ಪುತ್ತೂರು: ಕೃಷಿ ಪ್ರಧಾನವಾದ ವ್ಯವಸ್ಥೆಯಲ್ಲಿ ರೈತರಿಗೆ ಅನ್ನ ನೀಡುವ ಭೂಮಿ ತಾಯಿ ಹಾಗೂ ಕೃಷಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಕನ್ಯಾ ಮಾಸ ಶುಭಾರಂಭವಾಗುತ್ತಿದ್ದಂತೆಯೇ ಕರಾವಳಿ ಹೊಸ ಆಚರಣೆಗೆ ಸಂಭ್ರಮದಿಂದ ಸಿದ್ಧಗೊಳ್ಳುತ್ತವೆ. ’ಕದಿರು ಕಟ್ಟುವುದು’(ತೆನೆ), ’ಹೊಸ ಅಕ್ಕಿ ಊಟ’(ಪುದ್ವಾರ್ ವನಸ್) ಪಕ್ಕಾ ಹಳ್ಳಿ ಸೊಗಡಿನ ಆಧುನಿಕತೆಯ ಆಡಂಬರವಿಲ್ಲದ ಪಾರಂಪರಿಕ ಹಬ್ಬಗಳು ನಡೆಯುತ್ತವೆ. ಪ್ರಸ್ತುತ ಕಾಲಗಟ್ಟದಲ್ಲಿ ಪಾರಂಪರಿಕ ಸಂಪ್ರದಾಯಕ್ಕೆ ಆಧುನಿಕ ಪಾಶ್ಚಾತ್ಯ ಡಿ.ಜೆ ಸೌಂಡ್ ನೀಡುವ ಸಂದರ್ಭದಲ್ಲಿ ಸಂಪ್ರದಾಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭಕ್ತಿ ಪ್ರಧಾನವಾದ ಭಜನೆಯ ಟಚ್ ನೀಡುವ ಕಾರ್ಯಕ್ರಮವೊಂದು ಕಾವು ಸಮಾಚಾರ ಶ್ರೀ ನಿಲಯದಲ್ಲಿ ನ.5ರಂದು ನಡೆದ ಪುದ್ವಾರ್ ವನಸ್ ಕಾರ್ಯಕ್ರಮದಲ್ಲಿ ನಡೆದಿದೆ.
ಕೃಷಿ ಪ್ರಧಾನವಾಗಿರುವ ನಮ್ಮಲ್ಲಿ ಆಚಾರ, ವಿಚಾರ, ಆಚರಣೆ, ಆರಾಧನೆಗಳ ನಡುವೆ ತಿನ್ನುವ ಆಹಾರಕ್ಕೂ ಪ್ರಾಧಾನ್ಯತೆ ಎಂದರೆ ತಪ್ಪಾಗುವುದಿಲ್ಲ. ಹಾಗಾಗಿ ಕೃಷಿಕ ತಾನು ಬೆಳೆದ ಹೊಸ ಫಸಲನ್ನು ಭೂರಮೆಯ ಮಡಿಲಿನಿಂದ ತಂದು ಪೂಜಿಸಿ, ಸಂತಸದಿಂದ ಮನೆಯೊಳಗೆ ಸ್ವಾಗತಿಸುವ ಪದ್ಧತಿಯ ವೈಶಿಷ್ಟ ಪೂರ್ಣ. ಕದಿರು ತಂದು ಪೂಜಿಸುವ ಕ್ರಮವು ಇದೆ. ಈ ಪೂಜೆಗೆ ಅಗತ್ಯವಾಗಿ ಬೇಕಾದ ಮುಳ್ಳು ಸೌತೆಯನ್ನು ಸೀಳಿ, ವೀಳ್ಯದೆಲೆ, ಅಡಕೆಯನ್ನಿಟ್ಟು ಪೂಜೆ ಮಾಡಿ ಮಾವಿನೆಲೆ, ಹಲಸಿನ ಕಟ್ಟು ಮತ್ತು ಬಿದಿರು ಕುಡಿಯೊಂದಿಗೆ ಕದಿರನ್ನಿಟ್ಟು ತೆಂಗಿನ ಶಾಖೆಯಿಂದ ತಯಾರಿಸಿದ ದಾರದಿಂದ ಬಂಧಿಸಿ, ತೆಂಗು, ಕಂಗು ಮೊದಲಾದ ಫಲವೃಕ್ಷಗಳಿಗೆ ಅಲ್ಲದೆ ಮನೆಯ ಮುಖ್ಯದ್ವಾರ, ಬಾವಿದಂಡೆಗೆ, ದನದ ಕೊಟ್ಟಿಗೆಗೆ, ಪೀಠೋಪಕರಣಗಳಿಗೆ ಹಾಗೂ ವಾಹನಗಳಿಗೆ ಕಟ್ಟಲಾಗುತ್ತದೆ. ಆಗ ತಾನೇ ತಂದ ನವ ಫಸಲಿನ ತೆನೆಯಿಂದ ಅಕ್ಕಿಯನ್ನು ಅನ್ನದೊಂದಿಗೆ ಬೇಯಲು ಹಾಕುವ ಕ್ರಮವು ಇದೆ ಹಾಗೂ ಅಂದು ಹೊಸ ಅಕ್ಕಿ ಊಟ. ಇಂತಹ ಕಾರ್ಯಕ್ರಮ ಕಾವು ಸಮಾಚಾರ ಶ್ರೀ ನಿಲಯದ ಚಂದ್ರಶೇಖರ್ ತಾರಾ ದಂಪತಿ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮಕ್ಕೆ ಕಾವು ದುರ್ಗಾವಾಹಿನಿ ಭಜನಾ ಮಂಡಳಿ ವಿದ್ಯಾರ್ಥಿಗಳು ಭಜನೆ, ನೃತ್ಯ ಭಜನೆ ಮಾಡಿದರು. ಬೆಳಗ್ಗಿನಿಂದ ಮಧ್ಯಾಹ್ನದ ತನಕ ಭಜನೆ, ಮಂಗಳೋತ್ಸವ ನಡೆದ ಬಳಿಕ ಹೊಸ ಅಕ್ಕಿ ಊಟ ನಡೆಯಿತು. ಸಂಜೆ ಹಿರಿಯರ ಕೂಟದಿಂದ ಭಜನಾ ಕಾರ್ಯಕ್ರಮ ಅನ್ನಪ್ರಸಾದ ನಡೆಯಿತು. ಒಟ್ಟಿನಲ್ಲಿ ಪುದ್ವಾರ್ ವನಸ್ ಕಾರ್ಯಕ್ರಮವನ್ನು ಭಜನೆಯ ಮೂಲಕ ಸಂಪ್ರದಾಯಕ್ಕೆ ಮತ್ತಷ್ಟು ಭಕ್ತಿಯ ಶಕ್ತಿ ನೀಡಲಾಯಿತು.