ವಿವೇಕಾನಂದ ಕಾಲೇಜಿನಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಜೀವನದಲ್ಲಿ ಹಣಕಾಸು ನಿರ್ವಹಣೆ ಬಹಳ ಮುಖ್ಯ. ಹಣಕಾಸು ನಿರ್ವಹಣೆಯು ನಮಗೆ ಸಂಪಾದಿಸುವಾಗ ಅರಿವಿಗೆ ಬರುವುದಿಲ್ಲ. ಬದಲಾಗಿ ಖರ್ಚು ಮಾಡುವಾಗ ಅರಿವಾಗುತ್ತದೆ. ನಾವು ಭಾವನಾತ್ಮಕತೆಗಳಿಗೆ ಒಳಗಾದಾಗ, ಸಮಸ್ಯೆಗಳಿಗೆ ಸಿಲುಕಿದಾಗ ಹಣ ಹೂಡಿಕೆಯ ಕುರಿತು ಯೋಚಿಸಬಾರದು. ಬದಲಾಗಿ ನಮ್ಮ ಜೀವನದ ಕಡೆ ಗಮನ ಹರಿಸಬೇಕು. ತಂತ್ರಜ್ಞಾನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಕೊರೋನಾ ಸಮಯದಲ್ಲಿ ಹಲವಾರು ಮಾರುಕಟ್ಟೆಗಳು ನೆಲಕಚ್ಚಿದವು. ಕೆಲವೊಂದು ಸಂದರ್ಭಗಳು ನಮಗೆ ಅನಿರೀಕ್ಷಿತತೆಗಳು ಯಾವ ರೀತಿಯಾಗಿ ಎದುರಾಗುತ್ತವೆ ಎಂದು ತಿಳಿಸುತ್ತದೆ ಎಂದು ಸಿಂಗಾಪುರದ ಹಾಫ್ನಿಯಾ ಉತ್ಪನ್ನ ತೈಲ ಕಂಪನಿಯ ಚೀಫ್ ಮೆರೈನ್ ಇಂಜಿನಿಯರ್ ಪ್ರವೀಣ್ ಶೆಣೈ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ಇಲ್ಲಿ ನಡೆದ ವಾಣಿಜ್ಯ ವಿಭಾಗ,ವ್ಯವಹಾರ ಆಡಳಿತ, ಮಾನವಿಕ, ವಿಜ್ಞಾನ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಶಿಕ್ಷಕರ ಸಂಘ ಜಂಟಿಯಾಗಿ ಆಯೋಜಿಸಿದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ( ಕೌಶಲ್ಯ ವರ್ಧನೆ ಕಾರ್ಯಕ್ರಮ)ವನ್ನು ಉದ್ಘಾಟಿಸಿ ಮಾತನಾಡಿದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ನಾವು ಬದುಕಿನಲ್ಲಿ ಸಾಧಿಸಬೇಕಾದರೆ, ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಹುಮ್ಮಸ್ಸು ಇರಬೇಕು. ನಾವು ಯಾವುದೇ ಉದ್ಯೋಗಕ್ಕೆ ಹೋದಾಗ ಶಿಸ್ತು ತುಂಬಾ ಮುಖ್ಯವಾಗಿರುತ್ತದೆ. ಕೆಲಸದಲ್ಲಿ ಆಸಕ್ತಿಯನ್ನು ತೋರಿದರೆ ಉತ್ತಮ ಜೀವನವನ್ನು ನಿರ್ಮಿಸಲು ಸಾಧ್ಯ. ಆದರೆ ಈಗಿನ ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆಯಿದೆ. ನಾವು ಮಾಡುವ ಕಾರ್ಯದಲ್ಲಿ ಆಸಕ್ತಿ ವಹಿಸಿದರೆ ಎಲ್ಲವೂ ನಮ್ಮಿಂದ ಸಾಧ್ಯ. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೆಲ್ಲಾ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.


ವೇದಿಕೆಯಲ್ಲಿ ಕಾಲೇಜಿನ ವಿಶೇಷಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯ್ಕ್. ಬಿ, ಐಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್ ಕೆ. ಎಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಮುಕುಂದ ಕೃಷ್ಣ ವಂದಿಸಿ, ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸ್ವಾತಿ ಪಿ. ಎನ್ ನಿರೂಪಿಸಿದರು.

LEAVE A REPLY

Please enter your comment!
Please enter your name here