ಪುತ್ತೂರಿನ ಕೀರ್ತಿಗೆ ಹಿರಿಮೆ ತಂದ ಕ್ರೀಡಾಪಟುಗಳು: ಅಶೋಕ್ ರೈ
ಪುತ್ತೂರು: ಪುತ್ತೂರು ತಾಲೂಕಿನ ಕ್ರೀಡಾಪಟುಗಳು ತಮ್ಮ ಪ್ರತಿಭೆಗಳನ್ನು ತೋರ್ಪಡಿಸುವ ಮೂಲಕ ಪುತ್ತೂರಿನ ಕೀರ್ತಿಯನ್ನು ಬೆಳಗಿಸಿದ್ದಾರೆ, ಜಿಲ್ಲಾಮಟ್ಟದಲ್ಲಿ ನಡೆಯುವ ಸ್ಪರ್ದೆಯಲ್ಲೂ ತಮ್ಮ ಶಕ್ತಿಯನ್ನು ತೋರ್ಪಡಿಸುವ ಮೂಲಕ ಮತ್ತಷ್ಟು ಹಿರಿಮೆಯನ್ನು ಹೆಚ್ಚಿಸಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ತಾಪಂ ಸಭಾಂಗಣದಲ್ಲಿ ಅ.29 ರಂದು ಜಿಲ್ಲಾಮಟ್ಟದ ಅಥ್ಲೆಟಿಕ್‌ಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದರು.
ಕ್ರೀಡಾಪಟುಗಳಿಗೆ ಸರಕಾರದಿಂದ ಸಂಪೂರ್ಣ ಸಹಕಾರವಿದೆ, ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರತಿಭೆಗೆ ವೇದಿಕೆ ಮತ್ತು ಅವಕಾಶವನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದೆ. ಕ್ರೀಡೆಯಲ್ಲಿ ಗೆಲ್ಲಲೇಬೇಕು ಎಂಬ ಹಠ ಪ್ರತೀಯೊಬ್ಬ ಕ್ರೀಡಾಪಟುವಿನಲ್ಲಿ ಇರಬೇಕು. ಸಾಧನೆ ಮಾಡಬೇಕೆಂಬ ಹಂಬಲ ಇದ್ದರೆ ತನ್ನಿಂತಾನೆ ನಮಗೆ ಅದು ಫಲವನ್ನು ತಂದುಕೊಡುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ತಾಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ ತಾಪಂ ವತಿಯಿಂದ ಪ್ರತೀ ವರ್ಷ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ ಮಾಡುವ ಮೂಲಕ ನಾವು ಅವರಿಗೆ ಬೆಂಬಲವನ್ನು ನೀಡುತ್ತಿದ್ದೇವೆ. ಎಲ್ಲಾ ಕ್ರೀಡಾಪಟುಗಳು ತಮ್ಮ ಉತ್ತಮ ಪ್ರದರ್ಶನದ ಮೂಲಕ ಪುತ್ತೂರಿನ ಕೀರ್ತಿಯನ್ನು ಹೆಚ್ಚಿಸಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಸೀತಾರಾಮ ಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ರೈ, ಜಿಲ್ಲಾ ಧೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಾಮಣ್ಣ ಗೌಡ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಸ್ವಾಗತಿಸಿ, ಶಿಕ್ಷಕಿ ಪ್ರವೀಣಾ ರೈ ಕಾರ್ಯಕ್ರಮ ನಿರೂಪಿಸಿದರು.