ನ.4-5 ಪಡ್ನೂರು ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವ-ಪಡ್ನೂರು ಉತ್ಸವ

0

*ಉಚಿತ ವೈದ್ಯಕೀಯ ಶಿಬಿರ
*ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ
*ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿ
*ಪಡ್ನೂರು ಮ್ಯೂಸಿಕಲ್ ನೈಟ್

ಪುತ್ತೂರು:ಸಾಮಾಜಿಕ, ಧಾರ್ಮಿಕ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಪಡ್ನೂರು ಶ್ರೀ ಜನಾರ್ದನ ಯುವಕ ಮಂಡಲದ ಸುವರ್ಣ ಮಹೋತ್ಸವದ ಸಂಭ್ರಮ-ಪಡ್ನೂರು ಉತ್ಸವು ನ.4 ಮತ್ತು 5 ರಂದು ಪಡ್ನೂರು ಹಿ.ಪ್ರಾ ಶಾಲಾ ವಠಾರದಲ್ಲಿ ಪಡ್ನೂರು ಸರಸ್ವತಿ ಯುವತಿ ಮಂಡಲದ ಸಹಯೋಗದಲ್ಲಿ ಮೇಲೈಸಲಿದೆ. ಸುವರ್ಣ ಮಹೋತ್ಸವದಲ್ಲಿ ಉಚಿತ ವೈದ್ಯಕೀಯ ಶಿಬಿರ, ಕಬಡ್ಡಿ, ಪಂದ್ಯಾಟ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಪಡ್ನೂರು ಉತ್ಸವವು ಸಂಭ್ರಮಿಸಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಶ್ರೀಧರ ಕುಂಜಾರು ಹೇಳಿದರು.


ನ.2ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1970ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಪಂಜಿಗುಡ್ಡೆ ನಾರಾಯಣ ಭಟ್‌ರವರಿಂದ ಪ್ರಾರಂಭಗೊಂಡಿರುವ ಯುವಕ ಮಂಡಲವು ನಂತರದ ದಿನಗಳಲ್ಲಿ ಸಾಮಾಜಿಕವಾಗಿ ತೊಡಗಿಸಿಕೊಂಡಿದೆ. 25ಕ್ಕೂ ಅಧಿಕ ಮನೆಗಳ ನಿರ್ಮಾಣದಲ್ಲಿ ಶ್ರಮದಾನದ ಮೂಲಕ ನೆರವು ನೀಡುತ್ತಾ ಬಂದಿರುತ್ತದೆ. ಆರ್ಥಿಕ ದುರ್ಬಲರಿಗೆ, ಅನಾರೋಗ್ಯ ಪೀಡಿತರಿಗೆ ಹಾಗೂ ಅಶಕ್ತರಿಗೆ ನೆರವು ನೀಡುವ ಮೂಲಕ ಯುವಕ ಮಂಡಲವು ಸಾಮಾಜಿಕ ಕಳಕಳಿಯಿಂದ 50ವರ್ಷಗಳಿಂದ ಪಡ್ನೂರಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಯುವಕ ಮಂಡದಲ ಅಂಗ ಸಂಸ್ಥೆಯಾಗಿ ಸರಸ್ವತಿ ಯುವತಿ ಮಂಡಲವು ಕಳೆದ 30 ವರ್ಷಗಳಿಂದ ಸಮಾಜದಲ್ಲಿ ಸೇವೆ ಸಲ್ಲಿಸುತ್ತಿದೆ.


ಸುವರ್ಣ ಸಂಭ್ರಮಕ್ಕೆ ಚಾಲನೆ, ಉಚಿತ ವೈದ್ಯಕೀಯ ಶಿಬಿರ:
ಸುವರ್ಣ ಮಹೋತ್ಸವದಲ್ಲಿ ನ.4ರಂದು ಬೆಳಿಗ್ಗೆ ಜನಾರ್ದನ ವೇದಿಕೆಯಲ್ಲಿ ಗಣಪತಿ ಹೋಮದೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ನಡೆಯುವ ಉಚಿತ ವೈದ್ಯಕೀಯ ಶಿಬಿರದಲ್ಲಿ ಮುರ ಜಯಂತ ಕ್ಲಿನಿಕ್‌ನ ಡಾ. ಕೃಷ್ಣ ಪ್ರಸಾದ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ಸರ್ಜನ್ ಡಾ.ಎಂ.ಕೆ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವೈದ್ಯಕೀಯ ತಜ್ಞ ಡಾ.ಸುರೇಶ್ ಪುತ್ತೂರಾಯ, ಎಲುಬು ಮತ್ತು ಕೀಲು ತಜ್ಞ ಡಾ.ಸಚಿನ್ ಶಂಕರ್ ಹಾರಕರೆ, ಬೇರಿಕೆ ಶ್ರೀ ಆದಿಶಕ್ತಿ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಪ್ಪ ಕುಲಾಲ್ ಬೇರಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡ್ನೂರು ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಪಡ್ನೂರು, ನವೋದಯ ಒಕ್ಕೂಟದ ಅಧ್ಯಕ್ಷೆ ಚಂದ್ರಾವತಿ, ಪಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಪುಳು, ಪಡ್ನೂರು ಸಮುದಾಯ ಆರೋಗ್ಯಾಧಿಕಾರಿ ಸೌಮ್ಯ, ಪಡ್ನೂರು ಶ್ರೀರಾಮ್ ಫ್ರೆಂಡ್ಸ್‌ನ ಅಧ್ಯಕ್ಷ ಯತೀಶ್ ಪಂಜಿಗುಡ್ಡೆ, ಯರ್ಮುಂಜಪಳ್ಳ ಗೆಳೆಯರ ಬಳಗದ ಅಧ್ಯಕ್ಷ ಕುಶಲ ಗೌಡ ಪಂಜಿಗುಡ್ಡೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ಪಡ್ನೂರು ಶಾಲೆ, ವಿದ್ಯಾ ಸರಸ್ವತಿ ಬಾಲಕೋಕುಲ ಬೇರಿಕೆ, ಯುವಕ ಮತ್ತು ಯುವತಿ ಮಂಡಲದವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ರಾತ್ರಿ ನಡೆಯುವ ಸಭಾ ಕಾರ್ಯಕ್ರಮ ಹಾಗೂ ಗೌರವಾರ್ಪಣೆಯಲ್ಲಿ ಪ್ರಗತಿಪರ ಕೃಷಿಕ ಜನಾರ್ದನ ಭಟ್ ಸೇಡಿಯಾಪು ಉದ್ಘಾಟಿಸಲಿದ್ದಾರೆ. ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಜೋಯಿಷ ಯರ್ಮುಂಜ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ ಕೃಷ್ಣ ಭಟ್ ಕೊಂಕೋಡಿ ಮುಖ್ಯ ಭಾಷಣ ಮಾಡಲಿದ್ದಾರೆ. ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಬೆಂಗಳೂರು ಉದ್ಯಮಿ ಮಹೇಶ್, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲಿಯಾನ್ ಬನ್ನೂರು, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ರಾಮಕೃಷ್ಣ ಪಡುಮಲೆ, ಪುತ್ತೂರು ಸಮರ್ಥ ನಿಧಿಯ ನವೀನ್ ಕುಮಾರ್, ಪಡ್ನೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೀತಾರಾಮ ಬೇರಿಕೆ ಹಾಗೂ ಮುಖ್ಯಗುರು ಜೀವನರಶ್ಮೀ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷರು, 10ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ದಾನಿಗಳಿಗೆ, ಕಬಡ್ಡಿ ಆಟಗಾರರು ಹಾಗೂ ನಾಟಕ ಕಲಾವಿದರಿಗೆ ಗೌರವಾರ್ಪಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಹಾಗೂ ‘ಕಲ್ಜಿಗದ ಕಾಳಿ ಮಂತ್ರದೇವತೆ’ ಎಂಬ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.


ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ:
ನ.4ರಂದು ಬೆಳಿಗ್ಗೆ 58 ಕೆ.ಜಿ ವಿಭಾಗದ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆಯಲಿದ್ದು ಪಂದ್ಯಾಟವನ್ನು ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಉದ್ಘಾಟಿಸಲಿದ್ದಾರೆ. ಬನ್ನೂರು ಗ್ರಾ.ಪಂ ಅಧ್ಯಕ್ಷೆ ಸ್ಮಿತಾ, ಉಪಾಧ್ಯಕ್ಷ ಶೀನಪ್ಪ ಕುಲಾಲ್, ಸದಸ್ಯರಾದ ರಮಣಿ ಡಿ ಗಾಣಿಗ, ಗಿರಿಧರ ಪಂಜಿಗುಡ್ಡೆ, ವಿಮಲ, ಶ್ರೀನಿವಾಸ ಪೆರ‍್ವೋಡಿ, ಗೀತಾ, ಗಣೇಶ್ ಪಳ್ಳ, ಯುವಕ ಮಂಡಲದ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಮೂವಪ್ಪು, ಹಿರಿಯ ಕಬಡ್ಡಿ ಆಟಗಾರರಾದ ಮಾಂಕು ಮುಂಡಾಜೆ ಹಾಗೂ ಗಿರಿಯಪ್ಪ ರೆಂಜಾಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಸುವರ್ಣ ಮಹೋತ್ಸವ ಸಮಾರೋಪ:
ಸಂಜೆ ನಡೆಯುವ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭವನ್ನು ಮದಗ ಶ್ರೀ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ ಉದ್ಘಾಟಿಸಲಿದ್ದಾರೆ. ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಗೌಡ ಪಟ್ಟೆ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ಶ್ರೀಕಾಂತ ಶೆಟ್ಟಿ ಕಾರ್ಕಳ ಪ್ರಮುಖ ಭಾಷಣ ಮಾಡಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಮುಂಬಯಿ ಗಿರಿಜಾ ವೆಲ್‌ಫೇರ್ ಅಸೊಸಿಯೇಶನ್‌ನ ವಸಂತ ಮುಂಬಯಿ, ಬಜರಂಗದಳ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಮಂಗಳೂರು ವಿಶ್ವವಿದ್ಯಾನಿಲಯದ ಕಬಡ್ಡಿ ಆಟಗಾರ ಕಿಶೋರ್ ಬೊಟ್ಯಾಡಿ, ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ|ಎಚ್.ಜಿ ಶ್ರೀಧರ್, ಮಂಗಳೂರಿನ ಕಸ್ಟಮ್ಸ್ ಅಧಿಕಾರಿ ರಮೇಶ್ಚಂದ್ರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು, ಎಪಿಎಂಸಿ ಮಾಜಿ ಸದಸ್ಯೆ ತ್ರಿವೇಣಿ ಕರುಣಾಕರ ಪೆರ‍್ವೋಡಿ, ಸರಸ್ವತಿ ಯುವತಿ ಮಂಡಲದ ಗೌರವಾಧ್ಯಕ್ಷೆ ಸರೋಜ ಜಿ.ರಾವ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ, ಲಕ್ಕಿಡಿಪ್ ಡ್ರಾ. ನಡೆದ ಬಳಿಕ ಕೇರಳ ಹಾಗೂ ಕರ್ನಾಟಕದ ವಾದಕ ಹಾಗೂ ಗಾಯಕರನ್ನೊಳಗೊಂಡ ಸಂಗೀತ ಮನೋರಂಜನೆ ಕರಾವಳಿ ಕರ್ನಾಟಕದ ಪ್ರಖ್ಯಾತ ರಸಮಂಜರಿ ತಂಡ ಡಿಲ್ಸೆಸ್ ರಾಕ್ ಎನ್ ಮೆಲೋಡೀಸ್‌ರವರಿಂದ ‘ಪಡ್ನೂರು ಮ್ಯೂಸಿಕಲ್ ನೈಟ್’ ಸಂಭ್ರಮದೊಂದಿಗೆ ಸುವರ್ಣ ಮಹೋತ್ಸವು ಸಂಪನ್ನಗೊಳ್ಳಲಿದೆ ಎಂದು ಅವರು ಹೇಳಿದರು.


ಅತೀ ಎತ್ತರದ ಟ್ರೋಫಿ:
58 ಕೆ.ಜಿ ವಿಭಾಗದ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಿಗೆ ವಿಶೇಷವಾಗಿ ಸುಮಾರು 5.5 ಅಡಿ ಎತ್ತರ ವಿಶಿಷ್ಠ ಟ್ರೋಫಿಯನ್ನು ನೀಡಲಾಗುವುದು. ಪ್ರಥಮ ರೂ.10,050, ದ್ವಿತೀಯ ರೂ.7050, ತೃತೀಯ ರೂ.5050, ಚತುರ್ಥ ರೂ.3050 ಹಾಗೂ ಜನಾರ್ದನ ಸ್ವರ್ಣ ಟ್ರೋಫಿ ನೀಡಲಾಗುವುದು. ಅಲ್ಲದೆ ಉತ್ತಮ ದಾಳಿಗಾರ, ಉತ್ತಮ ಹಿಡಿತಗಾರ ಹಾಗೂ ಸವ್ಯಸಾಚಿ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಶ್ರೀಧರ ಕುಂಜಾರು ತಿಳಿಸಿದರು.


ಕೆಸರುಗದ್ದೆ ಕ್ರೀಡೆ, ಕೆ.ಜಿ ವಿಭಾಗದ ಕಬಡ್ಡಿ ಪುತ್ತೂರಿಗೆ ಪರಿಚಯಿಸಿದ ಯುವಕ ಮಂಡಲ:
ಮಂಗಳೂರು, ಉಡುಪಿ ಮೊದಲಾದ ಕಡೆಗಳಲ್ಲಿ ನಡೆಯುತ್ತಿದ್ದ ಕೆಸರುಗದ್ದೆ ಕ್ರೀಡಾಕೂಟವನ್ನು ಪುತ್ತೂರು ತಾಲೂಕಿನಲ್ಲಿ ಪಡ್ನೂರು ಜನಾರ್ದನ ಯುವಕ ಮಂಡಲ ಪ್ರಥಮ ಬಾರಿಗೆ ಆಯೋಜಿಸುವ ಮೂಲಕ ಕೆಸರುಗದ್ದೆ ಕ್ರೀಡೆ ಸಂಭ್ರಮವನ್ನು ಪುತ್ತೂರಿಗೆ ಪರಿಚಯಿಸಿದೆ. ಅಲ್ಲದೆ ಕಾಸರಗೋಡು, ಮಂಗಳೂರು ಮೊದಲಾದ ಕಡೆಗಳಲ್ಲಿ ನಡೆಯುತ್ತಿದ್ದ ಕೆ.ಜಿ ವಿಭಾಗ ಕಬಡ್ಡಿ ಪಂದ್ಯಾಟವನ್ನು 58 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾವನ್ನು ಜನಾರ್ದನ ಯುವಕ ಮಂಡಲ ಪ್ರಥಮ ಬಾರಿಗೆ ಆಯೋಜಿಸುವ ಮೂಲಕ ಪುತ್ತೂರಿಗೆ ಪರಿಚಯಿಸಿಕೊಟ್ಟಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಜೋಯಿಷ ಯರ್ಮುಂಜ ಹೇಳಿದರು.


ಆಧಾರ್ ನೋಂದಣಿ, ತಿದ್ದುಪಡಿ:
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಇಲಾಖೆಯ ಸಹ ಭಾಗಿತ್ವದಲ್ಲಿ ಆಧಾರ್ ನೋಂದಣಿ, ತಿದ್ದುಪಡಿ, ಅಂಚೆ ಉಳಿತಾಯ ಖಾತೆಗೆ ಆಧಾರ್ ಜೋಡಣೆ ಮತ್ತು ಅಂಚೆ ಇಲಾಖೆಯ ಇತರ ಸೌಲಭ್ಯಗಳ ಮಾಹಿತಿ ಹಾಗೂ ಹೊಸದಾಗಿ ಖಾತೆ ತೆರೆಯುವ ಸೌಲಭ್ಯಗಳು ದೊರೆಯಲಿದೆ. ಇದಕ್ಕಾಗಿ ರೇಶನ್ ಕಾರ್ಡ್, ಓಟರ್ ಐಡಿ, ಪಾನ್‌ಕಾರ್ಡ್, ಮಾರ್ಕ್ಸ್‌ಕಾರ್ಡ್, ಜನನ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಹಾಗೂ ಮೊಬೈಲ್‌ಗಳೊಂದಿಗೆ ಆಗಮಿಸಿ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಸುವರ್ಣ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.
ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಗೌಡ ಪಟ್ಟೆ, ಉಪಾಧ್ಯಕ್ಷ ರಮೇಶ್ ರೆಂಜಾಳ, ಸ್ವಾಗತ ಸಮಿತಿ ಸಂಚಾಲಕ ಶ್ರೀಧರ ಪಂಜಿಗುಡ್ಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here