ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್‌ಆರ್‌ಟಿಸಿ)ದಿಂದ ಅತ್ಯಾಕರ್ಷಕ ಬಣ್ಣ ಹಾಗೂ ವಿನ್ಯಾಸಗಳೊಂದಿಗೆ ಲೋಕಾರ್ಪಣೆಗೊಂಡಿರುವ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್‌ಗಳಲ್ಲಿ ಪುತ್ತೂರು ವಿಭಾಗಕ್ಕೆ ಆಗಮಿಸಲಿರುವ 4 ಬಸ್‌ಗಳ ಪೈಕಿ 2 ಬಸ್‌ಗಳು ಆಗಮಿಸಿದ್ದು ನ.7ರಂದು ಸಂಜೆ 4 ಗಂಟೆಗೆ ಬಸ್ ನಿಲ್ದಾಣದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರು ಚಾಲನೆ ನೀಡಲಿದ್ದಾರೆ.
‘ಸಂತೋಷವು ಪ್ರಯಾಣಿಸುತ್ತಿದೆ’ ಎಂಬ ಟ್ಯಾಗ್‌ಲೈನ್‌ನೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಾಣಗೊಂಡಿರುವ ಈ ಬಸ್ 11.3 ಮೀಟರ್ ಉದ್ದದ 222 ವೀಲ್ ಬೇಸ್ ವೈಕಿಂಗ್ ಲೈಲ್ಯಾಂಡ್ ಚಾಸಿಗಳ ಮೇಲೆ ಈ ನಿರ್ಮಾಣಗೊಂಡಿದೆ. ಬಿಎಸ್-6 ತಂತ್ರಜ್ಞಾನ ಮಾದರಿಯ 197 ಹೆಚ್‌ಪಿ ಇಂಜಿನ್, ಸುಸಜ್ಜಿತವಾಗಿ ವಿನ್ಯಾಸಗೊಳಿಸಿದ 30 ಸೀಪರ್ ಬರ್ತ್ ಸೀಟುಗಳು, ಎ-.ಡಿ.ಎಸ್.ಎಸ್ ಸಿಸ್ಡಮ್ಸ್, ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳ ಚಾರ್ಜಿಂಗ್ ಸೌಲಭ್ಯ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ, ಎಲ್.ಇ.ಡಿ ಪ್ರದರ್ಶಿತ ಬಸ್ ಬರ್ತ್ ಸೀಟುಗಳ ಸಂಖ್ಯೆ, ಓದಲು ಉತ್ತಮ ಬೆಳಕಿನ ಎಲ್.ಇ.ಡಿ ದೀಪಗಳ ಅಳವಡಿಕೆ, ಆಡಿಯೋ ಸ್ಪೀಕರ್‌ಗಳ ಅಳವಡಿಕೆ ಹಾಗೂ ಸಾರ್ವಜನಿಕ ಮಾಹಿತಿ, ಡಿಜಿಟಲ್ ಗಡಿಯಾರ, ಎಲ್.ಇ.ಡಿ ನೆಲಹಾಸು, ಪ್ರತಿ ಪ್ರಯಾಣಿಕರಿಗೆ ಚಪ್ಪಲಿ ಇಡಲು ಸ್ಥಳಾವಕಾಶ ವ್ಯವಸ್ಥೆ, ಪ್ರಯಾಣಿಕರಿಗೆ ತಲೆದಿಂಬು ವ್ಯವಸ್ಥೆ, ಚಾಲಕರಿಗೆ ಸಹಕಾರಿಯಾಗುವಂತೆ ಹಿನ್ನೋಟ ಕ್ಯಾಮರಾಗಳ ಅಳವಡಿಕೆ ಮೊದಲಾದ ವಿಶೇಷತೆಗಳನ್ನು ಒಳಗೊಂಡಿದೆ.
ಪುತ್ತೂರು ವಿಭಾಗಕ್ಕೆ ಆಗಮಿಸಲಿರುವ 4 ಬಸ್‌ಗಳ ಪೈಕಿ 2 ಬಸ್‌ಗಳು ಈಗಾಗಲೇ ಆಗಮಿಸಿದೆ. ಈ ಬಸ್‌ಗಳು ಪುತ್ತೂರು-ಬೆಂಗಳೂರು ಮಧ್ಯೆ ಕಾರ್ಯಾಚರಣೆ ನಡೆಸಲಿದೆ. ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ನಾನ್ ಎಸಿ ಸ್ಲೀಪರ್ ಬಸ್‌ಗಳಿಗಿಂತ ಈ ಬಸ್ ಹಲವು ವೈಶಿಷ್ಠ್ಯತೆಗಳನ್ನು ಹೊಂದಿದ್ದು ಪ್ರಯಾಣಿಕರು ಇದರ ಸದುಪಯೋಗಪಡಕೊಳ್ಳಬಹುದು. ಈ ಹಿಂದೆ ಕಾರ್ಯಾಚರಿಸುತ್ತಿದ್ದ ರೂಟ್‌ಗಳಲ್ಲಿ ಬದಲಿಯಾಗಿ ಹೊಸ ಬಸ್‌ಗಳು ಕಾರ್ಯಾಚರಿಸಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.