ಮುಂದಿನ ಆರ್ಥಿಕ ವರ್ಷದ ಕಾಮಗಾರಿ ಬೇಡಿಕೆಯನ್ನು ಗ್ರಾ.ಪಂ.ಗೆ ಸಲ್ಲಿಸಿ: ಭವಾನಿ ಶಂಕರ್ ಯನ್.
ಕಡಬ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪ್ರತಿ ಗ್ರಾ.ಪಂ.ನಲ್ಲಿ ನವೆಂಬರ್ ತಿಂಗಳವರೆಗೆ ʼಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ʼ ಅಭಿಯಾನವು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಕೈಗೆತ್ತಿಕೊಳ್ಳುವ ವೈಯಕ್ತಿಕ ಹಾಗೂ ಸಾಮುದಾಯಿಕ ಕಾಮಗಾರಿಗಳನ್ನು ಕ್ರೋಡೀಕರಿಸಿ ಕ್ರಿಯಾ ಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಬೇಕಿದೆ. ಹಾಗಾಗಿ ಮುಂದಿನ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿ ಬೇಡಿಕೆಯನ್ನು ಗ್ರಾ.ಪಂ.ಗೆ ಸಲ್ಲಿಸಬೇಕು ಎಂದು ಕಡಬ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಯನ್. ಹೇಳಿದರು.
ಅವರು ಅ.20 ರಂದು ಕುಟ್ರುಪಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯು ಗ್ರಾಮ ಪಂಚಾಯತ್‌ಗಳಿಗೆ ಇರುವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದರಲ್ಲಿ ಗ್ರಾ.ಪಂ.ಗೆ ಎಷ್ಟು ಅನುದಾನ ಬಳಸಿಕೊಳ್ಳಲು ಸಾಧ್ಯವಾಗುತ್ತದೆ ಅಷ್ಟನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ನರೇಗಾ ಮಾಹಿತಿ, ಶಿಕ್ಷಣ, ಸಂವಹನ ಸಂಯೋಜಕ ಭರತ್ ರಾಜ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ 11 ವರ್ಗಗಳಿಗೆ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಅಲ್ಲದೆ ತಮ್ಮ ಜಮೀನಿನಲ್ಲಿ ಮಾಡಬಹುದಾದ ಕಾಮಗಾರಿಗಳಿಗೆ ನರೇಗಾ ಅನುದಾನ ನೀಡುತ್ತಿದೆ ಎಂದರು. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಮಾಡುವವರು ಆರಂಭದಲ್ಲಿಯೇ ನಾಮಫಲಕವನ್ನು ಅಳವಡಿಸುವುದು ಕಡ್ಡಾಯವಾಗಿದೆ. ಹಾಗೂ ಉದ್ಯೋಗ ಚೀಟಿ ಹೊಂದಿದ ಎಲ್ಲಾ ಫಲಾನುಭವಿಗಳು ಆಧಾರ್ ಕಾರ್ಡ್ ಗೆ ಬ್ಯಾಂಕ್ ಎಕೌಂಟ್ ಅನ್ನು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯ ಗ್ರಾಮೀಣ ಪ್ರದೇಶದ ಜನರಿಗಷ್ಟೇ ಸೀಮಿತವಾಗಿರುವುದರಿಂದ ಸಾಕಷ್ಟು ತೋಟಗಾರಿಕೆ, ಪಶುಸಂಗೋಪನೆಗೆ ಅನುದಾನ ನೀಡುತ್ತಿರುವುದರಿಂದ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನದ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಯಿತು.
ಪಂಚಾಯತ್ ಅಧ್ಯಕ್ಷೆ ಸುಮನ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಉಪಾಧ್ಯಕ್ಷೆ ಯಶೋದಾ, ಗ್ರಾಮ ಪಂಚಾಯತ್ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ ಕಾರ್ಯಕ್ರಮ ನಿರೂಪಿಸಿದರು.