ಓಟಿಗಾಗಿ ಬಿಜೆಪಿಯವರು ಜಲ್ಲಿ ಹಾಕಿ ಹೋಗಿದ್ದಾರೆ: ಬಾಲಕೃಷ್ಣ ಹಿತ್ತಿಲು
ಪುತ್ತೂರು: ಪುಣಚ ಗ್ರಾಮದ ಅಗ್ರಾಳ ಅಂಬಟೆಮೂಲೆ ರಸ್ತೆಗೆ ಶಾಸಕ ಅಶೋಕ್ ರೈಯವರು ಶಿಲಾನ್ಯಾಸ ನೆರವೇರಿಸಿದರು. ಬಹುವರ್ಷಗಳ ಬೇಡಿಕೆಯಾಗಿದ್ದ ಈ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರು 10 ಲಕ್ಷವನ್ನು ನೀಡಿದ್ದರು. ಹೆಚ್ಚುವರಿಯಾಗಿ ಇದೇ ರಸ್ತೆಗೆ 100 ಮೀಟರ್ ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಪುಣಚ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಹಿತ್ತಿಲುರವರು ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಬಿಜೆಪಿಯವರು ಇದೇ ರಸ್ತೆಯನ್ನು ಕಾಂಕ್ರೀಟ್ ಮಾಡುವುದಾಗಿ ಹೇಳಿ ಚುನಾವಣಾ ನೀತಿ ಸಂಹಿತೆಗೆ ಕೆಲವು ದಿನಗಳ ಮೊದಲು ಜಲ್ಲಿ ಹಾಕಿದ್ದರು. ಅಧಿಕಾರದಲ್ಲಿರುವಾಗ ಸಂಜೀವ ಮಠಂದೂರು ಅವರು ಈ ರಸ್ತೆಗೆ ನಯಾ ಪೈಸೆ ಅನುದಾನ ನೀಡಿಲ್ಲ. ಓಟಿನ ಆಸೆಗಾಗಿ ಕೊನೇ ಗಳಿಗೆಯಲ್ಲಿ ಜಲ್ಲಿ ಹಾಕಿಸಿದ್ದಾರೆ. ಕಾಂಗ್ರೆಸ್ ಸರಕಾರ ಈ ರಸ್ತೆಗೆ ಒಟ್ಟು 16 ಲಕ್ಷ ಅನುದಾನ ಬಿಡುಗಡೆಮಾಡಿದ್ದು, ಶೀಘ್ರದಲ್ಲೇ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಶಾಸಕ ಅಶೋಕ್ ರೈ ಮಾತನಾಡಿ ಈಗ ಕ್ಷೇತ್ರದಲ್ಲಿ ನಡೆಯುವ ಎಲ್ಲಾ ರಸ್ತೆ ಕಾಮಗಾರಿಗಳೂ ಕಾಂಗ್ರೆಸ್ ಸರಕಾರದ ಅನುದಾನದಿಂದ ನಡೆಯುತ್ತಿದೆ. ಜಲ್ಲಿ ಹಾಕಿದ ಮಾತ್ರಕ್ಕೆ ರಸ್ತೆ ಆಗುವುದಿಲ್ಲ. ಓಟು ಸಿಗಲೆಂದು ಜಲ್ಲಿ ಹಾಕಿರಬಹುದು. ಮುಂದಿನ ದಿನಗಳಲ್ಲಿ ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ. ಬಿ. ಮಾಜಿ ಅಧ್ಯಕ್ಷರಾದ ಮುರಳೀಧರ್ ರೈ ಮಟಂತಬೆಟ್ಟು, ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಪುಣಚ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಪುಣಚ, ಬೂತ್ ಅಧ್ಯಕ್ಷ ನಾರಾಯಣ ನೀರ್ಮಜಲು, ಸೀರಜ್ ಮಣಿಲ, ಬಾಲಕೃಷ್ಣ ರೈ ಬೈಲುಗುತ್ತು, ಬೋಳೋಡಿ ಚಂಧ್ರಹಾಸ ರೈ, ದಯಾನಂದ ಗೌಡ ಅಗ್ರಾಳ, ಜಗನ್ನಾಥ ಶೆಟ್ಟಿ ಕೋಡಂದೂರು, ರಾಜೇಂದ್ರ ರೈ ಬೈಲುಗುತ್ತು, ಕರುಣಾಕರ ಮತ್ತಿತರರು ಉಪಸ್ಥಿತರಿದ್ದರು.