ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮಕ್ಕೆ ತೆರೆ

0

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 9 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮಗಳೊಂದಿಗೆ ನಡೆದ ನವರಾತ್ರಿ ಉತ್ಸವಕ್ಕೆ ಅ.24ರ ವಿಜಯದಶಮಿಯಂದು ಮಕ್ಕಳ ಅಕ್ಷರಾಭ್ಯಾಸದೊಂದಿಗೆ ತೆರೆಬಿದ್ದಿದೆ.


ಅ.15ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ನವರಾತ್ರಿ ಉತ್ಸವದ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ಚಾಲನೆ ದೊರೆತ ನವರಾತ್ರಿ ಉತ್ಸವ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ನಿತ್ಯಪೂಜೆ, ದುರ್ಗಾಪೂಜೆ, ಸಾಮೂಹಿಕ ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ನೆರವೇರಿತು. ಈ ವರ್ಷದ ನವರಾತ್ರಿಯಲ್ಲಿ ಪ್ರಥಮ ಬಾರಿಗೆ ಸಪ್ತಶತಿ ಪಾರಾಯಣ ಹಾಗೂ ವಿಶೇಷವಾಗಿ ದೇವಳದ ವತಿಯಿಂದ ನಿರ್ಮಾಣಗೊಂಡ ಚಿನ್ನದ ಸರವು ದೇವಿಗೆ ಸಮರ್ಪಣೆಗೊಂಡಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಸುಮಾರು 9000ಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದ್ದಾರೆ.

ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ:
ನವರಾತ್ರಿಯಲ್ಲಿ ವಿಶೇಷವಾಗಿ ಅ.22ರಂದು ಸಂಜೆ ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ, ಅ.23ರಂದು ಚಂಡಿಕಾ ಯಾಗ, ಆಯುಧ ಪೂಜೆಗಳು ನೆರವೇರಿತು. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ದೇವಿಯ ಪ್ರೀತ್ಯಾರ್ಥವಾಗಿ ಪ್ರತಿದಿನ ಸಂಜೆ ಹೆಸರಾಂತ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ದೇವಿಗೆ ಸೇವಾರೂಪದಲ್ಲಿ ನೀಡಿದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ಭಕ್ತರಲ್ಲಿ ಸಂಭ್ರಮ ಮನೆ ಮಾಡಿತ್ತು.

ಸ್ವಚ್ಚತೆಗೆ ಮೆಚ್ಚುಗೆ:
ಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ನಡೆದ ನವರಾತ್ರಿ ಉತ್ಸವದಲ್ಲಿ ಬೆಳಿಗ್ಗೆಯಿಂದ ರಾತ್ರಿ ತನಕ ದೇವಸ್ಥಾನದ ಪರಿಸರದಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗಿತ್ತು. ಪ್ರತಿದಿನವೂ ಕಾರ್ಯಕ್ರಮ ಮುಗಿದ ಕೂಡಲೇ ಎಲ್ಲೆಡೆ ಸ್ವಚ್ಚತೆ ಮಾಡಲಾಗುತ್ತಿತ್ತು. ಕುಂಜೂರು ವಿಶ್ವ ಯುವ ವೃಂದದ ಯುವಕರ ತಂಡ ಸ್ವಚ್ಚತೆ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಸಹಕರಿಸಿದ್ದು ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಸ್ವಚ್ಚತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಬಜರಂಗದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ತಾ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಎಪಿಎಂಸಿ ಮಾಜಿ ಅಧ್ಯಕ್ಷ ಸಾಜ ಕೃಷ್ಣ ಪ್ರಸಾದ್ ಭಂಡಾರಿ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ಆರ್ಯಾಪು, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಪುತ್ತೂರು ಶಾರದಾ ಭಜನಾ ಮಂದಿರದ ಶಾರದೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳು ಸಹಿತ ವಿವಿಧ ಸಾಮಾಜಿಕ, ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿ ಸಂಭ್ರಮದ ನವರಾತ್ರಿ ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.

LEAVE A REPLY

Please enter your comment!
Please enter your name here