ಅಂಬಿಕಾ ವಿದ್ಯಾಲಯದಲ್ಲಿ ಸಂಪನ್ನಗೊಂಡ ಮೂರು ದಿನಗಳ ಸಾಂಸ್ಕೃತಿಕ ವೈಭವ – ಶುದ್ಧ ಭಾರತೀಯ ಕಲಾಪ್ರಕಾರಗಳಿಂದ ಮನಸೂರೆಗೊಂಡ ವಿದ್ಯಾರ್ಥಿಗಳು

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನವರಾತ್ರಿ ಪ್ರಯುಕ್ತ ಆಯೋಜಿಸಲಾದ ಮೂರು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಅ.16ರಂದು ಉದ್ಘಾಟನೆಗೊಂಡ ಸಾಂಸ್ಕೃತಿಕ ವೈಭವ ಅ.18ರವರೆಗೆ ಪ್ರತಿದಿನ ಸಂಜೆ 4ರಿಂದ 6ರವರೆಗೆ ನಡೆಯಿತು. ಶುದ್ಧ ಭಾರತೀಯ ಕಲಾಪ್ರಕಾರಗಳಿಗೆ ವೇದಿಕೆಯನ್ನೊದಗಿಸುವ ನೆಲೆಯಲ್ಲಿ ಆಯೋಜನೆಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪುಟಾಣಿ ಮಕ್ಕಳಿಂದ ತೊಡಗಿ ಪದವಿಹಂತದ ವಿದ್ಯಾರ್ಥಿಗಳವರೆಗೆ ವೇದಿಕೆ ಮುಕ್ತವಾಗಿ ತೆರೆದುಕೊಂಡಿತ್ತು.
ಅಂಬಿಕಾ ವಿದ್ಯಾಲಯದ ಪುಟ್ಟ ಪುಟ್ಟ ಮಕ್ಕಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಜನಮನ ಸೂರೈಗೈದರು. ಐಗಿರಿ ನಂದಿನಿ ನಂದಿತ ಮೇದಿನಿ, ಕನಕದಾಸರಿಗೆ ತೋರಿದ ರೂಪ, ಕೊಡಚಾದ್ರಿಯ ವನಸಿರಿಯ ಮಡಿಲಲ್ಲಿ ಮನೆಮಾಡಿದ, ಶ್ರೀ ಗಣೇಶ ಶಿವನಕುಮಾರ, ನೋಡು ನೋಡು ಕಣ್ಣಾರೆ ನಿಂತಿಹಳು ನಗುನಗುತ ಚಾಮುಂಡಿ ನಿಂತಿಹಳು, ಆವ ಕುಲವನರಿಯಲಾಗದು ಗೋವ ಕಾಯುವ ಗೊಲ್ಲನಂತೆ, ಭುವನೇಶ್ವರಿಯ ನೆನೆ ಮಾನಸವೇ, ಮಾಮವತು ಶ್ರೀ ಸರಸ್ವತಿ, ಪಾಲಿಸೆಮ್ಮ ಮುದ್ದು ಶಾರದೆ ಮೊದಲಾದ ಹಾಡುಗಳು ಎಳೆಯ ಮಕ್ಕಳ ಕಂಠದಿಂದ ನೆರೆದವರ ಹೃದಯವನ್ನು ತಲಪಿತು.
ಇಷ್ಟಲ್ಲದೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು ಸ್ಯಾಕ್ಸೋಫೋನ್, ಪಿಟೀಲು, ಕೀಬೋರ್ಡ್, ಮದ್ದಳೆ, ಕೊಳಲು ಮೊದಲಾದ ಪರಿಕರಗಳನ್ನು ನುಡಿಸಿ ಅಚ್ಚರಿ ಮೂಡಿಸಿದರು. ಎಳೆಯ ಮಕ್ಕಳಲ್ಲಿನ ಪ್ರತಿಭೆಗೆ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆ ಸಾಕ್ಷಿಯಾಯಿತು. ಅನೇಕ ಮಕ್ಕಳು ತಾವು ಕಲಿಯುತ್ತಿರುವ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು. ಈ ಮಧ್ಯೆ ಒಂದನೇ, ಎರಡನೇ ತರಗತಿಯ ಎಳೆಯ ಮಕ್ಕಳನ್ನೂ ಕಾರ್ಯಕ್ರಮ ನೀಡುವಂತೆ ತಯಾರು ಮಾಡಿ ವೇದಿಕೆಗೆ ಏರಿಸಿದ ಹೆತ್ತವರ ಪ್ರಯತ್ನ, ಹಾಗೂ ಸಂಸ್ಥೆಯಲ್ಲಿ ಸಾಂಸ್ಕೃತಿಕ ವಿಷಯಗಳಿಗೆ ದೊರಕುತ್ತಿರುವ ಪ್ರೋತ್ಸಾಹ, ತರಬೇತಿಗಳಿಗೆ ಎಲ್ಲರ ಶ್ಲಾಘನೆ ವ್ಯಕ್ತವಾಯಿತು.
ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳಂತೂ ತಮ್ಮ ಪ್ರತಿಭಾ ಅನಾವರಣದ ಮೂಲಕ ಸಾಂಸ್ಕೃತಿಕ ಸಾಮರ್ಥ್ಯದ ಪೂರ್ಣ ಪ್ರದರ್ಶನವನ್ನಿತ್ತರು. ಸಂಗೀತ ಸುಸ್ವರಗಳು ಅಂಬಿಕಾ ಸಂಸ್ಥೆಯ ಸಾಂಸ್ಕೃತಿಕ ಪರಿಸರವನ್ನು ವಿಜೃಂಭಿಸುವಂತೆ ಮಾಡಿದವು. ಅನೇಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭರತನಾಟ್ಯದ ಮೂಲಕ ತಮ್ಮ ನಾಟ್ಯಪ್ರತಿಭೆಯನ್ನು ಅನಾವರಣಗೊಳಿಸಿದರು. ಹೆಚ್ಚಿನ ತಯಾರಿಗೆ ಸಮಯ ದೊರಕದಿದ್ದರೂ ಸ್ಪಷ್ಟ ಹೆಜ್ಜೆಗಳೊಂದಿಗೆ, ಸಮರ್ಥ ಭಾವಾಭಿವ್ಯಕ್ತಿಯ ಮೂಲಕ ಸಾಕಾರಗೊಂಡ ನಾಟ್ಯ ಕಾರ್ಯಕ್ರಮ ಮಕ್ಕಳ ಮೇಲೆ ಭರವಸೆ ಹೆಚ್ಚಿಸುವಂತೆ ಮಾಡಿತು. ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಭಜನೆ ಭಾವಪೂರ್ಣವಾಗಿ ಮೂಡಿಬಂತು.
“ನಮ್ಮ ವಿದ್ಯಾರ್ಥಿಗಳು ಸಾಂಸ್ಕೃತಿಕ ರಾಯಭಾರಿಗಳಾಗಿ ಬೆಳೆಯಬೇಕು. ನಮ್ಮ ದೇಶದ ಕಲೆಯನ್ನು ಪ್ರಪಂಚದಾದ್ಯಂತ ಪಸರಿಸುವ ಸಮರ್ಥ ವ್ಯಕ್ತಿಗಳಾಗಿ ಅಂಬಿಕಾದ ಮಕ್ಕಳು ಮೂಡಿಬರಬೇಕೆಂಬುದೇ ನಮ್ಮ ಆಶಯ. ನಮ್ಮಲ್ಲಿರುವ ಕಲಾಶ್ರೀಮಂತಿಕೆಯನ್ನು ಜಗದಗಲ ಪಸರಿಸಿ, ಪ್ರಪಂಚವೇ ಭಾರತಡೆಗೆ ಅಚ್ಚರಿಯಿಂದ ತಿರುಗಿ ನೋಡುವಂತಾಗಬೇಕು ಎಂಬುದು ನಮ್ಮ ಕನಸು” – ಇದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅವರ ಮಾತು.
ಒಟ್ಟಿನಲ್ಲಿ ಮೂರು ದಿನಗಳ ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸೊಗಸಾಗಿ, ಶಿಸ್ತುಬದ್ಧವಾಗಿ ನಡೆದದ್ದಲ್ಲದೆ ಶುದ್ಧ ಭಾರತೀಯ ಕಲಾಪ್ರಪಂಚವನ್ನು ಸಾರಿತೋರಿಸುವಲ್ಲಿ ಸಫಲವಾಯಿತು. ಮೂರೂ ದಿನಗಳಲ್ಲಿ ಕಾರ್ಯಕ್ರಮದ ತರುವಾಯ ಶ್ರೀ ಲಲಿತಾಂಬಿಕಾ ದೇವಿಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here