ಕೆಮ್ಮಿಂಜೆ ದೇವಸ್ಥಾನದಲ್ಲಿ ಜಾತ್ರೋತ್ಸವದ ಪೂರ್ವಭಾವಿ ಸಭೆ – ಪ್ರತಿ ಮನೆಯಿಂದ ಜಾತ್ರಾ ದೇಣಿಗೆ ಸಂಗ್ರಹಕ್ಕೆ ತೀರ್ಮಾನ

0

ಪುತ್ತೂರು: ಇತಿಹಾಸ ಪ್ರಸಿದ್ದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಜಾತ್ರೋತ್ಸವ ಷಷ್ಠಿ ಮಹೋತ್ಸವಕ್ಕೆ ಗ್ರಾಮದ ಪ್ರತಿ ಮನೆಯಿಂದ ಕನಿಷ್ಠ ರೂ.1000 ದೇಣಿಗೆ ನಿಗದಿಪಡಿಸಿ ಸಂಗ್ರಹಿಸುವುದಾಗಿ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯು ಅ.29ರಂದು ದೇವಸ್ಥಾನದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿ ಹಾಗೂ ಕಾರ್ತಿಕ್ ತಂತ್ರಿಗಳ ಮಾರ್ಗದರ್ಶನದಲ್ಲಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು. ಸಭೆಯಲ್ಲಿ ಜಾತ್ರೋತ್ಸವದ ಖರ್ಚು ವೆಚ್ಚಗಳ ಕುರಿತು ಚರ್ಚಿಸುವ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಗ್ರಾಮದ ಪ್ರತಿ ಮನೆಗೆ ಕನಿಷ್ಠ ದೇಣಿಗೆ ನಿಗಧಿಪಡಿಸಿದಂತೆ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಜಾತ್ರೋತ್ಸವಕ್ಕೆ ಗ್ರಾಮದ ಪ್ರತಿ ಮನೆಗಳಿಗೂ ಜಾತ್ರಾ ದೇಣಿಗೆ ನಿಗಧಿಪಡಿಸುವಂತೆ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವು ದೇವಸ್ಥಾನಗಳಲ್ಲಿ ಈ ಪದ್ದತಿಯು ರೂಡಿಯಲ್ಲಿದ್ದು ಕೆಮ್ಮಿಂಜೆ ದೇವಸ್ಥಾನದಲ್ಲಿಯೂ ಮಾಡುವಂತೆ ಸಲಹೆ ನೀಡಿದರು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಪ್ರತಿ ಮನೆಗೆ ಕನಿಷ್ಠ ರೂ.1000 ನಿಗಧಿಪಡಿಸಲಾಗುವುದು ಹಾಗೂ ಅರವರ ಅನುಕೂಲಕ್ಕೆ ತಕ್ಕಂತೆ ಗರಿಷ್ಠ ದೇಣಿಗೆ ಸಲ್ಲಿಸಬಹುದಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.


ಪ್ರಶ್ನಾ ಚಿಂತನೆ:
ದೇವಸ್ಥಾನಕ್ಕೆ ಸಂಬಂಧಿಸಿದ ಗ್ರಾಮ ದೈವಗಳಾದ ಕಲ್ಕುಡ, ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಭಂಡಾರವು ಮನೆಯೊಂದರಲ್ಲಿದ್ದು ಪ್ರತಿ ವರ್ಷ ಜಾತ್ರಾ ಸಮಯದಲ್ಲಿ ಸಂಪ್ರದಾಯದಂತೆ ಅಲ್ಲಿಂದ ಭಂಡಾರ ದೇವಸ್ಥಾನಕ್ಕೆ ಆಗಮಿಸಿ ನೇಮೋತ್ಸವ ನಡೆದ ಬಳಿಕ ದೈವಗಳ ಭಂಡಾರ ಅವರ ಮನೆಗೆ ನಿರ್ಗಮನವಾಗುತ್ತಿದೆ. ದೈವಗಳ ಬಗ್ಗೆ ಅವರ ಮನೆಯಲ್ಲಿ ಪ್ರಶ್ನಾ ಚಿಂತನೆ ಸಂದರ್ಭದಲ್ಲಿ ಗ್ರಾಮ ದೈವವಾಗಿರುವುದರಿಂದ ದೇವಸ್ಥಾನದಲ್ಲಿಯೇ ಚಿಂತನೆ ನಡೆಸುವ ಅಗತ್ಯತೆಯಿರುವುದಾಗಿ ದೈವಜ್ಞರು ಸಲಹೆ ನೀಡಿದ್ದು, ಮನೆಯವರ ಮನವಿಯಂತೆ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಪ್ರಶ್ನಾ ಚಿಂತನೆಯ ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಲಾಗಿದ್ದು ಗ್ರಾಮಸ್ಥರ ಸಲಹೆ, ಅಭಿಪ್ರಾಯದಂತೆ ಗ್ರಾಮ ದೈವವಾಗಿರುವುದರಿಂದ ಪ್ರಶ್ನಾ ಚಿಂತನೆಯ ವೆಚ್ಚವನ್ನು ದೇವಸ್ಥಾನದಿಂದ ಭರಿಸುವುದಾಗಿ ತೀರ್ಮಾನಿಸಲಾಗಿದೆ.

ಸದಸ್ಯರ ಗೈರು-ಗ್ರಾಮಸ್ಥರ ಅಸಮಾದಾನ:
ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಹ್ರಬ್ಮಣ್ಯ ಬಳ್ಳಕ್ಕುರಾಯ ಹೊರತು ಪಡಿಸಿ ಉಳಿದ ಎಲ್ಲಾ ಸದಸ್ಯರು ಗೈರಾಗಿದ್ದರು. ಸದಸ್ಯರು ಗೈರಾಗಿರುವ ಬಗ್ಗೆ ಗ್ರಾಮಸ್ಥರು ವಿಚಾರಿಸಿದಾಗ ಸಭೆಯ ಬಗ್ಗೆ ಎಲ್ಲರಿಗೂ ತಿಳಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಸಮಿತಿಯ ಸದಸ್ಯರಾಗಿ ಎಲ್ಲರೂ ಗೈರಾಗುವುದಾದರೆ ಅವರು ಸಮಿತಿಯಿಲ್ಲಿರುವುದು ಯಾಕೆ? ಅವರು ರಾಜಿನಾಮೆ ನೀಡಲಿ ಎಂದು ಗ್ರಾಮಸ್ಥರು ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿದರು. ಇದೇ ವಿಚಾರದಲ್ಲಿ ಚರ್ಚೆಯು ನಡೆಯಿತು.

ಜಾತ್ರೋತ್ಸವದಲ್ಲಿ ಅನ್ನಸಂತರ್ಪಣೆ, ವಾಹನ ನಿಲುಗಡೆ, ಸುಚಿತ್ವ, ವಿದ್ಯುತ್ ದೀಪಾಲಂಕಾರ ಮೊದಲಾದ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಅನ್ನಸಂತರ್ಪಣೆ ಹಾಗೂ ದೇವರ ಕಾರ್ಯಗಳಿಗೆ ಒಟ್ಟು ಸುಮಾರು 3,500 ಬಾಳೆ ಎಲೆಯ ಆವಶ್ಯಕತೆಯಿದ್ದು ಭಕ್ತಾದಿಗಳು ನೀಡಿ ಸಹಕರಿಸುವಂತೆ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರು ವಿನಂತಿ ಮಾಡಿದರು.
ದೇವಸ್ಥಾನದ ವ್ಯವಸ್ಥಾಪಕ ಪ್ರಶಾಂತ್, ಭಕ್ತಾದಿಗಳಾದ ಡಾ.ಪಿಕೆಎಸ್ ಭಟ್, ಶಿವರಾಮ ಭಟ್, ಯು.ಕೆ ನಾಯ್ಕ, ಸುರೇಶ್ ದೇವಾಡಿಗ, ಸುನಿತ್ ಕುಮಾರ್, ಶಿವಪ್ರಸಾದ್, ದಯಾನಂದ, ಅಜಿತೇಶ್, ಶಶಿರಾಜ್, ಗಣೇಶ್, ಸೂರ್ಯ ಕುಮಾರ್, ನಾರಾಯಣ ನಾಯ್ಕ, ರಾಧಾಕೃಷ್ಣ, ಲೋಕೇಶ್, ಮಿಥುನ್, ಉಮೇಶ್, ಶೀನಪ್ಪ, ಪವನ್, ರಾಜೇಶ್ ಎಸ್., ಸಂತೋಷ್, ಕಾಂತಪ್ಪ ನಾಯ್ಕ, ಶ್ಯಾಮಣ್ಣ ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here