ಪುತ್ತೂರು: 12 ವರ್ಷಗಳ ಹಿಂದೆ ಗೋಳಿತ್ತಡಿಯಲ್ಲಿ ಮಹಿಳೆಯ ಚಿನ್ನದ ಸರ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪುತ್ತೂರು ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
2011 ಫೆ. 4ರಂದು ರಾಮಕುಂಜ ಕುಂಡಾಜೆ ನಿವಾಸಿ ವೆಂಕಟರಮಣ ಕಾರಂತ್ ಅವರ ಮನೆಗೆ ಬಂದ ಅಪರಿಚಿತ ವ್ಯಕ್ತಿ ಬಂಟ್ವಾಳ ಕಾವಳಕಟ್ಟೆಯ ಬಾಲಕೃಷ್ಣ ಯಾನೆ ರವಿ ಎಂಬವರು ಪರಿಚಿತನಂತೆ ಮಾತನಾಡಿ ಅವರ ಪತ್ನಿ ಸುಮತಿಯಲ್ಲಿ ನಿಮ್ಮ ತಂಗಿ ಆತೂರು ಫೈನಾನ್ಸ್‌ನಲ್ಲಿ ಅಡವಿಟ್ಟ ಒಡೆವೆಯ ಪರಿಶೀಲನೆಗೆಂದು ಕರೆದುಕೊಂಡು ಹೋಗಿದ್ದರು. ಹಾಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಗೋಳಿತ್ತಡಿ ನಿರ್ಜನ ಪ್ರದೇಶದಲ್ಲಿ ಬಾಲಕೃಷ್ಣ ಅವರು ಸುಮತಿಯವರನ್ನು ಬೆದರಿಸಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಕುರಿತು ಸುಮತಿ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಪೊಲೀಸರು ಬಂಧಿತ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ಆರೋಪಿ ಪರ ವಕೀಲಾದ ಮಾದವ ಪೂಜಾರಿ, ರಾಕೇಶ್ ಬಲ್ನಾಡು, ಮೋಹಿನಿ ವಾದಿಸಿದರು.