ಸವಣೂರು: ಶ್ರೀ ಶಾರದಾಂಬಾ ಸೇವಾ ಸಂಘ ಸವಣೂರು ಇದರ ವತಿಯಿಂದ ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಅ.24ರಂದು 19ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಅಂಗವಾಗಿ ಬೆಳಿಗ್ಗೆ ಶಾರದಾ ಪ್ರತಿಷ್ಠೆ ನಡೆಯಿತು. ಅ.24ರಂದು ಬೆಳಿಗ್ಗೆ ಉದಯ ಕುಮಾರ್ ಸರ್ವೆ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಶ್ರೀ ದೇವಿಯ ಪ್ರತಿಷ್ಟೆ, ಗಣಹೋಮ, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭೆ
ಬೆಳಿಗ್ಗೆ 11.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದಾಂಬಾ ಸೇವಾ ಸಂಘದ ಗೌರವಾಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ವಹಿಸುವರು. ಕಡಬ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಭನಾವಿ ಶಂಕರ್ ಎನ್. ಅತಿಥಿಗಳಾಗಿ ಪಾಲ್ಗೊಳ್ಳುವರು. ಸವಣೂರು ಸ.ಉ.ಹಿ.ಪ್ರಾ.ಶಾಲಾ ಮುಖ್ಯಗುರು ನಿಂಗರಾಜು ಕೆ.ಪಿ. ಅವರು ಧಾರ್ಮಿಕ ಉಪನ್ಯಾಸ ನೀಡುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ವಿಷ್ಣು ಕಲಾವಿದರು ಕುಡ್ಲ ಇವರಿಂದ ಗಲಿಗೆದುಲಾಯಿ ಕುಸಲ್ ಪಿದಾಯಿ- ಸಾಂಸ್ಕೃತಿಕ ವೈವಿಧ್ಯ, ನಾರಾಯಣ ಶೆಟ್ಟಿ ಮುಂಡಾಜೆ ಇವರಿಂದ ಜಿಲ್ಲೆಯ ಪ್ರಸಿದ್ದ ಯಕ್ಷಗಾನ ಭಾಗವತರ ಭಾಗವತಿಕೆಯ ಅನಾವರಣ ನಡೆಯಲಿದೆ. ಸಂಜೆ 4.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಶ್ರೀ ಶಾರದಾ ಮೂರ್ತಿಯ ವಿಜೃಂಭಣೆಯ ಶೋಭಾಯಾತ್ರೆಯು ಮುಖ್ಯ ರಸ್ತೆಯಲ್ಲಿ ಸಾಗಿ ಸರ್ವೆ ಗೌರಿ ಹೊಳೆಯಲ್ಲಿ ಶ್ರೀಶಾರದಾ ಮೂರ್ತಿಯ ಜಲಸ್ಥಂಬನ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು, ಅಧ್ಯಕ್ಷ ವಸಂತ ರೈ ಸೊರಕೆ, ಕಾರ್ಯದರ್ಶಿ ವೆಂಕಪ್ಪ ಗೌಡ ಅಡೀಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.