ಬೆಟ್ಟಂಪಾಡಿ;ಯೋಜನೆಯ ಫಲಾನುಭವಿಗಳಿಗೆ ವ್ಹೀಲ್ ಚಯರ್ ವಿತರಣೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ಬೆಟ್ಟಂಪಾಡಿ ವಲಯದ 8 ಮಂದಿ ಫಲಾನುಭವಿಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ನೀಡುವ ವೀಲ್ ಚಯರನ್ನು ನ.6 ರಂದು ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.

  ಯೋಜನೆಯ ತಾಲೂಕು ಕೃಷಿ ಅಧಿಕಾರಿ ಉಮೇಶ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಡವರ ನಿರ್ಗತಿಕರ ಬಾಳಿಗೆ ಬೆಳಕು ನೀಡುವ ಕೆಲಸ ಮಾಡುತ್ತಿದ್ದು ಈ ವರ್ಷ ಪುತ್ತೂರು ತಾಲೂಕಿನಲ್ಲಿ ಸುಮಾರು 80 ಕುಟುಂಬಗಳಿಗೆ ಗಾಲಿ ಕುರ್ಚಿ, ನೀರಿನ ಬೆಡ್, ವಾಕ್ ಸ್ಟಿಕ್ ಮುಂತಾದ ವಿವಿಧ ಸಲಕರಣೆ ವಿತರಿಸಲಾಗಿದೆ. ಯೋಜನೆಯ ಸಂಘದಲ್ಲಿ ಇರದಿದ್ದರೂ ಗ್ರಾಮದಲ್ಲಿ ಇನ್ನೂ ಯಾರಾದರೂ ಇಂತಹ ನಿರ್ಗತಿಕರು ಇದ್ದರೆ ಹುಡುಕಿ ಅಂತಹವರಿಗೂ ನೀಡುವ ಕೆಲಸವನ್ನು ಯೋಜನೆಯ ಕಾರ್ಯಕರ್ತರು ಮಾಡುವಂತೆ ತಿಳಿಸಿದರು.

  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಮಾತನಾಡಿ ಪೂಜ್ಯ ಖಾವಂದರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ದಿ ಯೋಜನೆ ಎಲ್ಲರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದು ನಿರ್ಗತಿಕರ ಅಭಿವೃದ್ಧಿಗೆ ಇಂತಹ ಕಾರ್ಯಕ್ರಮ ಒಂದು ಉತ್ತಮ ಕಾರ್ಯಕ್ರಮ. ಬಡವರ ಅಭಿವೃದ್ಧಿಗೆ ಗ್ರಾಮ ಪಂಚಾಯತಿನಿಂದ ಸಾಧ್ಯವಿರುವ ಎಲ್ಲಾ ಸಹಕಾರ ನೀಡಲಿದೆ ಎಂದರು.ವಲಯಾಧ್ಯಕ್ಷ ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೆಂಜ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ನಾಯ್ಕ, ಇರ್ದೆ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ, ಕಕ್ಕೂರು ಒಕ್ಕೂಟದ ಅಧ್ಯಕ್ಷ ಶಂಕರ ಗುಂಡ್ಯಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಜಯಂತಿ ವಂದಿಸಿದರು. ಸೇವಾ ಪ್ರತಿನಿಧಿ ಪದ್ಮಾವತಿ.ಡಿ ಕಾರ್ಯಕ್ರಮ ನಿರೂಪಿಸಿದರು. ವಲಯದ ಸೇವಾ ಪ್ರತಿನಿಧಿಗಳು, ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಪಾಲ್ಗೊಂಡರು.

 ವಿಪತ್ತು ನಿರ್ವಹಣಾ ತಂಡದ ಕಾರ್ಯ ಶ್ಲಾಘನೀಯ
ಯೋಜನೆಯ ಕಾರ್ಯಕ್ರಮದಲ್ಲಿ ಒಂದಾದ ವಿಪತ್ತು ನಿರ್ವಹಣಾ ತಂಡ ಉತ್ತಮ ಕೆಲಸ ನಿರ್ವಹಿಸುತ್ತಿದೆ. ನಮ್ಮ ಕುಟುಂಬದ ಒಬ್ಬ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮೂರು ದಿನದ ನಂತರ ಹೆಣ ತೆಗೆಯಲು ಸಂಬಂಧಿಕರು ಹಿಂಜರಿದಾಗ ಯಾವುದೇ ಅಂಜಿಕೆ ಇಲ್ಲದೆ ಹೆಣವನ್ನು ಹಗ್ಗದಿಂದ ತೆಗೆದು ಬೇಕಾದ ವ್ಯವಸ್ಥೆ ಮಾಡಿದ ವಿಪತ್ತು ನಿರ್ವಹಣಾ ಘಟಕದ ಕಾರ್ಯ ಶ್ಲಾಘನೀಯ ಎಂದು ಪ್ರಕಾಶ್ ರೈ ಬೈಲಾಡಿ ಪ್ರಶಂಸಿಸಿದರು. 

LEAVE A REPLY

Please enter your comment!
Please enter your name here