ರೈಲ್ವೇ ಖಾಸಗೀಕರಣ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

0

ಪುತ್ತೂರು: ದೇಶದ ಜೀವನಾಡಿ ಭಾರತೀಯ ರೈಲು ಇಲಾಖೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಯೋಜನೆಯ ವಿರುದ್ದ ಇಂದು ದೇಶದಾದ್ಯಂತ ಎಲ್ಲಾ ರೈಲು ನಿಲ್ದಾಣಗಳ ಮುಂದೆ ಪ್ರತಿಭಟನೆ ನಡೆಯುತ್ತಿದ್ದು, ಇದರ ಭಾಗವಾಗಿ ಪುತ್ತೂರು ರೈಲು ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪುತ್ತೂರು ಬ್ಲಾಕ್‌ ಕಾಂಗ್ರೆಸ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ವೇದಿಕೆ, ವಿವಿಧ ರೈತ ಸಂಘಟನೆಗಳ ಒಕ್ಕೂಟ, ವಿದ್ಯಾರ್ಥಿ ಯುವ ಜನ ಮಹಿಳಾ ದಲಿತ ಆದಿವಾಸಿ ಹಾಗೂ ಜನಪರ ಸಂಘಟನೆಗಳ ವೇದಿಕೆ ಆಶ್ರಯದಲ್ಲಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದೇಶದ ಪ್ರಮುಖ ರೈಲ್ವೇ, ವಿದ್ಯುತ್‌, ವಿಮಾನ ನಿಲ್ದಾಣ ಮುಂತಾದ ಕ್ಷೇತ್ರಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಕೇಂದ್ರ ಸರಕಾರ ಆಡಳಿತ ನಡೆಸಲು ಅಸಮರ್ಥವಾಗಿದೆ ಎಂಬುವುದನ್ನು ತೋರಿಸಿಕೊಟ್ಟಿದೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ದೇಶದ ಜನ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಕೇಂದ್ರ ಎಲ್ಲವನ್ನೂ ಖಾಸಗೀಕರಣ ಮಾಡಿರುವುದೇ ಸಾಧನೆಯಾಗಿದೆ. ಎಲ್ಲಾ ಇಲಾಖೆಗಳನ್ನು ಖಾಸಗೀಕರಣಗೊಳಿಸಿದರೆ ಕೇಂದ್ರಕ್ಕೆ ಮಂತ್ರಿಗಳ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಅವರು ಜನರು ನೆಮ್ಮದಿಯಿಂದ ಬದುಕಲು ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಆಡಳಿತ ನಡೆಸಲು ನಾಲಾಯಕ್‌ ಆಗಿರುವ ಕೇಂದ್ರ ಸರಕಾರ ಮುಂದಿನ ಚುನಾವಣೆಯಲ್ಲಿ ಧರ್ಮ ಧರ್ಮಗಳ ನಡುವೆ ಕಂದಕ ಏರ್ಪಡಿಸುವ ಕೆಲಸ ಮಾಡುವುದೇ ಅವರ ಅಜಂಡವಾಗಿದೆ ಎಂದರು.

ಸಿಐಟಿ ಮುಖಂಡ, ನ್ಯಾಯಾವಾದಿ ಬಿ ಎಂ ಭಟ್‌ ಮಾತನಾಡಿ, ನಮ್ಮೆಲ್ಲರ ತೆರಿಗೆ ಹಣದಿಂದ ವಿದ್ಯುತ್‌ ರೈಲ್ವೇ ವಿಮಾನ ನಿಲ್ದಾಣ ಬೆಳೆದಿದೆ. ಕಾರ್ಮಿಕರ ಪರವಾಗಿ ನಾವಿದ್ದೇವೆ ಎಂದು ಸರಕಾರ ಹೇಳುತ್ತಿದ್ದರೂ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಐಷಾರಾಮಿ ರೈಲ್ವೇ ನಿಲ್ದಾಣ ನಿರ್ಮಾಣ ಖಾಸಗೀಕರಣದ ಉದ್ದೇಶವಾಗಿದ್ದು, ರೈಲ್ವೇ ಅಧಿಕಾರಿಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದ ಸರಕಾರ ಆಡಳಿತ ಮಾಡಲು ಯೋಗ್ಯರಲ್ಲ ಎಂದು ಹೇಳಿದರು.

ಪುತ್ತೂರು ಗಾಂಧಿಕಟ್ಟೆಯಿಂದ ಮೆರವಣಿಗೆಯಲ್ಲಿ ರೈಲ್ವೇ ನಿಲ್ದಾಣದವರೆಗೆ ಸಾಗಿದ ಪ್ರತಿಭಟನಾಕಾರರು ಪ್ರತಿಭಟನೆ ಬಳಿಕ ರೈಲ್ವೇ ಸ್ಟೇಷನ್ ಮಾಸ್ಟರ್ ಅವರಿಗೆ ಬೇಡಿಕೆಗಳ ಮನವಿಯನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪ್ರಮುಖರಾದ ಎಂ ಬಿ ವಿಶ್ವನಾಥ ರೈ, ಸೂತ್ರಬೆಟ್ಟು ಜಗನ್ನಾಥ ರೈ, ಪಿ ಕೆ ಸತೀಶ್‌, ಈಶ್ವರಿ, ಶಾಮ್‌ ರಾಜ್‌ ಪಟ್ರಮೆ, ಇಸಾಖ್‌ ಸಾಲ್ಮರ, ಜಗದೀಶ್‌ ಶೆಟ್ಟಿ ನೆಲ್ಲಿಕಟ್ಟೆ, ಮೆಲ್ವಿನ್‌, ಮೌರಿಸ್‌ ಮಸ್ಕರೇಂಜಸ್‌, ಬಶೀರ್‌ ಪರ್ಲಡ್ಕ, ಪುತ್ತೂರು ತಾಲೂಕು ಜೆಡಿಎಸ್‌ ಅಧ್ಯಕ್ಷ ಅಶ್ರಫ್‌ ಕಲ್ಲೇಗ ಸೇರಿದಂತೆ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here