ದಾರಿದೀಪ, ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ
ಕಡಬ: ಐತ್ತೂರು ಗ್ರಾಮ ಪಂಚಾಯತ್ ಗ್ರಾಮ ಸಭೆ ಅ.31ರಂದು ಗ್ರಾ.ಪಂ ಸಭಾಭವನದಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷೆ ವತ್ಸಲಾ ಜೆ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಮುಖ್ಯವಾಗಿ ದಾರಿದೀಪ ವಿಚಾರ ಕೇಳಿ ಬಂತು. ಗ್ರಾಮಸ್ಥ ಥೋಮಸ್ ಎಂಬವರು ಮಾತನಾಡಿ ಗ್ರಾಮದ ಭ್ರಾಂತಿಕಟ್ಟೆ, ಐತ್ತೂರು, ಕೊಡಂಕಿರಿ ಮೊದಲಾದ ಕಡೆಗಳಲ್ಲಿ ದಾರಿ ದೀಪ ವ್ಯವಸ್ಥೆ ಸರಿಯಾಗಿಲ್ಲದೇ ಜನರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಗ್ರಾ.ಪಂ ಗಮನಹರಿಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು. ಗ್ರಾ.ಪಂ ಸದಸ್ಯ ವಿ.ಎಂ ಕುರಿಯನ್ ಮಾತನಾಡಿ ಆ ಭಾಗಕ್ಕೆ ಸ್ವಲ್ಪ ಅನುದಾನ ಇಟ್ಟಿದೆ, ಮುಂದಕ್ಕೆ ಸರಿಪಡಿಸುವ ಎಂದು ಹೇಳಿದರು. ಪಿಡಿಓ ಸುಜಾತ ಉತ್ತರಿಸಿ ಮುಂದಿನ ದಿನಗಳಲ್ಲಿ ಅಲ್ಲಿನ ದಾರಿದೀಪದ ಸಮಸ್ಯೆಗಳನ್ನು ಬಗೆಹರಿಸುವ ಎಂದು ಹೇಳಿದರು.
ಸೋಲಾರ್ ದಾರಿದೀಪ ಉರಿಯುತ್ತಿಲ್ಲ:
ಗ್ರಾಮಸ್ಥ ಗಣೇಶ್ ಮಾತನಾಡಿ ಮೂಜೂರು, ಅಂತಿಬೆಟ್ಟು ಮೊದಲಾದ ಕಡೆಗಳಲ್ಲಿ ತಾ.ಪಂ ಅನುದಾನದಲ್ಲಿ ಸೋಲಾರ್ ದಾರಿದೀಪ ಅಳವಡಿಕೆಯಾಗಿದ್ದರೂ ಅದು ಉರಿಯುವುದಿಲ್ಲ, ಈ ರೀತಿ ಆಗುತ್ತಿರುವುದಕ್ಕೆ ಯಾರು ಜವಾಬ್ದಾರಿ? ಇದರ ಬಗ್ಗೆ ಗ್ರಾ.ಪಂ ಗಮನಹರಿಸಬೇಕೆಂದು ಹೇಳಿದರು.
ನೀರಿನ ಸಮಸ್ಯೆ ಬಗೆಹರಿಸಿ:
ಗ್ರಾಮಸ್ಥ ಮೋಹನ್‌ಚಂದ್ರ ಮಾತನಾಡಿ ಐತ್ತೂರು ಗ್ರಾಮದ ಸುಳ್ಯದಲ್ಲಿ ತಿಂಗಳಿಗೆ 10 ದಿನ ಮಾತ್ರ ಕುಡಿಯುವ ನೀರು ಬರುತ್ತಿದ್ದು ಆ ಭಾಗದಲ್ಲಿ ಅತೀವ ನೀರಿನ ಸಮಸ್ಯೆಯಾಗಿದೆ. ಆ ಭಾಗದ ವಾರ್ಡ್ ಮೆಂಬರ್‌ಗಳಿಗೆ ಹೇಳಿದರೂ ಏನೂ ಪ್ರಯೋಜವಾಗುತ್ತಿಲ್ಲ, ಆ ಕಡೆ ಯಾವ ಸದಸ್ಯರೂ ಬರುವುದಿಲ್ಲ, ನಮ್ಮ ಕಾಲ್ ಕೂಡಾ ರಿಸೀವ್ ಮಾಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಟ್ಟಡಕ್ಕೆ ಲೈಸೆನ್ಸ್ ನೀಡಿದ್ದಕ್ಕೆ ಆಕ್ಷೇಪ:
ಗ್ರಾಮಸ್ಥ ಥೋಮ್ಸನ್ ಮಾತನಾಡಿ ಕೆರ್ಮಾಯಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡವೊಂದಕ್ಕೆ ಗ್ರಾ.ಪಂ ಲೈಸೆನ್ಸ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಾನು ಈ ಹಿಂದೆಯೇ ಈ ಬಗ್ಗೆ ಗ್ರಾ.ಪಂ ಗಮನಕ್ಕೆ ತಂದಿದ್ದರೂ ಕೂಡಾ ಅದರ ವಿರುದ್ಧ ಯಾವುದೇ ಕ್ರಮವನ್ನು ಗ್ರಾ.ಪಂ ತೆಗೆದುಕೊಂಡಿಲ್ಲ ಎಂದು ಹೇಳಿದರು. ಪಿಡಿಓ ಸುಜಾತ ಕೆ ಉತ್ತರಿಸಿ ನಾವು ಕಾನೂನು ಪ್ರಕಾರ ಅವರಿಗೆ ನೋಟೀಸ್ ನೀಡಿದ್ದೇವೆ, ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಹೇಳಿದರು.
ತಾ.ಪಂ, ಜಿ.ಪಂ ಅನುದಾನ ಎಲ್ಲಿಗೆ ಹೋಗುತ್ತಿದೆ..?
ಗ್ರಾ.ಪಂ ಸದಸ್ಯ ಮನಮೋಹನ್ ಗೋಳ್ಯಾಡಿ ಮಾತನಾಡಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಅನುದಾನ ಈಗ ಏನಾಗುತ್ತಿದೆ, ಎಲ್ಲಿಗೆ ಹೋಗುತ್ತಿದೆ ಎಂದು ಇಂಜಿನಿಯರ್ ಅವರಲ್ಲಿ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಇಂಜಿನಿಯರ್ ಅದರ ವಿಷಯ ನಮಗೆ ಗೊತ್ತಿಲ್ಲ, ಅನುದಾನ ಬಂದರೆ ಕೆಲಸ ಮಾಡುವುದು ಮಾತ್ರ ನಮ್ಮ ಜವಾಬ್ದಾರಿ, ಬೇರೆ ವಿಚಾರದ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ಹೇಳಿದರು.
ತೋಟಗಾರಿಕಾ ಇಲಾಖೆಯಿಂದ ಮಾಹಿತಿ ಬೇಕಿತ್ತು:
ತೋಟಗಾರಿಕಾ ಇಲಾಖೆಯವರು ಸಭೆಗೆ ಯಾಕೆ ಬಂದಿಲ್ಲ, ಆ ಇಲಾಖೆಯಿಂದ ನಮಗೆ ಮಾಹಿತಿ ಬೇಕಿತ್ತು ಎಂದು ಗ್ರಾಮಸ್ಥರು ಹೇಳಿದರು.
ಗೃಹಲಕ್ಷ್ಮೀ ಯೋಜನೆಯ ಮಾಹಿತಿ:
ನೋಡೆಲ್ ಅಧಿಕಾರಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಯಾಗಿರುವ ಮಂಗಳಾ ಅವರು ಮಾತನಾಡಿ ಗೃಹಲಕ್ಷ್ಮೀ ಯೋಜನೆಯ ಹಣ ಕೆಲವರಿಗೆ ತಾಂತ್ರಿಕ ತೊಂದರೆಯಿಂದ ಬರುವುದು ವಿಳಂಬವಾಗಿರಬಹುದು. ಈ ಬಗ್ಗೆ ಸೂಕ್ತ ದಾಖಲೆಯೊಂದಿಗೆ ಸಂಬಂಧಪಟ್ಟವರ ಜೊತೆ ವಿಚಾರಿಸಿ ಪರಿಶೀಲಿಸಬೇಕು ಎಂದು ಹೇಳಿದರು. ಗ್ರಾಮಸ್ಥರ ಸಹಕಾರವೇ ಗ್ರಾಮದ ಅಭಿವೃದ್ಧಿಯ ಮೂಲವಾಗಿದ್ದು ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಗೃಹಜ್ಯೋತಿ ಮಾಹಿತಿ:
ಬಿಳಿನೆಲೆ ಮೆಸ್ಕಾಂ ಕಿರಿಯ ಇಂಜಿನಿಯರ್ ವಸಂತ್ ಕುಮಾರ್ ಅವರು ತಮ್ಮ ಇಲಾಖೆಯ ಹಾಗೂ ಗೃಹ ಜ್ಯೋತಿ ಯೋಜನೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿ, ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿದರು.ಗ್ರಾ.ಪಂ ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಈರೇಶ, ಪ್ರೇಮಾ, ಉಷಾ, ಹಾಗೂ ವಿವಿಧ ಇಲಾಖಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಓ ಸುಜಾತ ಕೆ ಸ್ವಾಗತಿಸಿ ವಂದಿಸಿದರು.