ಅಡಿಕೆ ಸಸಿಗಳಿಗೆ ಶಕ್ತಿ ಕಡಿಮೆಯಾದಾಗ ರೋಗಬಾಧೆ ಹೆಚ್ಚುತ್ತದೆ-ಡಾ.ವಿಶುಕುಮಾರ್
ಪುತ್ತೂರು: ಅಡಿಕೆ ಸಸಿಗಳಿಗೆ ಶಕ್ತಿ ಕಡಿಮೆಯಾದಾಗ ರೋಗ ಬಾಧೆ ಹೆಚ್ಚಾಗುತ್ತಿದೆ. ಲಘು ಪೋಷಕಾಂಶಗಳ ಕೊರತೆಯಿಂದ ಕೃಷಿಯಲ್ಲಿ ಸಮಸ್ಯೆಗಳಾಗುತ್ತಿದೆ. ಈ ಸಮಸ್ಯೆಯಯನ್ನು ನೀಗಿಸುವ ನಿಟ್ಟಿನಲ್ಲಿ ರೈತರು ಅಗತ್ಯಕ್ರಮ ಕೈಗೊಂಡರೆ ಉತ್ತಮ ಬೆಳೆಯನ್ನು ತೆಗೆಯಬಹುದು ಎಂದು ಕೃಷಿ ವಿಜ್ಞಾನಿ ಡಾ.ಬಿ.ಕೆ. ವಿಶುಕುಮಾರ್ ಹೇಳಿದರು.
ಪುತ್ತೂರಿನಲ್ಲಿರುವ ಕರ್ನಾಟಕ ರಾಜ್ಯ ರೈತಸಂಘ -ಹಸಿರು ಸೇನೆಯ ಪ್ರಧಾನ ಕಛೇರಿಯಲ್ಲಿ ನಡೆದ ಅಡಿಕೆ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಅವರು ರೈತರಿಗೆ ಕೃಷಿ ಮಾಹಿತಿ ನೀಡಿದರು.
ಮಣ್ಣು ಸರಿಯಾಗಿದ್ದರೆ ಯಾವುದೇ ರೋಗಗಳೂ ಬರುವುದಿಲ್ಲ. ಆದರೆ ಅಡಿಕೆ ತೋಟದಲ್ಲಿ ಉಜುರಿ ಕಣಿಗಳ ವ್ಯವಸ್ಥೆ ಮಾಡಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಎಂದ ಅವರು, ಹಿಂಗಾರ ಕಪ್ಪು ಆಗುವುದರಿಂದಲೇ ಎಲೆ ಚುಕ್ಕಿರೋಗ ಪ್ರಾರಂಭವಾಗುತ್ತಿದ್ದು, ಅಂತಹ ಹಿಂಗಾರವನ್ನು ತೆಗೆದು ಸುಟ್ಟು ಹಾಕಬೇಕು. ಗೊನೆಯ ಜತೆಗೆ ಎಲೆಗೂ ಬ್ರೋಡೋ ದ್ರಾವಣವನ್ನು ಸಿಂಪಡಣೆ ಮಾಡುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು ಎಂದರು.
ಬರುವ ಹೊಸ ಹೊಸ ವಿಚಾರಗಳ ಬಗ್ಗೆ ಜನರು ಚರ್ಚೆ ನಡೆಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುಲಭವಾಗುತ್ತದೆ ಎಂದ ಅವರು ಬೇರುಗಳು ಆರೋಗ್ಯವಾಗಿದ್ದಾಗ ಮರ ಬೀಳುವ ಸಮಸ್ಯೆಯಾಗುವುದಿಲ್ಲ. ಹಳೆಯ ಕೃಷಿ ಪದ್ದತಿಯಲ್ಲಿ ಹೆಚ್ಚಿನ ಬದಲಾವಣೆ ಮಾಡಬಾರದು. ಪ್ರತೀ ವರ್ಷ ಅಡಿಕೆ ಮರಕ್ಕೆ 5 ಲೀಟರ್ ಸೆಗಣಿ ನೀರು ನೀಡುವುದರ ಜತೆಗೆ 15ಕೆ.ಜಿ ಯಷ್ಟು ಹಟ್ಟಿಗೊಬ್ಬರ ಹಾಕಬೇಕು ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರೈತಸಂಘ -ಹಸಿರು ಸೇನೆಯ ದ.ಕ.ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ರೋಗ ಭಾದೆಯಿಂದ ಅಡಿಕೆ ಬೆಳೆಗಾರರಿಗೆ ನಷ್ಟ ಸಂಭವಿಸುತ್ತಿದೆ. ಇದರ ಜತೆಗೆ ಕಡಿಮೆಯಲ್ಲಿ ಸಿಗುವ ಕಳಪೆ ಅಡಿಕೆಯನ್ನು ತಂದು ಈ ಭಾಗದ ಅಡಿಕೆಯ ಜತೆಗೆ ಮಿಶ್ರಣ ಮಾಡುವ ಕಾರ್ಯವಾಗುತ್ತಿದೆ. ಇದರಿಂದಾಗಿ ಅಡಿಕೆ ಧಾರಣೆಯ ಮೇಲೆ ಪರಿಣಾಮ ಬೀರಿ ರೈತರಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಹೋರಾಟದ ಹಾದಿ ಹಿಡಿಯುವ ಅನಿವಾರ್ಯತೆ ಇದೆ ಎಂದರು. ತುಂಬೆಯಲ್ಲಿ ರೈತರ ಕೃಷಿಭೂಮಿ ಕೊಚ್ಚಿ ಹೋಗಿದ್ದರೂ ಪರಿಹಾರ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳಲ್ಲಿ ಪಂಪ್‌ಹೌಸ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದರು.
ರೈತ ಸಂಘದ ಮಾರ್ಗದರ್ಶಕ ಮುರುವ ಮಹಾಬಲ ಭಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಭಟ್ ಬಡಿಲ, ಕಾರ್ಯದರ್ಶಿ ಹೊನ್ನಪ್ಪ ಗೌಡ ಸವಣೂರು, ಸದಸ್ಯರಾದ ರಾಜೀವ ಗೌಡ, ಸಂಜೀವ ಗೌಡ, ಶಿವಚಂದ್ರ ಮೈಂದನಡ್ಕ, ತಾಲೂಕು ಉಪಾಧ್ಯಕ್ಷ ಜಯಪ್ರಕಾಶ್ ರೈ ನೂಜಿಬೈಲು, ಕುಂಬ್ರ ವಲಯಾಧ್ಯಕ್ಷ ಶೇಖರ್ ರೈ, ಮಹಿಳಾ ಘಟಕದ ಸದಸ್ಯೆ ಹರೀಣಾಕ್ಷಿ ರೈ ಮತ್ತಿತರರು ಉಪಸ್ಥಿತರಿದ್ದರು.