*ಮಾತೃ ಶಕ್ತಿ ಜಾಗೃತವಾಗಬೇಕು – ಮನುಷ್ಯ ಜೀವನದಲ್ಲಿ ಸಾಧನೆ ಅಗತ್ಯ: ಶ್ರೀ ಮಹಾಬಲೇಶ್ವರ ಸ್ವಾಮೀಜಿ
*ಸಂಸ್ಕಾರ ಅಂತರಂಗದಿಂದ ಬಂದಾಗ ಸುದೃಡ ಸಮಾಜ ನಿರ್ಮಾಣಕ್ಕೆ ಸಾಧ್ಯ: ಬಾಲಕೃಷ್ಣ ರಾವ್
*ಕ್ಷೇತ್ರದ ಹೆಸರು ಹತ್ತೂರಲ್ಲಿ ಪಸರಿಸಲಿ: ರಾಜೇಶ್
ವಿಟ್ಲ: ಮಾತೃ ಶಕ್ತಿ ಜಾಗೃತವಾಗಬೇಕು. ಮನುಷ್ಯ ಜೀವನದಲ್ಲಿ ಸಾಧನೆ ಅಗತ್ಯ. ದೈವ ದೇವರ ಮೇಲೆ ಭಕ್ತಿ ನಂಬಿಕೆ ಅಗತ್ಯ. ಮನುಷ್ಯನಿಗೆ ಹಣ ಭಲಕ್ಕಿಂತ ಗುಣಭಲ ಮುಖ್ಯ. ದೇವರ ಭಕ್ತಿ, ಶಕ್ತಿ ಇಂತಹ ಸಾನಿಧ್ಯಗಳಿಂದ ಸಿಗಲು ಸಾಧ್ಯ. ಸತ್ಯ ಎಂದರೆ ಅದು ಹುತ್ತದಲ್ಲಿರುವ ಹಾವಿನಂತೆ. ನಮ್ಮ ಮನಸ್ಸು ನಿಷ್ಕಲ್ಮಶವಾಗಿದ್ದಲ್ಲಿ ಜೀವನ ಪಾವನವಾಗಲು ಸಾಧ್ಯ.
ಮಾನವ ಮಾಧವನಾಗಲು ಭಗವಂತನನ್ನು ಮನಸ್ಸಿನಲ್ಲಿಟ್ಟು ಪೂಜಿಸುವುದು ಅಗತ್ಯ ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಹೇಳಿದರು.
ಅವರು ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರದಲ್ಲಿ ಅ.20ರಂದು ಚಂಡಿಕಾಹೋಮದ ಸುಸಂದರ್ಭದಲ್ಲಿ ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವರು ಎಂಬ ಸೂತ್ರದ ಅಡಿಯಲ್ಲಿ ನಾವು ಜನ್ಮದ ಕರ್ತವ್ಯ ಮಾಡುತ್ತಿದ್ದೇವೆ. ದೇವರ ಕ್ಷೇತ್ರ ಎಂಬುದು ನಿರಂತರ ಸಂಚರಿಸುವ ರಥ. ಜಗತ್ತು ಎಂಬುದು ಸಂತೆ. ಆದರೆ ಅದರಲ್ಲಿಯೂ ಉತ್ತಮವೆನ್ನುವುದನ್ನು ನಾವು ಆಯ್ಕೆ ಮಾಡಬೇಕಾಗಿದೆ. ಹೃದಯದಲ್ಲಿ ಸದ್ವಿಚಾರವನ್ನು ಬೆಳೆಸಿಕೊಳ್ಳಿ ಎಂದರು.
ಕನ್ಯಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಬಾಲಕೃಷ್ಣ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಕಾರ ಅಂತರಂಗದಿಂದ ಬಂದಾಗ ಸುದೃಡ ಸಮಾಜ ನಿರ್ಮಾಣಕ್ಕೆ ಸಾಧ್ಯ. ಕಣಿಯೂರು ಕ್ಷೇತ್ರದ ದೈವಿಕ ಶಕ್ತಿ ನಿತ್ಯನಿರಂತರ. ಸರಳ ಸಜ್ಜನಿಕೆಯ ವ್ಯಕ್ತಿ ಕಣಿಯೂರು ಶ್ರೀಗಳು. ಮನಸ್ಸಿನ ಕಲ್ಮಶವನ್ನು ದೂರಮಾಡುವ ಕೆಲಸವಾಗಬೇಕು. ಪೂಜೆ ನಿರಂತರವಾಗಿ ನಡೆಯುತ್ತಿರಬೇಕು. ಸಂಸ್ಕಾರ ಅಂತರಂಗದಲ್ಲಿ ಧರಿಸುವ ಬಟ್ಟೆಯಾಗಿದೆ. ನಮ್ಮೊಳಗಿರುವ ಸಾತ್ವಿಕ ಗುಣಗಳು ಬದುಕಿನಲ್ಲಿ ಅಳವಡಿಸುವುದು ಅತೀ ಮುಖ್ಯ. ಪರಿಶುದ್ಧ ಅನುಷ್ಠಾನಕ್ಕೆ ನಿಶ್ಚಿತ ಫಲವಿದೆ ಎಂದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ರಾಜೇಶ್ ರವರು ಮಾತನಾಡಿ ಕ್ಷೇತ್ರದ ದೇವಿಯ ಶಕ್ತಿ ಅಪಾರ. ಕ್ಷೇತ್ರದ ಹೆಸರು ಹತ್ತೂರಲ್ಲಿ ಪಸರಿಸಲಿ.ಕ್ಷೇತ್ರದ ಕಾರಣಿಕಕ್ಕೆ ಇಲ್ಲಿ ನಡೆದ ಬ್ರಹ್ಮಕಲಶದ ಸಂದರ್ಭದಲ್ಲಿ ಇಲ್ಲಿ ಸೇರಿದ ಜನಸಾಗರವೇ ಸಾಕ್ಷಿ ಎಂದರು.
ದೇಲಂತಬೆಟ್ಟು ಶ್ರೀ ವಿಷ್ಟುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಮನೋಜ್ ಕುಮಾರ್ ಬನಾರಿ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಜೇನು ಕೃಷಿಕ ಸುಧಾಕರ ಪೂಜಾರಿ ಕೇಪು, ವಿಟ್ಲದ ಶೆಲ್ಟರ್ ಅಸೋಸಿಯೇಶನ ನ ಸಿವಿಲ್ ಇಂಜಿನಿಯರ್ ಸಂತೋಷ್ ಶೆಟ್ಟಿ ಪೆಲ್ತಡ್ಕ,ಉಳ್ಳಾಲ್ತಿ ರೋಡ್ ಲೈನ್ಸ್ ನ ಹರೀಶ್ ಪೂಜಾರಿ ಬಾಕಿಲ, ಉದಯರಮಣ ಭಟ್ ಮೊದಲಾದವರು ವೆದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಚಾಮುಂಡೇಶ್ವರೀ ದೇವಿ ಟ್ರಸ್ಟ್ ನ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಸ್ವಾಗತಿಸಿದರು. ಹರ್ಷಿಕಾ ಕಣಿಯೂರು ಪ್ರಾರ್ಥಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ನ ಕಾರ್ಯದರ್ಶಿ ಚಂದ್ರಶೇಖರ ಕಣಿಯೂರು ವಂದಿಸಿದರು.
ವೈದ್ಧಿಕ ಕಾರ್ಯಕ್ರಮ:
ಬೆಳಗ್ಗೆ ಚಂಡಿಕಾಯಾಗ ಆರಂಭಗೊಂಡಿತು. ಮಧ್ಯಾಹ್ನ ಯಾಗದ ಪೂರ್ಣಾಹುತಿ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆದು, ಅನ್ನ ಸಂತರ್ಪಣೆ ನಡೆಯಿತು.