ಪಾಟ್ರಕೋಡಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮ

0

ಪುತ್ತೂರಿನಲ್ಲಿ 3000 ಉದ್ಯೋಗ ಸೃಷ್ಟಿ ಮಾಡುವ ಯೋಚನೆಯಿದೆ: ಅಶೋಕ್ ರೈ


ಪುತ್ತೂರು: ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ 2 ರಿಂದ 3 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಹೊಂದಿದ್ದು ಇದಕ್ಕಾಗಿ ಹಲವು ಯೋಜನೆಗಳನ್ನು ಇಲ್ಲಿ ಜಾರಿ ಮಾಡುವ ಆಲೋಚನೆಯಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಪಾಟ್ರಕೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.


ಬಹುಗ್ರಾಮ ಕುಡಿಯುವ ನೀರಿನ ಯೋಜನಯಡಿ ಕೆದಿಲ ಗ್ರಾಮದಲ್ಲಿ 3 ಕೋಟಿ ಲೀಟರ್ ಸಾಮರ್ಥ್ಯದ ಬೃಹತ್ ನೀರಿನ ಟ್ಯಾಂಕ್ ನಿರ್ಮಾಣವಾಗಲಿದೆ. ಈ ಯೋಜನೆಯಡಿ ಸುಮಾರು 500ಕ್ಕೂ ಮಿಕ್ಕಿ ಮಂದಿ ಸ್ಥಳೀಯರಿಗೆ ಉದ್ಯೋಗ ಲಭಿಸಲಿದೆ,ಕೊಯಿಲ ಜಾನುವಾರು ಕೇಂದ್ರಕ್ಕೆ ಪುನಶ್ಚೇತನ ದೊರೆಯಲಿದ್ದು ಅಲ್ಲಿ ಸುಮಾರು 700 ಮಂದಿಗೆ ಉದ್ಯೋಗ ಮತ್ತು ಕೆಎಂಎಫ್ ನ್ನು ಪುತ್ತೂರಿಗೆ ಸ್ಥಳಾಂತರ ಮಾಡುವುದರಿಂದ ಸುಮಾರು 1000 ಮಂದಿಗೆ ಉದ್ಯೋಗ ಲಭಿಸಲಿದೆ. ಸ್ಥಳೀಯರನ್ನೇ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಶಾಸಕರು ಹೇಳಿದರು.

ಪುತ್ತೂರಿಗೆ ಹಣ ಬಂದು ಬೀಳಬೇಕು
ಪುತ್ತೂರು ಅಭಿವೃದ್ದಿಯಾಗಬೇಕಾದರೆ ಒಂದಷ್ಟು ಹಣ ಇಲ್ಲಿ ಬೀಳಬೇಕು, ಉದ್ಯಮಗಳು ಆರಂಭವಾದರೆ ಮಾತ್ರ ಇಲ್ಲಿ ಎಲ್ಲರಿಗೂ ವ್ಯಾಪಾರ , ವ್ಯವಹಾರವಾಗುತ್ತದೆ ಇಲ್ಲದೇ ಹೋದರೆ ಕೇವಲ ಅಡಿಕೆ ಮಾರಿದ ಹಣ ಮಾತ್ರ ಇಲ್ಲಿ ಚಲಾವಣೆಯಲ್ಲಿರುತ್ತದೆ ಎಂದು ಹೇಳಿದ ಶಾಸಕರು ಪುತ್ತೂರಿನ ಯುವಕ, ಯುವತಿಯರಿಗೆ ಉದ್ಯೋಗ ಲಭಿಸಿದರೆ ಅವರ ಕುಟುಂಬಕ್ಕೂ ಆಧಾರವಾಗುತ್ತದೆ ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಯಾವುದೇ ಉದ್ಯಮ ಆರಂಭವಾಗುವುದಾದರೂ ಅದಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ಹೇಳಿದರು.ಪುತ್ತೂರಿನ ಜನತೆ ನೆಮ್ಮದಿಯಿಂದ ಇರಬೇಕೆಂಬುದೇ ನನ್ನ ಆಶಯವಾಗಿದೆ ಎಂದು ಶಾಸಕರು ಹೇಳಿದರು.

ಶಾಸಕರಿಗೆ ಇಷ್ಟು ಗಟ್ಸ್ ಇದೆ ಎಂದು ಗೊತ್ತೇ ಇರಲಿಲ್ಲ: ಹೇಮನಾಥ ಶೆಟ್ಟಿ
ಚುನಾವಣೆ ಸಂದರ್ಬದಲ್ಲಿ ಅಶೋಕ್ ರೈ ಬಗ್ಗೆ ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು, ಶ್ರೀಮಂತ ವ್ಯಕ್ತಿ ಅದು ಹೇಗೆ ಬಡವರ ಕೆಲಸ ಮಾಡುತ್ತಾರೆ, ಬಡವರು ಇವರ ಬಳಿ ಹೇಗೆ ಹೋಗಬಹುದು ಅವರ ಸ್ಟೈಲೇ ಬೇರೆ ಇರಬಹುದು ಎಂದೆಲ್ಲಾ ಹೇಳಿದ್ದರು. ಆದರೆ ಶಾಸಕರಾದ ಬಳಿಕ ಕಟ್ಟಕಡೇಯ ಬಡ ವ್ಯಕ್ತಿ ಕೂಡಾ ಅವರ ಛೇಂಬರಿನಲ್ಲಿ ಕುಳಿತು ಸಮಸ್ಯೆ ಹೇಳುತ್ತಿದ್ದು, ಬಡವರ ಕೆಲಸ ಮಾಡುತ್ತಿದ್ದು ಅಶೋಕ್ ರೈಯವರಿಗೆ ಇಷ್ಟೊಂದು ಗಟ್ಸ್ ಇದೆ ಎಂದು ಶಾಸಕರಾದ ಬಳಿಕವೇ ಗೊತ್ತಾಗಿದ್ದು ಎಂದು ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಹೇಳಿದರು. ಕುಡಿಯುವ ನೀರಿನ ಸಂಪರ್ಕಕ್ಕೆ ದಾಖಲೆ ಕೊಡಿ ಎಂದು ಕೇಳುವ ಪಂಚಾಯತ್ ಅಧಿಕಾರಿಗಳ ಬೆಂಡೆತ್ತಿದ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಕೆದಿಲ ಕಾಂಗ್ರೆಸ್ ಭದ್ರಕೋಟೆ: ಡಾ. ರಾಜಾರಾಂ
ಕೆದಿಲ ಗ್ರಾಮದ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದೆ, ಕಳೇದ ಚುನಾವಣೆಯಲ್ಲಿ 1000 ಮತಗಳ ಲೀಡನ್ನು ತಂದುಕೊಟ್ಟಿದೆ, ಜಾತ್ಯಾತೀತ ಮನೋಭಾವದ ಕೆದಿಲ ಗ್ರಾಮಸ್ಥರನ್ನು ಅಭಿನಂದಿಸುವುದಾಗಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಹೇಳಿದರು. ಕೆದಿಲ ಗ್ರಾಮಕ್ಕೆ ಅನುದಾನದಲ್ಲಿ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕರು ಹೇಳಿದ್ದಾರೆ. ಈಗಾಗಲೇ ಹಲವು ಕಾಮಗಾರಿಗಗಳ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ, ಹಿಂದೆಂದೂ ಕಾಣದ ರೀತಿಯಲ್ಲಿ ಈ ಗ್ರಾಮ ಅಭಿವೃದ್ದಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಕೆದಿಲ ಗ್ರಾಮಕ್ಕೆ ಶಾಸಕರು ವಿಶೇಷ ಒತ್ತುಕೊಡಬೇಕು: ಫಾರೂಕ್ ಬಾಯಬ್ಬೆ
ಕೆದಿಲದಲ್ಲಿ ಜಾತ್ಯಾತೀತ ಮನಸ್ಸುಗಳು ಒಂದಾಗಿದೆ, ಈ ಕಾರಣಕ್ಕೆ ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ಬೆಂಬಲ ದೊರಕಿದೆ. ನೂತನ ಶಾಸಕರು ಕೆದಿಲ ಗ್ರಾಮಕ್ಕೆ ವಿಶೇಷ ಒತ್ತು ನೀಡಿ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ ಆಗ್ರಹಿಸಿದರು. ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಶಾಸಕರ ಬಗ್ಗೆ ನಮಗೆ ಪೂರ್ಣ ವಿಶ್ವಾಸವಿದ್ದು ಈಗಾಗಲೇ ಹಲವು ಕಾಮಗಾರಿಗಳ ಬಗ್ಗೆ ಶಾಸಕರಲ್ಲಿ ಮಾತನಾಡಿದ್ದೇವೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ ಎಂಬುದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಕೆದಿಲ ಗ್ರಾಮ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.


ವೇದಿಕೆಯಲ್ಲಿ ಕೆದಿಲ ವಲಯ ತಾಪಂ ಮಾಜಿ ಸದಸ್ಯ ಆದಂಕುಂಞಿ ಹಾಜಿ, ಬ್ಲಾಕ್ ಉಪಾಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ವಲಯ ಅಧ್ಯಕ್ಷರಾದ ಪ್ರವೀಣ್ ಚಂದ್ರ ಶೆಟ್ಟಿ, ಕೆದಿಲ ಗ್ರಾಪಂ ಅಧ್ಯಕ್ಷ ಹರೀಶ್ ಗ್ರಾಪಂ ಸದಸ್ಯರುಗಳಾದ ಬೀಪಾತುಮ್ಮ, ಸುಲೈಮಾನ್, ಹಬೀಬ್ ಮುಹ್ಸಿನ್, ಉನೈಸ್ ಗಡಿಯಾರ್, ಅಝೀಝ್ ಸತ್ತಿಕ್ಕಲ್, ಕೆದಿಲ ಸೊಸೈಟಿ ನಿರ್ದೆಶಕ ಜಿ ಮಹಮ್ಮದ್, ಪಾಟ್ರಕೋಡಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.
ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷರಾದ ಫಾರೂಕ್ ಬಾಯಬ್ಬೆ ಸ್ವಾಗತಿಸಿದರು. ಬೂತ್ ಅಧ್ಯಕ್ಷ ರಝಾಕ್ ವಂದಿಸಿದರು. ಶರೀಫ್ ಕೆ ಎಸ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here