ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಬಸ್‌ಗಳ ಕೊರತೆ ಇದ್ದು, ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆಯಾಗುತ್ತಿದ್ದು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ನೀಡಿದ ಮನವಿಗೆ ಪುತ್ತೂರು ಶಾಸಕರು ಸ್ಪಂದಿಸಿದ್ದು, ಪುತ್ತೂರಿಗೆ ಸಾರಿಗೆ ಇಲಾಖೆಯಿಂದ 10 ಹೊಸ ಬಸ್‌ಗಳನ್ನು ಒದಗಿಸಲಾಗಿದೆ.
ಕಳೆದ ಒಂದು ವರ್ಷದಿಂದ ಪುತ್ತೂರು ಡಿಪೋದಲ್ಲಿ ಬಸ್ ಕೊರತೆ ಇತ್ತು. ಬಸ್ ಕೊರತೆಯ ಕಾರಣಕ್ಕೆ ಗ್ರಾಮಾಂತರ ಭಾಗದ ಜನರಿಗೆ ತೀವ್ರವಾದ ತೊಂದರೆಯುಂಟಾಗಿತ್ತು. ಬಸ್ ಇಲ್ಲದೆ ವಿದ್ಯಾರ್ಥಿಗಳು ಇರುವ ಬಸ್ಸಿನಲ್ಲಿ ನೇತಾಡಿಕೊಂಡು ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇತ್ತು. ಈ ಬಗ್ಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದಿದ್ದರು. ಸಮಸ್ಯೆ ಪರಿಹರಿಸುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದರು. ಶಾಸಕರು 50 ಹೊಸ ಬಸ್ಸುಗಳ ಬೇಡಿಕೆಯನ್ನು ಸರಕಾರದ ಮುಂದೆ ಇಟ್ಟಿದ್ದು ಈ ಪೈಕಿ ಹತ್ತು ಬಸ್ಸುಗಳು ಪುತ್ತೂರಿಗೆ ಬಂದಿದ್ದು ಉಳಿದ 40 ಬಸ್ಸುಗಳು ಹಂತಹಂತವಾಗಿ ಡಿಪೋಗೆ ಸೇರಿಕೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.