನಾತ್ಮಕವಾಗಿ ಸ್ವೀಕರಿಸಬೇಕು. ಪ್ರತಿಸ್ಪರ್ಧಿಯೊಂದಿಗೆ ಸ್ಪರ್ಧೆಗೆ ಇಳಿಯದೆ, ಆತನ ಕಾರ್ಯವನ್ನು ಗಮನಿಸುತ್ತಿರಬೇಕು. ಮಾತ್ರವಲ್ಲದೆ ವ್ಯಕ್ತಿಗೆ ತನ್ನ ಬಗ್ಗೆ ಅಪರಿಮಿತ ಆತ್ಮವಿಶ್ವಾಸವಿರಬೇಕು. ಮಾಡುವ ಕೆಲಸದಲ್ಲಿ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂಬ ನಂಬಿಕೆಯಿರಬೇಕು. ಹಾಗೆ ಗುರಿಯೆಡೆಗೆ ನಡೆಯುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ. ಎಂದಿಗೂ ಉತ್ಸಾಹವನ್ನು ಕಳೆದುಕೊಳ್ಳದೆ ಲವಲವಿಕೆಯಿಂದ ಜೀವಿಸಬೇಕು ಎಂದು ಹೇಳಿದರು.
ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಯಾವುದೇ ಹುದ್ದೆಗೆ ಆಯ್ಕೆಯಾದರೂ ಮನುಷ್ಯ ಮಾನವೀಯತೆಯನ್ನು ಮರೆಯಬಾರದು. ಸಂಸ್ಕಾರವನ್ನು ಬೆಳೆಸಿಕೊಂಡು ಏರುವ ಉನ್ನತ ಹಂತ ಮೌಲ್ಯ ಪಡೆದುಕೊಳ್ಳುತ್ತದೆ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ವಿದ್ಯಾರ್ಥಿ ಜೀವನದಿಂದಲೇ ಮಾಡಲು ತೊಡಗಬೇಕು ಎಂದು ಹೇಳಿದರು.
ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಹಿರಿಯ ವಿದ್ಯಾರ್ಥಿ ಡಾ.ನಿತಿನ್ ಬಂಗಾರಡ್ಕ ಮಾತನಾಡಿ, ವಿದ್ಯೆ ಹಾಗೂ ಸಂಸ್ಕಾರಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಇಂದು ವಿದ್ಯೆ ಕಲಿಸುವ ಶಿಕ್ಷಣ ಸಂಸ್ಥೆಗಳು ಹಲವಾರಿವೆ. ಆದರೆ ವಿದ್ಯೆಯೊಂದಿಗೆ ಸಂಸ್ಕಾರವನ್ನು ಕಲಿಸುವ ಕಾಲೇಜುಗಳು ಬೆರಳೆಣಿಕೆಯಷ್ಟು ಮಾತ್ರವೆ ಇವೆ. ಪಠ್ಯ ಶಿಕ್ಷಣದ ಜೊತೆಗೆ ದೇಶಪ್ರೇಮವನ್ನೂ ತಿಳಿಸುವ ಸಂಸ್ಥೆಗಳು ಮತ್ತಷ್ಟು ಬೇಕಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ವಿದೇಶೀ ಸಂಸ್ಕೃತಿಯ ವ್ಯಾಮೋಹದಲ್ಲಿ ದೇಸೀ ಸಂಸ್ಕೃತಿಯನ್ನು ಜನರು ತಿರಸ್ಕರಿಸುತ್ತಿದ್ದಾರೆ. ಇಂತಹ ಮನಃಸ್ಥಿತಿ ಬದಲಾಗಬೇಕು. ದೇಶ ವಿದೇಶಗಳಲ್ಲಿಯೂ ಭಾರತದ ಸಂಸ್ಕೃತಿ, ವಿಪುಲವಾದ ಕಲೆಯನ್ನು ಅನಾವರಣಗೊಳಿಸಬೇಕು. ವಿದ್ಯಾರ್ಥಿಗಳು ಕಲೆಯನ್ನು ಪಸರಿಸುವ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವತಿಯಿಂದ ಸತ್ಯಶಂಕರ್ ಕೆ ಹಾಗೂ ಡಾ.ನಿತಿನ್ ಬಂಗಾರಡ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿದ್ಯಾರ್ಥಿ ಕಾರ್ತಿಕ್ ಅಂಬಿಕಾ ಸಂಸ್ಥೆಯ ಕುರಿತಾದ ಹಾಡನ್ನು ರಚಿಸಿ, ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾದ ಧನ್ವಿತ್, ಅನಿಕೇತ್, ಭುವನ್, ವಂಶಿಕ್ ರೈ ಅವರನ್ನು ಗೌರವಿಸಲಾಯಿತು. ಸಾಂಸ್ಕೃತಿಕವಾಗಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡ ನೆಲ್ಲಿಕಟ್ಟೆಯ ಭಾಸ್ಕರ ಬ್ಯಾಚ್ ಹಾಗೂ ಬಪ್ಪಳಿಗೆಯ ಮೈತ್ರೇಯಿ ಬ್ಯಾಚ್ಗೆ ಪ್ರಶಸ್ತಿಯನ್ನು ನೀಡಲಾಯಿತು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರುಗಳಾದ ಸುರೇಶ್ ಶೆಟ್ಟಿ, ಡಾ.ಎಚ್.ಮಾಧವ ಭಟ್, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕ ನಿಶಾಂತ್, ಕಾರ್ಯದರ್ಶಿ ಶಮನ್ ಹಾಗೂ ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಕಿಶನ್ ಹಾಗೂ ಕಾರ್ಯದರ್ಶಿ ಸಂದೀಪ್ ಪಾಟೀಲ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಆತ್ಮಶ್ರೀ ಮತ್ತು ತಂಡ ಪ್ರಾರ್ಥಿಸಿ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ. ವಂದಿಸಿದರು. ನೆಲ್ಲಿಕಟ್ಟೆಯ ಉಪ ಪ್ರಾಂಶುಪಾಲೆ ಶೈನಿ ಕೆ.ಜೆ. ಹಾಗೂ ಬಪ್ಪಳಿಗೆಯ ಉಪನ್ಯಾಸಕಿ ಕೃತಿ ಸಾಧಕರ ಪಟ್ಟಿ ವಾಚಿಸಿದರು. ಉಪನ್ಯಾಸಕರಾದ ಆಶಿಕ್ ಬಾಲಚಂದ್ರ ಹಾಗೂ ಸುಬ್ರಹ್ಮಣ್ಯ ಕೆ. ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸುಚಿತ್ರಾ ಪ್ರಭು ಅವರಿಂದ ವಾರ್ಷಿಕ ವರದಿ ಮಂಡನೆ ನಡೆಯಿತು. ತದನಂತರ ವಿದ್ಯಾರ್ಥಿಗಳಿಂದ ಭಾರತೀಯ ಕಲಾಪ್ರಕಾರಗಳನ್ನಾಧರಿಸಿದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.