ಪುತ್ತೂರು: ಸರಕಾರಿ ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ವರ್ತನೆಗೆ ರಾಜ್ಯ ಸರಕಾರಿ ನೌಕರರ ಸಂಘ ಇದರ ಪುತ್ತೂರು ತಾಲೂಕು ಶಾಖೆಯಿಂದ ಖಂಡನೆ ವ್ಯಕ್ತಪಡಿಸಿದ್ದು ಮಾತ್ರವಲ್ಲ ಈ ಕುರಿತು ಅ.17 ರಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್‌ರವರಿಗೆ ದೂರು ಸಲ್ಲಿಸಿದ್ದಾರೆ.
ಅ.7 ರಿಂದ 9ರ ವರೆಗೆ ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿಯ ಕಳೆಂಜ ಗ್ರಾಮದ ಸರ್ವೆ ನಂಬ್ರ 309ರಲ್ಲಿರುವ ಅಮ್ಮಿನಡ್ಕದ ನಿಡ್ಲೆ ವಿಸ್ತೃತ ಬ್ಲಾಕ್-2ರ ಮೀಸಲು ಅರಣ್ಯದಲ್ಲಿ 1963ನೇ ಕರ್ನಾಟಕ ಜಾಗವನ್ನು ಹಸನು ಮಾಡಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಕಳೆಂಜ ಗ್ರಾಮ ಅಮ್ಮಿನಡ್ಕ ಎಂಬಲ್ಲಿಯ ನಿವಾಸಿಯಾದ ಲೋಲಾಕ್ಷ ಗೌಡ ಎಂಬವರು ಅತಿಕ್ರಮಣ ಮಾಡಿದ್ದು, ಸದರಿ ಅತಿಕ್ರಮಣವನ್ನು ತೆರವುಗೊಳಿಸಲು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ ಹಾಗೂ ಸಿಬ್ಬಂದಿ ವರ್ಗ ವಿಚಾರಣೆ ನಡೆಸುತ್ತಿರುವಾಗ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಸದ್ರಿ ಮೀಸಲು ಅರಣ್ಯ ಸ್ಥಳಕ್ಕೆ ಏಕಾಏಕಿಯಾಗಿ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರವರಿಗೆ ಅರಣ್ಯ ಅತಿಕ್ರಮಣದ ಬಗ್ಗೆ ಅರಣ್ಯ ಅಧಿಕಾರಿಗಳು ಸವಿಸ್ತಾರವಾಗಿ ತಿಳಿಸಲಾಗಿದ್ದು, ಸದ್ರಿ ಪ್ರಕರಣದ ವಾಸ್ತವ ಸ್ಥಿತಿಯನ್ನು ಶಾಸಕರು ಅರಿತಿದ್ದರೂ ಸಹ ಏಕಾಏಕಿ ಶಾಸಕ ಹರೀಶ್ ಪೂಂಜಾರವರು ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕುವ ಮೂಲಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಮಾತ್ರವಲ್ಲ ಶಾಸಕ ಹರೀಶ್ ಪೂಂಜಾರವರು ಪದೇ ಪದೇ ದೂರವಾಣಿ ಕರೆ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಒತ್ತಡವನ್ನು ಹೇರಿರುತ್ತಾರೆ ಹಾಗೂ ಸಾರ್ವಜನಿಕವಾಗಿ ಅರಣ್ಯ ಸಿಬ್ಬಂದಿಗಳ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಮಾನ ಹಾನಿ ಮಾಡಿರುವುದಾಗಿಯೂ, ಅಲ್ಲದೆ ಅರಣ್ಯ ಇಲಾಖೆ ಮತ್ತು ಅರಣ್ಯ ಸಿಬ್ಬಂದಿಗಳ ಬಗ್ಗೆ ಸಾರ್ವಜನಿಕವಾಗಿ ತಪ್ಪು ಮಾಹಿತಿ ನೀಡಿ ಅರಣ್ಯ ಇಲಾಖೆ ಮೇಲೆ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.
ಮುಂದುವರೆದು ಶಾಸಕ ಹರೀಶ್ ಪೂಂಜಾರವರು ಜನಪ್ರತಿನಿಧಿಯಾದ ನನ್ನನ್ನು ತಡೆಯಲು ಮಾನ್ಯ ಸ್ಪೀಕರ್‌ರವರ ಅನುಮತಿಯಿಲ್ಲದೆ ಏನೂ ಮಾಡಲಾಗುವುದಿಲ್ಲ ಎಂದು ಸಾರ್ವಜನಿಕರಿಗೆ ತಿಳಿಸಿ ಅರಣ್ಯ ಅತಿಕ್ರಮಣವನ್ನು ತಡೆಯಲು ಬಂದಿದ್ದ ಬೇರೆ ಬೇರೆ ತಾಲೂಕುಗಳ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸಹ ಬೆದರಿಕೆ ಒಡ್ಡಿರುತ್ತಾರೆ. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾರವರೊಂದಿಗೆ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮತ್ತೀತರರು ಉಪಸ್ಥಿತರಿರುತ್ತಾರೆ ಎಂದು ವಲಯ ಅರಣ್ಯಾಧಿಕಾರಿಯವರು ಸಂಘಕ್ಕೆ ಬರೆದ ಪತ್ರದಲ್ಲಿ ತಿಳಿಸಿರುತ್ತಾರೆ.
ಸದ್ರಿ ಘಟನೆಯಿಂದ ಸರಕಾರಿ ನೌಕರರಾದ ತಮಗೆ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ, ಘನತೆ ಗೌರವಗಳಿಂದ ಸರಕಾರಿ ಕರ್ತವ್ಯ ನಿರ್ವಹಿಸಲು ತೊಂದರೆ ಉಂಟಾಗಿದ್ದು, ತಪ್ಪಿತಸ್ಥರಾದ ಶಾಸಕ ಹರೀಶ್ ಪೂಂಜಾ ಹಾಗೂ ಮತ್ತೀತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಅರಣ್ಯ ಇಲಾಖೆಯ ಕರ್ತವ್ಯವಾದ ಅರಣ್ಯ ರಕ್ಷಣೆಯನ್ನು ನಿರ್ಭಯವಾಗಿ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿ ಅವರು ಸಂಘವನ್ನು ವಿನಂತಿಸಿರುತ್ತಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಮೇಲ್ಕಾಣಿಸಿದ ಅಂಶಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾ/ಸಿಬ್ಬಂದಿಗಳಿಗೆ ಕಾನೂನು ಬದ್ಧ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಶಾಸಕ ಹರೀಶ್ ಪೂಂಜಾ ಹಾಗೂ ಮತ್ತೀತರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಅರಣ್ಯ ಇಲಾಕೆಯ ಅಧಿಕಾರಿ, ಸಿಬ್ಬಂದಿಗಳಿಗೆ ಸರಕಾರಿ ಕರ್ತವ್ಯ ನಿರ್ವಹಿಸಲು ಸೂಕ್ತ ರಕ್ಷಣೆ ಒದಗಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ಪುತ್ತೂರು ತಾಲೂಕು ಶಾಖೆಯು ಮನವಿ ಮಾಡುತ್ತಿದೆ. ಮನವಿ ಸ್ವೀಕರಿಸಿದ ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರು ಮುಂದಿನ ಕ್ರಮ ಕೈಗೊಳ್ಳಲಾಗುವದೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಶಿವಾನಂದ ಆಚಾರ್ಯ, ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ ಬಿ, ಹಿರಿಯ ಉಪಾಧ್ಯಕ್ಷ ಹರಿಪ್ರಕಾಶ್ ಬೈಲಾಡಿ, ಗೌರವಾಧ್ಯಕ್ಷ ರಾಮಚಂದ್ರ, ಉಪ ವಲಯ ಅರಣ್ಯಾಧಿಕಾರಿಗಳಾದ ಅಶೋಕ ಹಾಗೂ ಜೆರಾಲ್ಡ್ ಡಿ’ಸೋಜ, ಬೀಟ್ ಫಾರೆಸ್ಟರ್ ಜಗದೀಶ್, ಉಪ ತಹಶೀಲ್ದಾರ್ ಸುಲೋಚನಾ, ಪದ್ಮಾವತಿ, ಕವಿತಾ ಸಹಿತ ಹಲವರು ಉಪಸ್ಥಿತರಿದ್ದರು.