




ಪುತ್ತೂರು: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಪುತ್ತೂರು ತಾಲೂಕು ಸಮಿತಿಯ ವತಿಯಿಂದ ನ 4 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ರಾಮಾಯಣ ಋಷಿ- ದರ್ಶನ ಕಾರ್ಯಕ್ರಮ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಜರಗಿತು.




ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ನಾರಾಯಣ ಶೇವಿರೆ ರಾಮಾಯಣ ಮಹಾಕಾವ್ಯವಾಗಿ ನೀಡುತ್ತಿರುವ ಜೀವನ ದರ್ಶನ ಮೌಲ್ಯವನ್ನು ತಿಳಿಸುತ್ತಾ “ರಾಮಾಯಣ ಕೇಳಬೇಕಾದರೆ ನಾವು ಸಾಮಾನ್ಯರಲ್ಲಿ ಸಾಮಾನ್ಯರಾಗಬೇಕು. ಕಾವ್ಯವೊಂದು ಮಹಾಕಾವ್ಯವಾಗುತ್ತಿದ್ದಂತೆ ಜಗತ್ತಿಗೆ ಅದರ ಕಾಣ್ಕೆಯನ್ನು ದರ್ಶಿಸಲು ನಾವು ಸಹಜವಾಗಿರಬೇಕು. ವಾಲ್ಮೀಕಿ ಋಷಿ ತಾನು ದರ್ಶಿಸಿದ ವಿಷಯವನ್ನು ಕಾವ್ಯವಾಗಿಸಿದಾಗ ರಾಮಾಯಣ ಹುಟ್ಟಿಕೊಂಡಿತು” ಎಂದರು.





ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ದ್ವಾರಕ ಕನ್ಸ್ಟ್ರಕ್ಷನ್ ಪುತ್ತೂರು ಇದರ ಪ್ರವರ್ತಕ ಗೋಪಾಲಕೃಷ್ಣ ಭಟ್ ನಮ್ಮಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಇತಿಹಾಸ ಹಾಗೂ ಪುರಾಣ ವಿಷಯಗಳ ಓದು ಅತಿ ಅಗತ್ಯ ಎಂದು ತಿಳಿಸಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಅಧ್ಯಕ್ಷ ರಮೇಶ್ ಚಂದ್ರ ನಾಯಕ್ ಓದುವ ಅಭ್ಯಾಸ ರೂಡಿಸಿಕೊಂಡಾಗ ನಮ್ಮ ವ್ಯಕ್ತಿತ್ವ ಅರಳುತ್ತದೆ ಎಂದರು. ತಾಲೂಕು ಘಟಕದ ಗೌರವಾಧ್ಯಕ್ಷ ಪ್ರೊ ವಿ.ಬಿ ಅರ್ತಿಕಜೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ರಾಮಾಯಣ ವಿಷಯ ಸಂಬಂಧಿ ಯುಗಲ ಸಂವಾದ, ಸ್ವಗತ ಹಾಗೂ ಪ್ರವಚನ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ದ್ವಾರಕ ಪ್ರತಿಷ್ಠಾನ ನೀಡಿದಂತಹ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು. ಜಿಲ್ಲಾ ಸಂಯೋಜಕ ಸುಂದರ ಶೆಟ್ಟಿ ಉಪಸ್ಥಿತರಿದ್ದರು.
ತಾಲೂಕು ಘಟಕದ ಅಧ್ಯಕ್ಷ ಗಣರಾಜ ಕುಂಬ್ಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಸತೀಶ್ ಇರ್ದೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಚೇತನ್ ಮೊಗ್ರಾಲ್ ಧನ್ಯವಾದ ಸಮರ್ಪಿಸಿದರು. ಸ್ಪರ್ಧಾ ತೀರ್ಪುಗಾರರಾಗಿ ಈಶ್ವರ ಭಟ್ ಗುಂಡ್ಯಡ್ಕ, ಕಿಶೋರಿ ದುಗ್ಗಪ್ಪ, ಶಶಾಂಕ ನೆಲ್ಲಿತ್ತಾಯ ಹಾಗೂ ಹೇಮ ಸ್ವಾತಿ ಸಹಕರಿಸಿದರು. ಶಾಲಾ ಸಹ ಶಿಕ್ಷಕರಾದ ವೀಣಾ ಸರಸ್ವತಿ ಹಾಗೂ ನಮಿತಾ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.





