ಹಿಂದೂಗಳ ಮತ ವಿಭಜನೆಯಾಗದಂತೆ ಮಾಡಬೇಕಾದುದು ಅನಿವಾರ್ಯ-ಡಾ.ಸುರೇಶ್ ಪುತ್ತೂರಾಯರ ಸಲಹೆಪಕ್ಷಕ್ಕೆ ಹೊಡೆತ ಬಿದ್ದಿದೆ.ಪುತ್ತಿಲರಿಗೆ
ಅವಕಾಶ ಕೊಡಬಹುದು,ಆದರೆ ಜಿಲ್ಲಾಧ್ಯಕ್ಷ ಹುದ್ದೆ ಅಸಾಧ್ಯ- ನಳಿನ್ ಕುಮಾರ್,ಶೋಭಾ ಕರಂದ್ಲಾಜೆ
ಸಂಘ, ಪಕ್ಷದ ಸಿದ್ಧಾಂತದ ವಿರುದ್ಧ ಹೋದವರು ಪಕ್ಷಕ್ಕೆ ಬಂದು ಕೆಲಸ ಮಾಡಲಿ-ಸಂಘ ಪರಿವಾರ ನಾಯಕರ ಸಲಹೆ
ಕ್ಷೇತ್ರ ಬಿಜೆಪಿ ಅಧ್ಯಕ್ಷ ಹುದ್ದೆ ನೀಡಲು ನಾಯಕರಿಂದ ನೋ ಅಬ್ಜೆಕ್ಷನ್
ಪಕ್ಷದ ನಿಲುವಿಗೆ ಜಿಲ್ಲೆ, ಕ್ಷೇತ್ರ ಬಿಜೆಪಿ ಪ್ರಮುಖರಿಂದಲೂ ಸಹಮತ
ಸಂಘ ಪರಿವಾರದ ಮುಖಂಡರನ್ನು ಭೇಟಿಯಾಗಿ ಅಸಮಾಧಾನ ಹೋಗಲಾಡಿಸಲು ಪುತ್ತಿಲರಿಗೆ ಬಿಜೆಪಿ ನಾಯಕರ ಸಲಹೆ
ಕಟೀಲ್ ಮನೆಗೆ ಹಿಂದಾರು
ಅರುಣ್ ಕುಮಾರ್ ಪುತ್ತಿಲ ಅವರ ಮಾರ್ಗದರ್ಶಕರಾಗಿರುವ ಭಾಸ್ಕರ್ ಆಚಾರ್ ಹಿಂದಾರು ಮತ್ತು ಜಯರಾಮ ಕೆದಿಲಾಯ ಶಿಬರ ಅವರು ಇತ್ತೀಚೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕುಂಜಾಡಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.ಸಾರ್ವಜನಿಕ ವಲಯದಲ್ಲಿ ಈ ಕುರಿತು ಹಲವು ಊಹಾಪೋಹಗಳು ಕೇಳಿ ಬಂದಿತ್ತು.ಆದರೆ, ಸಾಂದೀಪನಿ ಶಾಲೆಗೆ ತಡೆಗೋಡೆ ರಚನೆಯ ಕುರಿತು ಸಂಸದರಲ್ಲಿ ಮಾತನಾಡಲು ಅವರು ಹೋಗಿದ್ದರೇ ಹೊರತು ಬೇರೆ ಯಾವುದೇ ವಿಚಾರದಲ್ಲಿ ಮಾತುಕತೆಗಾಗಿ ಅಲ್ಲ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಯಾವುದೇ ಮಾತುಕತೆ ನಡೆದಿಲ್ಲ
ಪಕ್ಷದಲ್ಲಿ ಸ್ಥಾನ-ಮಾನ ನೀಡುವ ಕುರಿತು ಸಮಯ ಮತ್ತು ಪರಿಸ್ಥಿತಿ ನಿರ್ಧರಿಸಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳುತ್ತಾರೆ.ಹೊಸ ಸರ್ಕಾರದಡಿ ಹಿಂದೂ ಸಮುದಾಯವು ಹೆಚ್ಚು ಸವಾಲುಗಳನ್ನು ಎದುರಿಸುವ ಪರಿಸ್ಥಿತಿಯಿರುವುದರಿಂದ ಹೆಚ್ಚು ಹೆಚ್ಚು ಜನರೊಂದಿಗೆ ಸಭೆ ನಡೆಸಿ ಹಿಂದುತ್ವ ಸಂಘಟನೆಯನ್ನು ಬಲಪಡಿಸುವ ಉದ್ದೇವನ್ನು ಹೊಂದಿರುವುದಾಗಿ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದು, ಪಕ್ಷದ ಹುದ್ದೆ ನೀಡುವ ವಿಚಾರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಪುತ್ತೂರು:ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿಂದುತ್ವದ ಸಿದ್ಧಾಂತದಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 60 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ವಿರೋಚಿತ ಸೋಲು ಕಂಡಿರುವ ಅರುಣ್ ಕುಮಾರ್ ಪುತ್ತಿಲ ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಂಡು ಲೋಕಸಭಾ ಚುನಾವಣೆ ನಿಟ್ಟಿನಲ್ಲಿ ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಮಾತುಕತೆ ನಿರ್ಣಾಯಕ ಹಂತ ತಲುಪಿದ್ದು, ಪುತ್ತಿಲ ಅವರು ಬಿಜೆಪಿ ಸೇರುವುದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರು, ದ.ಕ.ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಆರಂಭದಲ್ಲಿಯೇ ಜಿಲ್ಲಾಧ್ಯಕ್ಷ ಹುದ್ದೆ ನೀಡುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.
ಪುತ್ತಿಲ ಅವರನ್ನು ಬಿಜೆಪಿಗೆ ಕರೆಸಿಕೊಳ್ಳುವುದಕ್ಕೆ ಯಾವುದೇ ಆಕ್ಷೇಪವಿಲ್ಲ.ಪಕ್ಷಕ್ಕೆ ಬಂದು ಕೆಲಸ ಮಾಡಲಿ.ಆದರೆ, ಪಕ್ಷ ಮತ್ತು ಸಂಘದ ಸಿದ್ಧಾಂತಕ್ಕೆ ವಿರುದ್ಧವಾಗಿ ಹೋಗಿ, ಪಕ್ಷದ ಸೋಲಿಗೆ ಕಾರಣವಾಗಿರುವ ಪುತ್ತಿಲ ಅವರಿಗೆ ಆರಂಭದಲ್ಲಿಯೇ ಪಕ್ಷದ ಹುದ್ದೆ ನೀಡುವುದು ಬೇಡ ಎಂದು ಸಂಘ ಪರಿವಾರದ ಕೆಲವು ನಾಯಕರು ಸಲಹೆ ನೀಡಿದ್ದಾರೆ.ಸಂಘ ಪರಿವಾರದ ಪ್ರಮುಖರೊಂದಿಗೆ ಈ ವಿಚಾರದಲ್ಲಿ ಮಾತುಕತೆ ನಡೆಸಿ ಬರುವಂತೆ ಪುತ್ತಿಲ ಅವರಿಗೆ ಪಕ್ಷದ ನಾಯಕರು ಸಲಹೆ ನೀಡಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಸೇರಿದಂತೆ ದ.ಕ.ಮತ್ತು ಪುತ್ತೂರು ಬಿಜೆಪಿ ಮುಖಂಡರೂ ಪಕ್ಷದ ನಿಲುವಿಗೆ ಬದ್ಧ ಎಂದು ತಿಳಿಸಿ, ಪುತ್ತಿಲ ಅವರು ಬಿಜೆಪಿ ಸೇರುವುದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.ಅಂದುಕೊಂಡಂತೆ ಎಲ್ಲವೂ ಆದರೆ, ಲೋಕಸಭಾ ಚುನಾವಣೆಗೆ ಮೊದಲು ಅರುಣ್ ಕುಮಾರ್ ಪುತ್ತಿಲ ಅವರು ಮತ್ತೆ ಬಿಜೆಪಿಯೊಂದಿಗೆ ವಿಲೀನವಾಗುವುದು ಮತ್ತು ಪುತ್ತೂರು ಕ್ಷೇತ್ರ ಬಿಜೆಪಿ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದರೂ ಅರುಣ್ ಕುಮಾರ್ ಪುತ್ತಿಲ ಅವರು 60,000ಕ್ಕೂ ಹೆಚ್ಚು ಮತ ಗಳಿಸಿದ್ದರು.ಹಿಂದುತ್ವದ ತನ್ನ ಸಿದ್ದಾಂತ ವಿಜಯಶಾಲಿಯಾಗಿದೆ ಎಂದು ಪುತ್ತಿಲ ಹೇಳಿಕೊಂಡಿದ್ದರು.ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈಯವರು ಶಾಸಕರಾಗಿ ಚುನಾಯಿತರಾಗಿದ್ದರು.ಮತಗಳಿಕೆಯಲ್ಲಿ ಬಿಜೆಪಿ ತೃತೀಯ ಸ್ಥಾನಕ್ಕೆ ಕುಸಿದಿತ್ತು.ಬಳಿಕದ ಬೆಳವಣಿಗೆಯಲ್ಲಿ ಪುತ್ತಿಲ ಮತ್ತು ಬಿಜೆಪಿ ನಡುವಿನ ಅಂತರ ದೂರವಾಗುತ್ತಾ ಸಾಗಿತ್ತು.
ಪುತ್ತಿಲ ಅವರು ಪುತ್ತಿಲ ಪರಿವಾರ ಸಂಘಟನೆ ರಚಿಸಿಕೊಂಡು ಅವಿಭಜಿತ ದ.ಕ.ಜಿಲ್ಲೆಯ ಹಲವು ಕಡೆಗಳಲ್ಲಿ ಸಂಘಟನೆ ಗಟ್ಟಿ ಮಾಡಿಕೊಂಡು ಹೋಗುತ್ತಿದ್ದರೆ, ಬಿಜೆಪಿ ಕೂಡಾ ಲೋಕಸಭಾ ಚುನಾವಣಾ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಒತ್ತು ನೀಡುತ್ತಾ, ಈ ನಿಟ್ಟಿನಲ್ಲಿ ಚಟುವಟಿಕೆ ನಿರತವಾಗಿದೆ.ಏನಿದ್ದರೂ ಬಿಜೆಪಿ-ಪುತ್ತಿಲ ಮತ್ತೆ ಒಂದಾಗದೇ ಇದ್ದರೆ ಲೋಕಸಭಾ ಚುನಾವಣೆಯಲ್ಲಿಯೂ ಮತ ವಿಭಜನೆಯಾಗಿ ಸೋಲಾಗುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕಾಗಿ ಬಿಜೆಪಿ ಮತ್ತು ಪುತ್ತಿಲ ಮತ್ತೆ ಒಂದಾಗುವ ನಿಟ್ಟಿನಲ್ಲಿ ಎರಡೂ ಕಡೆಯಿಂದ ಪ್ರಯತ್ನಗಳು ನಡೆಯುತ್ತಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಪಕ್ಷದ ನಾಯಕರ ಜೊತೆ ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿವೆ.
ಪುತ್ತಿಲ ಅವರು ಮತ್ತೆ ಬಿಜೆಪಿಗೆ ಬರಬೇಕು ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಇತ್ತ ಪುತ್ತಿಲ ಅವರಿಗೆ ಪಕ್ಷದಲ್ಲಿ ಜಿಲ್ಲಾಧ್ಯಕ್ಷ ಸ್ಥಾನದಂತಹ ಹುದ್ದೆ ನೀಡುವ ಷರತ್ತಿನೊಂದಿಗೆ ಪುತ್ತಿಲ ಪರಿವಾರದ ಪ್ರಮುಖರೂ, ಬಿಜೆಪಿಯೊಂದಿಗೆ ವಿಲೀನವಾಗುವುದಕ್ಕೆ ಸಹಮತ ವ್ಯಕ್ತಪಡಿಸಿದ್ದರು.ಜಿಲ್ಲಾಧ್ಯಕ್ಷ ಹುದ್ದೆ ನೀಡದೇ ಇದ್ದಲ್ಲಿ ಲೋಕಸಭಾ ಚುನಾವಣೆಗೂ ಸ್ಪರ್ಧೆ ಮಾಡುವಂತೆ ಪುತ್ತಿಲ ಅವರ ಮೇಲೆ ಕಾರ್ಯಕರ್ತರಿಂದ ಒತ್ತಡವೂ ವ್ಯಕ್ತವಾಗುತ್ತಿದೆ.ಈ ಎಲ್ಲ ಬೆಳವಣಿಗೆಗಳ ಪರಿಣಾಮವಾಗಿಯೇ, ಪುತ್ತಿಲ ಅವರೊಂದಿಗೆ ಗುರುತಿಸಿಕೊಂಡಿದ್ದ ಪ್ರಮುಖರು ದೆಹಲಿ ತನಕ ಹೋಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ತಮ್ಮ ವಿಚಾರಗಳನ್ನು ಸ್ಪಷ್ಟಪಡಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಅರುಣ್ ಕುಮಾರ್ ಪುತ್ತಿಲ, ಬಳಗವನ್ನು ಮತ್ತೆ ಬಿಜೆಪಿಗೆ ಕರೆತರುವ ಕುರಿತು ಬಿಜೆಪಿಯ ಸ್ಥಳೀಯ ನಾಯಕರು, ಕಾರ್ಯಕರ್ತರೂ ಪಕ್ಷದ ನಾಯಕರ ಮೇಲೆ ಒತ್ತಡ ತರುತ್ತಿದ್ದರು.ಇದೆಲ್ಲದರ ಪರಿಣಾಮವಾಗಿ ಇದೀಗ ಭಿನ್ನಾಭಿಪ್ರಾಯಗಳು ಇತ್ಯರ್ಥವಾಗಿ ಬಿಜೆಪಿ-ಪುತ್ತಿಲ ಮತ್ತೆ ಒಂದಾಗುವ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ಡಾ.ಪುತ್ತೂರಾಯರ ಮಧ್ಯಸ್ಥಿಕೆ: ಡಾ.ಸುರೇಶ್ ಪುತ್ತೂರಾಯ ಅವರು ಮಾತುಕತೆಯ ನಾಯಕತ್ವ ವಹಿಸಿದ್ದರು.ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಪುತ್ತಿಲರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಹಿಂದೂಗಳ ಮತಗಳು ವಿಭಜನೆಯಾಗಿ ದೊಡ್ಡ ಮಟ್ಟದ ಸಮಸ್ಯೆಯಾಗಿದೆ, ಹಿಂದುತ್ವಕ್ಕೆ ಹೊಡೆತ ಬಿದ್ದಿದೆ.ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದೆ ಲೋಕಸಭಾ ಚುನಾವಣೆಯಲ್ಲಿಯೂ ಹಿಂದುತ್ವದ ಮತಗಳ ವಿಭಜನೆಯಾಗಿ ಹಿಂದುತ್ವದ ವಿರೋಧಿಗಳಿಗೆ ಗೆಲುವಾಗುವ ಸಾಧ್ಯತೆ ಅಧಿಕವಾಗಿದೆ.
ಈ ನಿಟ್ಟಿನಲ್ಲಿ ನಮ್ಮೊಳಗಿರುವ ಅಭಿಪ್ರಾಯ ಭೇದ, ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದ್ದು ಬಿಜೆಪಿ ಮತ್ತು ಪುತ್ತಿಲ ಪರಿವಾರ ಒಂದಾಗಬೇಕಾದ ಅಗತ್ಯವಿದೆ ಎಂದು ಡಾ.ಸುರೇಶ್ ಪುತ್ತೂರಾಯರು ಪ್ರತಿಪಾದಿಸಿದ್ದರು. ಬಿಜೆಪಿ, ಪುತ್ತಿಲ ಪರಿವಾರ ಮತ್ತು ಸಂಘ ಪರಿವಾರದ ಕೊಂಡಿಯಾಗಿ ಡಾ.ಪುತ್ತೂರಾಯರು ಮಾತುಕತೆ ನೇತೃತ್ವ ವಹಿಸಿದ್ದರು.
ಬಿಜೆಪಿಗೆ ಬರಲಿ ಆದರೆ ಜಿಲ್ಲಾಧ್ಯಕ್ಷ ಹುದ್ದೆ ನೀಡುವುದು ಅಸಾಧ್ಯ: ಅರುಣ್ ಕುಮಾರ್ ಪುತ್ತಿಲ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷತೆ ನೀಡಬೇಕು ಮತ್ತು ಯಾವುದೇ ಹುದ್ದೆ ನೀಡುವುದಾದರೂ ರಾಜ್ಯ ಮಟ್ಟದಲ್ಲಿಯೇ ಇದನ್ನು ಘೋಷಣೆ ಮಾಡಬೇಕು ಎನ್ನುವುದು ಪುತ್ತಿಲ ಪರಿವಾರದವರ ಒಕ್ಕೊರಳ ಆಗ್ರಹವಾಗಿದೆ.ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ.ಪರಿಸ್ಥಿತಿ ಮುಂದುವರಿದರೆ ಮುಂದೆ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಹೊಡೆತವಾಗಲಿದೆ.ಈ ನಿಟ್ಟಿನಲ್ಲಿ ಪುತ್ತಿಲ ಮತ್ತು ಬಳಗದವರು ಬಿಜೆಪಿಗೆ ಬರುವುದಕ್ಕೆ ಯಾವುದೇ ಆಕ್ಷೇಪವಿಲ್ಲ.ಅವರಿಗೆ ನಾಯಕತ್ವ ಗುಣವೂ ಇರುವುದರಿಂದ ಅವಕಾಶ ನೀಡಬಹುದು.ಆದರೆ ಮೊದಲ ಹಂತದಲ್ಲಿಯೇ ಜಿಲ್ಲಾಧ್ಯಕ್ಷ ಹುದ್ದೆ ನೀಡಲು ಅಸಾಧ್ಯ ಎಂದು ಬಿಜೆಪಿ ನಾಯಕರು ಸ್ಪಷ್ಟಪಡಿಸಿದ್ದು, ಕ್ಷೇತ್ರ ಸಮಿತಿ ಅಧ್ಯಕ್ಷ ಹುದ್ದೆ ನೀಡಬಹುದಾಗಿದೆ ಎಂದು ತಾತ್ವಿಕ ಒಪ್ಪಿಗೆ ನೀಡಿದ್ದಾರೆ.
ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಅವರನ್ನು ನೇಮಕ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಒಪ್ಪಿಗೆ ಸೂಚಿಸಿದ್ದಾರೆ.ಮಾತ್ರವಲ್ಲದೆ, ಈ ಕುರಿತು ಜಿಲ್ಲೆ ಮತ್ತು ಕ್ಷೇತ್ರ ಬಿಜೆಪಿ ಪ್ರಮುಖರ ಅಭಿಪ್ರಾಯ ಕೇಳಿದ್ದು ಅವರೂ, ಪಕ್ಷದ ನಿಲುವಿಗೆ ತಾವು ಬದ್ಧ ಎಂದು ಸಹಮತ ವ್ಯಕ್ತಪಡಿಸಿದ್ದಾರೆ.ಪುತ್ತೂರಿನ ಹಿರಿಯ ಹಿಂದೂ ಮುಖಂಡ ಡಾ.ಎಂ.ಕೆ.ಪ್ರಸಾದ್ ಅವರಿಂದಲೂ ಇದಕ್ಕೆ ಆಕ್ಷೇಪ ವ್ಯಕ್ತವಾಗಿಲ್ಲ.
ಪಕ್ಷಕ್ಕೆ ಬರಲಿ-ಆದರೆ ಈಗ ಹುದ್ದೆ ಬೇಡ- ಸಂಘ ಪರಿವಾರದ ನಿಲುವು: ಸಂಘ ಪರಿವಾರದ ಕೆಲವು ನಾಯಕರು ಅರುಣ್ ಕುಮಾರ್ ಪುತ್ತಿಲ ಅವರ ನಡೆಯ ಕುರಿತು ಅಸಮಾಧಾನ ಹೊಂದಿದ್ದು ಅವರಿಗೆ ಆರಂಭದಲ್ಲಿಯೇ ಪಕ್ಷದ ಹುದ್ದೆ ನೀಡುವುದಕ್ಕೆ ಸಹಮತ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.ಪಕ್ಷ ಮತ್ತು ಸಂಘ ಪರಿವಾರದ ಸಿದ್ಧಾಂತಕ್ಕೆ ವಿರುದ್ಧವಾಗಿ ಹೋಗಿ, ಪಕ್ಷದ ಸೋಲಿಗೆ ಕಾರಣಕರ್ತರಾದವರಿಗೆ ಈಗ ಪಕ್ಷದ ಹುದ್ದೆ ನೀಡುವುದು ಬೇಡ.ಅವರು ಪಕ್ಷಕ್ಕೆ ಬರಲಿ, ಪಕ್ಷಕ್ಕಾಗಿ ಕೆಲಸ ಮಾಡಲಿ,ಹುದ್ದೆ ನೀಡುವ ವಿಚಾರ ಆ ಬಳಿಕ ತೀರ್ಮಾನಿಸುವುದು ಒಳಿತು ಎಂದು ಸಂಘ ಪರಿವಾರದ ಕೆಲವು ಪ್ರಮುಖರು ಸಲಹೆ ನೀಡಿದ್ದರೆಂದು ಹೇಳಲಾಗುತ್ತಿದೆ.
ಸಂಘದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಬನ್ನಿ: ಅರುಣ್ ಪುತ್ತಿಲ ಅವರನ್ನು ಬಿಜೆಪಿಗೆ ಕರೆಸಿಕೊಳ್ಳುವುದಕ್ಕೆ ಒಪ್ಪಿಗೆ ಸೂಚಿಸಿರುವ ಬಿಜೆಪಿ ನಾಯಕರು, ಪುತ್ತಿಲ ಅವರ ವಿಚಾರದಲ್ಲಿ ಅಸಮಾಧಾನ ಹೊಂದಿರುವ ಸಂಘ ಪರಿವಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಿ ಸರಿಪಡಿಸಿಕೊಳ್ಳುವಂತೆ ಪುತ್ತಿಲ ಅವರಿಗೆ ಸಲಹೆ ನೀಡಿದ್ದಾರೆ.ಮುಖ್ಯವಾಗಿ, ಸಂಘ ಪರಿವಾರದ ಪ್ರಮುಖರಾದ ಡಾ.ಕಲ್ಲಡ್ಕ ಪ್ರಭಾಕರ ಭಟ್, ಎಸ್.ಆರ್.ರಂಗಮೂರ್ತಿ, ಅಚ್ಚುತ ನಾಯಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಅಸಮಾಧಾನವನ್ನು ಸರಿಪಡಿಸಿಕೊಳ್ಳುವಂತೆ ಬಿಜೆಪಿ ನಾಯಕರು ಪುತ್ತಿಲ ಅವರಿಗೆ ಸೂಚಿಸಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.ಎಲ್ಲವೂ ಅಂದುಕೊಂಡಂತೆ ನಡೆದರೆ ಅರುಣ್ ಕುಮಾರ್ ಪುತ್ತಿಲ, ಬಳಗದವರು ಶೀಘ್ರವೇ ಬಿಜೆಪಿಯೊಂದಿಗೆ ವಿಲೀನವಾಗಿ ಲೋಕಸಭಾ ಚುನಾವಣೆಯತ್ತ ಕೇಂದ್ರೀಕರಿಸಿ ಕಾರ್ಯಚಟುವಟಿಕೆಗಳನ್ನು ನಡೆಸುವುದು ಬಹುತೇಕ ಖಚಿತವಾಗಿದೆ.