ಕೊಲ್ಲಾಜೆ ಅಮೈ ಸರಕಾರಿ ಜಾಗ ಅತಿಕ್ರಮಣಕ್ಕೆ ಯತ್ನ-ಅರಣ್ಯ ಇಲಾಖೆ, ಕಂದಾಯ, ಗ್ರಾಪಂನಿಂದ ತೆರವು ಕಾರ್ಯಾಚರಣೆ

0

ಪುತ್ತೂರು: ಕಂದಾಯ ಇಲಾಖೆಗೆ ಸೇರಿದ ಅರಣ್ಯ ಇಲಾಖೆಯ ನೆಡುತೋಪು ಇರುವ ಅರಿಯಡ್ಕ ಗ್ರಾಮದ ಕೊಲ್ಲಾಜೆ ಅಮೈ ಸರ್ವೆ ನಂಬರ್ 24 ರಲ್ಲಿರುವ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆ, ಅರಿಯಡ್ಕ ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅತಿಕ್ರಮಣ ಮಾಡಿರುವುವನ್ನು ತೆರವುಗೊಳಿಸಿ ಜೆಸಿಬಿ ಮೂಲಕ ದಾರಿ ಬಂದ್ ಮಾಡಿರುವ ಘಟನೆ ನ.4 ರಂದು ನಡೆದಿದೆ.


ಅರಿಯಡ್ಕ ಗ್ರಾಪಂ ವ್ಯಾಪ್ತಿಗೆ ಸೇರಿದ ಕೊಲ್ಲಾಜೆ ಅಮೈ ಎಂಬಲ್ಲಿರುವ ಕಂದಾಯ ಇಲಾಖೆಗೆ ಸೇರಿದ ಅರಣ್ಯ ಇಲಾಖೆಯ ನೆಡುತೋಪು ಇರುವ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡುವ ಸಲುವಾಗಿ ನೆರೆಯ ಕೆದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆಯ ಕೆಲವು ಮಂದಿ ಹಗ್ಗವನ್ನು ಬೇಲಿಯ ರೀತಿಯಲ್ಲಿ ಕಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟ್ ಸತ್ಯನ್ ಡಿ.ಜಿ, ಬೀಟ್ ಫಾರೆಸ್ಟ್ ನಿಂಗರಾಜು, ಉಮೇಶ್ ಮತ್ತು ದೀಪಕ್‌ರವರು ಸ್ಥಳಕ್ಕೆ ಆಗಮಿಸಿದ್ದರು. ಇದೇ ವೇಳೆ ಅರಿಯಡ್ಕ ಗ್ರಾಪಂ ಅಧ್ಯಕ್ಷ ಸಂತೋಷ್ ಮಣಿಯಾಣಿ, ಸದಸ್ಯರುಗಳಾದ ರಾಜೇಶ್ ಮಣಿಯಾಣಿ ಮತ್ತು ಉಷಾ ರೇಖಾ ರೈ, ಅರಿಯಡ್ಕ ಗ್ರಾಮ ಆಡಳಿತ ಅಧಿಕಾರಿ ಗೋಪಿನಾಥ್, ಸಹಾಯಕ ಇಸ್ಮಾಯಿಲ್‌ರವರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲಿ ಮಹಿಳೆಯರು ಸಹಿತ ನೂರಾರು ಮಂದಿ ಸೇರಿದ್ದರು. ಅರಣ್ಯ ಇಲಾಖಾ ಜಾಗದಲ್ಲಿ ಮರದಿಂದ ಮರಕ್ಕೆ ನೈಲಾನ್ ಹಗ್ಗವನ್ನು ಬೇಲಿಯ ರೀತಿ ಕಟ್ಟಲಾಗಿತ್ತು ಬಳಿಕ ಅಧಿಕಾರಿಗಳು ಇದನ್ನು ತೆರವುಗೊಳಿಸಿ, ಜಾಗಕ್ಕೆ ಹೋಗುವ ದಾರಿಯನ್ನು ಜೆಸಿಬಿ ಮೂಲಕ ಮಣ್ಣು ಹಾಕಿ ಬಂದ್ ಮಾಡಿಸಿದರು.


ಈ ವೇಳೆ ಸ್ಥಳದಲ್ಲಿ ಸೇರಿದ ಕೆಲವು ಮಹಿಳೆಯರು, ನಾವು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ನಮಗೆ ಮನೆ ಕಟ್ಟಲು ಜಾಗವಿಲ್ಲ, ಇಲ್ಲಿ ಸರಕಾರಿ ಜಾಗವಿದೆ ಎಂದು ತಿಳಿದು ನಾವು ಇಲ್ಲಿಗೆ ಬಂದಿದ್ದೇವೆ ವಿನಹ ನಾವು ಯಾವುದೇ ರೀತಿಯಲ್ಲಿ ಜಾಗ ಅತಿಕ್ರಮಣ ಮಾಡಿಲ್ಲ. ನಮಗೆ ಸರಕಾರ ಎಲ್ಲಿಯಾದರೂ ಜಾಗ ತೋರಿಸಿದರೆ ನಾವು ಮನೆ ಕಟ್ಟಿಕೊಳ್ಳುತ್ತೇವೆ, ಜಾಗವಿಲ್ಲದೆ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.
ಸ್ಥಳದಲ್ಲಿ ಕೆದಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ರತನ್ ರೈ ಕುಂಬ್ರ, ಅರಿಯಡ್ಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಲೋಕೇಶ್ ರೈ ಅಮೈ, ಸಚಿನ್ ರೈ ಪಾಪೆಮಜಲು, ಚಿರಾಗ್ ರೈ ಬೆದ್ರುಮಾರು ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here