ಸರಕಾರ ಬದಲಾದಂತೆ ಶಿಕ್ಷಣ ಪದ್ಧತಿಯೂ ಬದಲಾವಣೆಗೆ ಗ್ರಾಮಸ್ಥರ ವಿರೋಧ
ನೆಲ್ಯಾಡಿ: ರಾಜ್ಯದಲ್ಲಿ ಸರಕಾರ ಬದಲಾದಂತೆ ಶಿಕ್ಷಣ ಪದ್ಧತಿಯೂ ಬದಲಾವಣೆ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಬಜತ್ತೂರು ಗ್ರಾಮಸಭೆಯಲ್ಲಿ ನಡೆಯಿತು.
ಸಭೆ ಅ.10ರಂದು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಪುತ್ತೂರು ತಾ.ಪಂ.ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹಾಯಕ ನಿರ್ದೇಶಕಿ ಶೈಲತಾ ಭಟ್‌ರವರು ನೋಡೆಲ್ ಅಧಿಕಾರಿಯಾಗಿದ್ದರು. ಸಿಆರ್‌ಪಿ ಮಂಜುನಾಥ್‌ರವರು ಮಾಹಿತಿ ನೀಡುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಗಣೇಶ್‌ಕುಲಾಲ್ ಅವರು, ಶಿಕ್ಷಣ ವ್ಯವಸ್ಥೆ ಬಗ್ಗೆ ಗೊಂದಲಗಳಿದ್ದು ಸರಕಾರ ಬದಲಾದಂತೆ ಶಿಕ್ಷಣ ವ್ಯವಸ್ಥೆಯೂ ಬದಲಾಗುತ್ತಿದೆ. ಇದು ಸರಿಯಲ್ಲ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಗ್ರಾಮಸ್ಥ ಶ್ರೀಧರ ಭಟ್ ಅವರು, ಸರಕಾರದ ಹೊಸ ಶಿಕ್ಷಣ ಪದ್ಧತಿಯಿಂದ ವಿದ್ಯಾರ್ಥಿಗಳು, ಪೋಷಕರೂ ಗೊಂದಲದಲ್ಲಿದ್ದಾರೆ. ವರ್ಷಕ್ಕೊಮ್ಮೆ ಶಿಕ್ಷಣ ಪದ್ಧತಿ ಬದಲಾವಣೆ ಮಾಡುವ ಬದಲು 5 ರಿಂದ 10 ವರ್ಷ ಒಂದೇ ರೀತಿಯ ಶಿಕ್ಷಣ ವ್ಯವಸ್ಥೆ ಇರಬೇಕು. ಸರಕಾರ 3 ವರ್ಷಕ್ಕೆ ಬಿದ್ದು ಹೋಗಬಹುದು. ಆದರೆ ಶೈಕ್ಷಣಿಕ ಪದ್ಧತಿ ಬದಲಾಗಬಾರದು. ಈ ವಿಚಾರದಲ್ಲಿ ಸರಕಾರದ ಅತಿರೇಕದ ವರ್ತನೆ ಸರಿಯಲ್ಲ ಎಂದರು. ಶಿಕ್ಷಣ ಪದ್ಧತಿಯ ಬದಲಾವಣೆಗೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಶಾಲೆಗಳಿಗೆ ಕಡಿಮೆ ಅನುದಾನ:
ಸರಕಾರಿ ಶಾಲೆಗಳಿಗೆ ಸರಕಾರ ನೀಡುತ್ತಿರುವ ಅನುದಾನ ಎಲ್ಲಿಗೂ ಸಾಕಾಗುವುದಿಲ್ಲ. ಎಲ್ಲದಕ್ಕೂ ದಾನಿಗಳಿಂದ ನೆರವು ಪಡೆಯಬೇಕು. ಈ ರೀತಿಯಾದಲ್ಲಿ ಖಾಸಗಿ ಶಾಲೆಗಳ ಜೊತೆ ಸರಕಾರಿ ಶಾಲೆಗಳು ಪೈಪೋಟಿ ಮಾಡುವುದು ಹೇಗೆ ? ಎಂಬ ಅಭಿಪ್ರಾಯವನ್ನೂ ಗ್ರಾಮಸ್ಥರು ಸಭೆಯಲ್ಲಿ ವ್ಯಕ್ತಪಡಿಸಿದರು. ಸರಕಾರಿ ಶಾಲೆಗಳ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು ಸರಕಾರವೇ ಪಾವತಿಸಬೇಕು ಎಂದು ಸದಸ್ಯ ಉಮೇಶ್ ಓಡ್ರಪಾಲು ಆಗ್ರಹಿಸಿದರು. 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟಕ್ಕೆ ಕುಚ್ಲಕ್ಕಿ ಪೂರೈಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಶಾಲೆಗಳ ಪಕ್ಕ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಗಂಗಾಧರ ಪಿ.ಎನ್.ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.
ಸರ್ವೆ ನಂ.4/1ರ ಜಂಟಿ ಸರ್ವೆ ಮಾಡಿ:
ಸರ್ವೆ ನಂ.4/1ರಲ್ಲಿ 400 ಎಕ್ರೆಗೂ ಹೆಚ್ಚು ಜಾಗ ಇದೆ. ಇದರಲ್ಲಿ 80 ಎಕ್ರೆ ಅರಣ್ಯ ಜಾಗವಿದೆ. ಆದರೆ ಅರಣ್ಯ ಜಾಗ ಎಲ್ಲಿ ಇದೆ ಎಂಬುದು ಅರಣ್ಯ ಇಲಾಖೆಗೆ ಗೊತ್ತಿಲ್ಲ. ಯಾರಿಗೂ ಜಾಗ ಮಂಜೂರು ಆಗುತ್ತಿಲ್ಲ. ಬೆದ್ರೋಡಿ ಸರಕಾರಿ ಶಾಲೆಯ ಜಾಗವೂ ಇದೇ ಸರ್ವೆ ನಂಬ್ರದಲ್ಲಿದ್ದು ಆರ್‌ಟಿಸಿ ಆಗಿಲ್ಲ. ಅರಣ್ಯ ಇಲಾಖೆಯ ತಕರಾರಿನಿಂದ ಜನರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿಯವರು, ಇದು ಸರಕಾರದ ಹಂತದಲ್ಲೇ ಆಗಬೇಕಿದೆ. ಆದ್ದರಿಂದ ಇಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಬರೆಯುವಂತೆ ಹೇಳಿದರು. ಈ ಬಗ್ಗೆ ಹಿಂದಿನ ಗ್ರಾಮಸಭೆಯಲ್ಲೂ ನಿರ್ಣಯ ಕೈಗೊಂಡು ಸರಕಾರಕ್ಕೆ ಬರೆಯಲಾಗಿದೆ. ಆದರೆ ಈ ತನಕವೂ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪ್ರತಿಕ್ರಿಯಿಸಿದ ಸದಸ್ಯ ಸಂತೋಷ್ ಪಂರ್ದಾಜೆ ಅವರು, ಇದೇ ಸರ್ವೆ ನಂಬರ್‌ನಲ್ಲಿ ಅರಣ್ಯ ಪಕ್ಕದಲ್ಲಿರುವ ಮೂವರಿಗೆ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರಾತಿ ಆಗಿದೆ. ಆದರೆ ಅರಣ್ಯದಿಂದ ದೂರದಲ್ಲಿರುವ ವ್ಯಕ್ತಿಯೊಬ್ಬರಿಗೆ ಜಾಗ ಮಂಜೂರಾತಿಗೆ ಅರಣ್ಯ ಇಲಾಖೆ ಆಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆಯ ಅಧಿಕಾರಿ, ಅರಣ್ಯ ಇಲಾಖೆಯಿಂದ ಯಾರಿಗೂ ಒಪ್ಪಿಗೆ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು.
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್‌ಗೆ ಆಕ್ಷೇಪ:
ಯಾವುದೇ ಮಾಹಿತಿ ನೀಡದೇ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲಾಗಿದೆ ಎಂದು ಗ್ರಾಮಸ್ಥ ಶ್ರೀಧರ ಭಟ್‌ರವರು ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆಯಿತು. ಗ್ರಾಮಸ್ಥರಿಗೆ ಮಾಹಿತಿ ನೀಡದೇ ಹೆಸರು ಡಿಲೀಟ್ ಆಗಿದ್ದಲ್ಲಿ ಮತ್ತೆ ಸೇರ್ಪಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಆಡಳಿತಾಧಿಕಾರಿಯವರು ತಿಳಿಸಿದರು.
ಜೆಜೆಎಂ ಕಾಮಗಾರಿ ವಿಳಂಬ:
ಜಲಜೀವನ್ ಮಿಷನ್ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಇದರ ಅಂದಾಜುಪಟ್ಟಿ ಗ್ರಾಮ ಪಂಚಾಯತ್‌ನಲ್ಲಿ ಇಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅಂದಾಜುಪಟ್ಟಿ ಗ್ರಾ.ಪಂ.ಗೆ ನೀಡಿಲ್ಲ ಎಂದು ಪಿಡಿಒ ದಿನೇಶ್ ಶೆಟ್ಟಿ ಹೇಳಿದರು. ಈ ವೇಳೆ ಮಾತನಾಡಿದ ಸಭೆಯ ನೋಡೆಲ್ ಅಧಿಕಾರಿ ಶೈಲಜಾ ಭಟ್ ಅವರು, ಯೋಜನೆಯ ಡಿಪಿಆರ್ ಪಟ್ಟಿ ಗ್ರಾ.ಪಂ.ನಲ್ಲಿ ಇರಲೇಬೇಕು. ಇಲ್ಲವಾದಲ್ಲಿ ತರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಪಿ.ಎನ್.ಅವರು, ಡಿಪಿಆರ್ ಪಟ್ಟಿ ತರಿಸುವುದಾಗಿ ಹೇಳಿದರು. ಕಾಮಗಾರಿಯ ಪೈಪುಲೈನ್ ಚರಂಡಿಯಲ್ಲಿ ಹಾಕಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಹೆಚ್ಚುವರಿ ಪಂಪ್ ಇರಿಸಿಕೊಳ್ಳಿ:
ನೀರಿನ ಸಮಸ್ಯೆ ಕುರಿತಂತೆ ಗ್ರಾಮಸ್ಥ ಅಝೀಝ್ ಅವರು ಪ್ರಸ್ತಾಪಿಸಿದರು. ಬೋರ್‌ವೆಲ್ ಪಂಪ್‌ಗಳು ಕೆಟ್ಟುಹೋಗುತ್ತಿರುವುದರಿಂದ ಕೆಲವೊಮ್ಮೆ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪಂಪ್ ಖರೀದಿಗೆ ನಿರ್ಧರಿಸಲಾಗಿದೆ. ಮುಂದೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಅಧ್ಯಕ್ಷ ಗಂಗಾಧರ ಪಿ.ಎನ್., ಸದಸ್ಯರಾದ ಸಂತೋಷ್ ಪಂರ್ದಾಜೆ, ಉಮೇಶ್ ಓಡ್ರಪಾಲು ಅವರು ಹೇಳಿದರು. 2 ಅಥವಾ 3 ಹೆಚ್ಚುವರಿ ಪಂಪ್‌ಗಳು ಪಂಚಾಯತ್‌ನಲ್ಲಿ ಇರಬೇಕೆಂದು ಗ್ರಾಮಸ್ಥ ಮಹೇಂದ್ರ ವರ್ಮ ಹೇಳಿದರು.
ಖಾಯಂ ಪಿಡಿಒ, ಕಾರ್ಯದರ್ಶಿ ನೇಮಿಸಿ:
ಗ್ರಾಮ ಪಂಚಾಯತ್‌ನಲ್ಲಿ ಪ್ರಭಾರ ಪಿಡಿಒ ಹಾಗೂ ಪ್ರಭಾರ ಕಾರ್ಯದರ್ಶಿ ಇರುವುದು. ಇದರಿಂದ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಖಾಯಂ ಪಿಡಿಒ ಮತ್ತು ಕಾರ್ಯದರ್ಶಿ ನೇಮಕ ಮಾಡಬೇಕು ಎಂದು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಗಣೇಶ್‌ಕುಲಾಲ್ ಆಗ್ರಹಿಸಿದರು.
ಇಲಾಖಾಧಿಕಾರಿಗಳ ಗೈರು ಹಾಜರಿ:
ಜಿ.ಪಂ.ಇಂಜಿನಿಯರ್, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ, ಈ ಇಲಾಖೆಗಳ ಬಗ್ಗೆ ಮಾಹಿತಿ ನೀಡುವವರು ಯಾರು ಎಂದು ಪ್ರಶ್ನಿಸಿದರು. ಗ್ರಾಮಸ್ಥ ಶ್ರೀಧರ ಭಟ್‌ರವರು ಮಾತನಾಡಿ, ಗ್ರಾಮಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ದಿನಾಲೂ ಸಿಗುತ್ತಾರೆ. ಹೋಬಳಿ ಇಲ್ಲವೇ ತಾಲೂಕು ಮಟ್ಟದ ಅಧಿಕಾರಿಗಳೇ ಗ್ರಾಮಸಭೆಗೆ ಬರಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆಯ ನೋಡೆಲ್ ಅಧಿಕಾರಿ ಶೈಲಜಾ ಭಟ್ ಅವರು, ಗ್ರಾಮಸಭೆಗೆ ಗ್ರಾಮ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಆಕ್ಟ್‌ನಲ್ಲಿ ಇದೆ. ಜನಸಂಪರ್ಕ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ ಎಂದರು.
ಮೆಸ್ಕಾಂ ಸಬ್‌ಸ್ಟೇಷನ್‌ಗೆ ಜಾಗ:
ಮೆಸ್ಕಾಂ ಸಬ್‌ಸ್ಟೇಷನ್‌ಗೆ ಬೆದ್ರೋಡಿಯಲ್ಲಿ ೫೦ ಸೆಂಟ್ಸ್ ಜಾಗ ಗುರುತಿಸಲಾಗಿದೆ. ಇದರ ಮುಂದಿನ ಹಂತ ಎಲ್ಲಿಗೆ ಮುಟ್ಟಿದೆ ಎಂದು ಗ್ರಾಮಸ್ಥ ಧನಂಜಯ ಬೆದ್ರೋಡಿ ಪ್ರಶ್ನಿಸಿದರು. ಈ ಬಗ್ಗೆ ಚರ್ಚೆ ನಡೆದು ಸದ್ರಿ ಜಾಗ ಅಕ್ರಮ-ಸಕ್ರಮದಲ್ಲಿ ಬೇರೆಯವರಿಗೆ ಮಂಜೂರು ಆಗುವ ಮೊದಲು ಮೆಸ್ಕಾಂಗೆ ಇಲ್ಲವೇ ಗ್ರಾ.ಪಂ.ಗೆ ಕಾದಿರಿಸಬೇಕೆಂದು ಗಣೇಶ್ ಕುಲಾಲ್ ಹಾಗೂ ಇತರರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಆಡಳಿತಾಧಿಕಾರಿಯವರು, ಸದ್ರಿ ಜಾಗ ಮೆಸ್ಕಾಂಗೆ ಕಾದಿರಿಸುವ ಸಂಬಂಧ ತಹಶೀಲ್ದಾರ್‌ಗೆ ವರದಿ ಮಾಡುವುದಾಗಿ ಹೇಳಿದರು.
ಸ್ಮಶಾನ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ವಿಚಾರಗಳನ್ನು ಗ್ರಾಮಸ್ಥರು ಪ್ರಸ್ತಾಪಿಸಿದರು. ಸಿಆರ್‌ಪಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಸುಜಾತ, ಕೃಷಿ ಇಲಾಖೆಯ ಭರಮಣ್ಣನವರ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ಮೆಸ್ಕಾಂ ಪವರ್ ಮ್ಯಾನ್ ದುರ್ಗಾಸಿಂಗ್, ಆರೋಗ್ಯ ಸುರಕ್ಷಾಧಿಕಾರಿ ಅನ್ನಮ್ಮ ಕೆ.ಸಿ., ಉಪ್ಪಿನಂಗಡಿ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಕಿರಣ್, ಪಶು ಸಂಗೋಪನಾ ಇಲಾಖೆಯ ಡಾ. ಉಷಾ ಎನ್., ಗ್ರಾಮ ಆಡಳಿತಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿಯವರು ಇಲಾಖಾವಾರು ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಮೋನಪ್ಪ ಗೌಡ, ರತ್ನ, ಪ್ರೆಸಿಲ್ಲಾ ಡಿ.ಸೋಜ, ಉಮೇಶ ಓಡ್ರಪಾಲು, ಸ್ಮಿತಾ, ಮಾಧವ ಪೂಜಾರಿ, ಗಂಗಾಧರ ಕೆ.ಎಸ್., ಯಶೋಧ, ಸಂತೋಷ್‌ಕುಮಾರ್ ಪಂರ್ದಾಜೆ, ಪ್ರೇಮಾ, ಭಾಗೀರಥಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ದಿನೇಶ್ ಶೆಟ್ಟಿ ಸ್ವಾಗತಿಸಿ ವರದಿ ಮಂಡಿಸಿದರು. ಕಾರ್ಯದರ್ಶಿ ಸುಬ್ಬಯ್ಯ ಕೆ.ಪಿ.ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.
ಸ್ವಚ್ಛತೆ ಕಾಪಾಡದಿದಲ್ಲಿ ದಂಡ:
ವಳಾಲು ಸಮೀಪ ಪಾಲು ಬಿದ್ದ ಬಾವಿಗೆ ಸತ್ತಪ್ರಾಣಿ, ನ್ಯಾಪ್‌ಕಿನ್, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಹಾಕುತ್ತಿದ್ದಾರೆ. ಇದರಿಂದ ಪರಿಸರದ ಮನೆಗೆ ಕೆಟ್ಟ ವಾಸನೆ ಬರುತ್ತಿದೆ. ಈ ಬಗ್ಗೆ ಪ್ರತಿ ಗ್ರಾಮಸಭೆಯಲ್ಲೂ ಪ್ರಸ್ತಾಪಿಸುತ್ತಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಮಹೇಂದ್ರ ವರ್ಮ ಆಗ್ರಹಿಸಿದರು. ಬೆದ್ರೋಡಿ ತೂಗುಸೇತುವೆ ಬಳಿಯೂ ತ್ಯಾಜ್ಯ ರಾಶಿಬಿದ್ದಿದೆ ಎಂದು ಗ್ರಾಮಸ್ಥ ಶರೀಫ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಗಂಗಾಧರ ಪಿ.ಎನ್.,ಅವರು ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬ ಗ್ರಾಮಸ್ಥರ ಕರ್ತವ್ಯ. ತ್ಯಾಜ್ಯ ಎಸೆಯದಂತೆ ನಾಮಫಲಕ ಹಾಕಲಾಗಿದೆ. ಸಾಧ್ಯವಾದಲ್ಲಿ ಮುಂದೆ ಸಿಸಿ ಕ್ಯಾಮರಾ ಅಳವಡಿಸುತ್ತೇವೆ. ತ್ಯಾಜ್ಯ ಎಸೆಯುವವರು ಕಂಡುಬಂದಲ್ಲಿ ಪೋಟೋ ತೆಗೆದು ನನ್ನ ವಾಟ್ಸಫ್ ನಂಬರ್‌ಗೆ ಕಳಿಸಿ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು. ಅಂಗಡಿಯವರಿಗೂ ಈಗಾಗಲೇ ಸೂಚನೆ ನೀಡಲಾಗಿದೆ. ಸ್ವಚ್ಛತೆ ಕಾಪಾಡದೇ ಇದ್ದಲ್ಲಿ ದಂಡ ವಿಧಿಸುತ್ತೇವೆ ಎಂದು ಅಧ್ಯಕ್ಷ ಗಂಗಾಧರ ಪಿ.ಎನ್.ಎಚ್ಚರಿಕೆ ನೀಡಿದರು.