ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ | ಭೂಗತ ಪಾತಕಿ ರವಿಪೂಜಾರಿ ಸಹಚರ, ರಾಜಧಾನಿ ಜುವೆಲ್ಲರ್ಸ್, ಸಂಜೀವ ಶೆಟ್ಟಿ ಮಳಿಗೆ ಶೂಟೌಟ್ ಪ್ರಕರಣದ ಆರೋಪಿ ಅಲಿ ಮುನ್ನಾ ಅರೆಸ್ಟ್

0

ಪುತ್ತೂರು: ಭೂಗತ ಪಾತಕಿಗಳಾದ ರವಿ ಪೂಜಾರಿ ಮತ್ತು ಕಲಿ ಯೋಗೇಶನ ಸಹಚರ, ಜಿಲ್ಲೆಯ ಹಲವು ಠಾಣೆಗಳಲ್ಲಿ ಬಂಧನ ವಾರಂಟ್ ಎದುರಿಸುತ್ತಿರುವ ನಟೋರಿಯಸ್ ಶಾರ್ಪ್ ಶೂಟರ್ ಕೇರಳದ ಮಂಜೇಶ್ವರ ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾನನ್ನು ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಬಂಧಿಸಿದೆ.
ನಟೋರಿಯಸ್ ಶಾರ್ಪ್ ಶೂಟರ್ ಹನೀಫ್ ಯಾನೆ ಅಲಿ ಮುನ್ನಾ ಭೂಗತ ಪಾತಕಿಗಳಾದ ರವಿ ಪೂಜಾರಿ ಮತ್ತು ಕಲಿ ಯೋಗೇಶನ ಕುಕೃತ್ಯಗಳಿಗೆ ಕರಾವಳಿಯ ಪ್ರತಿನಿಧಿಯಾಗಿದ್ದ. ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣದಲ್ಲಿ ರಾಜ್ಯದ ಅನೇಕ ಠಾಣೆಗಳಿಂದ ಬಂಧನ ವಾರಂಟ್ ಎದುರಿಸುತ್ತಿದ್ದ. ಈತನ ವಿರುದ್ಧ ಕೊಣಾಜೆ, ಮಂಗಳೂರು ಉತ್ತರ, ಪುತ್ತೂರು, ಬರ್ಕೆ, ವಿಟ್ಲ ಉಳ್ಳಾಲ, ಬೆಂಗಳೂರು ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣಗಳಿವೆ.
2010 ಮತ್ತು 2013ರಲ್ಲಿ ಕಾಸರಗೋಡು ಜಿಲ್ಲೆಯ ಬೇವಿಂಜ ಪಿಡಬ್ಲ್ಯುಡಿ ಗುತ್ತಿಗೆದಾರರ ಶೂಟೌಟ್ ಪ್ರಕರಣ, ಮಂಜೇಶ್ವರದಲ್ಲಿ ಕಳ್ಳತನ,ಕುಂಬಳೆ ಹಾಗೂ ವಿದ್ಯಾನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಸಂಜೀವ ಶೆಟ್ಟಿ ಸಿಲ್ಕ್ ಮಳಿಗೆ ಮತ್ತು ಪುತ್ತೂರು ರಾಜಧಾನಿ ಜ್ಯುವೆಲ್ಲರ್ಸ್ ನಲ್ಲಿ ಈತ ನಡೆಸಿದ ಶೂಟೌಟ್‌ ಪ್ರಕರಣ ಭಾರೀ ಸದ್ದು ಮಾಡಿತ್ತು.
ಕರ್ನಾಟಕದಲ್ಲಿ ರವಿ ಪೂಜಾರಿಯ ಅಂಡರ್ ವರ್ಲ್ಡ್ ಮಾಫಿಯಾವನ್ನು ಅಲಿ ಮುನ್ನಾ ಮತ್ತು ಮನೀಷ್ ಕಂಟ್ರೋಲ್ ಮಾಡುತ್ತಿದ್ದರು. ಕರಾವಳಿಯ ಭೂಗತ ವ್ಯವಹಾರವನ್ನು ಅಲಿ ಮುನ್ನಾನೇ ನಿರ್ವಹಿಸುತ್ತಿದ್ದ. ಕಾರ್ಕಳದ ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿ ಕೋಡಿಕೆರೆ ಮನೋಜ್ ಗ್ಯಾಂಗಿನಿಂದ ಬೆಂಗಳೂರಲ್ಲಿ ಮನೀಷ್ ಕೊಲೆಯಾಗಿದ್ದ. ಆಪ್ತ ಸಹಚರ ಮನೀಷ್‌ ಕೊಲೆಯಾದ ನಂತರ ಅಲಿ ಮುನ್ನಾ ಮುಂಬೈ ಮತ್ತು ಬೆಂಗಳೂರಲ್ಲಿ ತಲೆಮರೆಸಿಕೊಂಡಿದ್ದ. ಆನಂತರವೂ ಹಫ್ತಾ ವಸೂಲಿಯಲ್ಲಿ ತೊಡಗಿಸಿದ್ದ ಅಲಿ ಮುನ್ನಾನನ್ನು ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ಮತ್ತು ಕೊಣಾಜೆ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಕೇರಳದಲ್ಲಿ ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here