ಆಧುನಿಕ ಜಗತ್ತಿನ ಬದಲಾವಣೆಗಳಿಗೆ ಹೊಂದಿಕೊಳ್ಳುವ ಕೌಶಲ್ಯ ವಿದ್ಯಾರ್ಥಿಗಳಿಗೆ ಅಗತ್ಯ – ಕಡಮಜಲು ಸುಭಾಷ್ ರೈ
ಕೆಯ್ಯೂರು: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ ಕೆಯ್ಯೂರು ಇವುಗಳ ಆಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ‘ಅರಿವು’ ಗ್ರಾಮೀಣ ವಿದ್ಯಾರ್ಥಿಗಳ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡಮಜಲು ಸುಭಾಷ್ ರೈ ಆಧುನಿಕ ಜಗತ್ತಿನ ವೇಗದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಅವಶ್ಯವಿರುವ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಕರಗತ ಮಾಡಿಕೊಳ್ಳುವುದು ಅಗತ್ಯ. ಆಗಮಾತ್ರ ಹೊಸ ಜಗತ್ತಿನಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕೆಪಿಎಸ್ ಕಾರ್ಯಾಧ್ಯಕ್ಷ ಎ.ಕೆ. ಜಯರಾಮ ರೈ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ ರೈ ಬೋಳೋಡಿ ಪ್ರತಿಷ್ಠಾನದ ಧ್ಯೇಯೋದ್ಧೇಶಗಳ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಇಸ್ಮಾಯಿಲ್ ಪಿ. ವಿದ್ಯಾರ್ಥಿಗಳಲ್ಲಿ ಸ್ವಸಾಮರ್ಥ್ಯವನ್ನು ಬೆಳೆಸುವ ಅಗತ್ಯತೆಯ ಕುರಿತು ಆಶಯನುಡಿಗಳನ್ನಾಡಿದರು.
ರೋಟರಿ ಸೆಂಟ್ರಲ್ ಪುತ್ತೂರು ಸದಸ್ಯ, ಪ್ರಾಧ್ಯಾಪಕ ಎಂ. ಎಸ್. ಶಿವರಾಮ್, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಮೀನಾಕ್ಷಿ ವಿ. ರೈ ಮತ್ತು ಜಯಂತ ಪೂಜಾರಿ ಕೆಂಗುಡೇಲು, ಕೆಯ್ಯೂರು ಗ್ರಾಮೀಣ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ವಿಶ್ವನಾಥ ಪೂಜಾರಿ ಕೆಂಗುಡೇಲು, ಕೋಶಾಧಿಕಾರಿ ಬೋಬಿ ಜೋಸೆಫ್ ಮೇವಾಡ, ಗ್ರಾಮೀಣ ಅಭಿವೃದ್ಧಿ ಸಮಿತಿ ಕೆದಂಬಾಡಿ ಅಧ್ಯಕ್ಷ ವಿಜಯಕುಮಾರ್ ರೈ, ಗ್ರಾಮೀಣ ಅಭಿವೃದ್ಧಿ ಸಮಿತಿ ಅರಿಯಡ್ಕ ಅಧ್ಯಕ್ಷ ದೇರ್ಲ ಅಮ್ಮಣ್ಣ ರೈ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಚಂದ್ರಹಾಸ ರೈ ಬಿ., ಡಾ. ರಾಜೇಶ್ ಬೆಜ್ಜಂಗಳ ಹಾಗೂ ರಾಕೇಶ್ ಶೆಟ್ಟಿ ‘ಅಧ್ಯಯನ ತಯಾರಿ’, ‘ಸ್ವ-ಅರಿವು’ ಮತ್ತು ‘ಗುರಿ ನಿರ್ಧಾರ’ ಎಂಬ ವಿಷಯಗಳು ಕುರಿತು ತರಬೇತಿ ನೀಡಿದರು. ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಕಾಲೇಜಿನ ವತಿಯಿಂದ ಪುಸ್ತಕ ಕಾಣಿಕೆ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಕೆ. ಕೃತಿಕಾ, ಅನ್ನತ್ ಬೀಬಿ, ದೀಪ್ತಿ ಪ್ರಾರ್ಥಿಸಿದರು. ಜೀವಶಾಸ್ತ್ರ ಉಪನ್ಯಾಸಕಿ ವತ್ಸಲಾ ಕುಮಾರಿ ಸ್ವಾಗತಿಸಿ, ಡಾ.ರಾಜೇಶ್ ಬೆಜಂಗಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇತಿಹಾಸ ಉಪನ್ಯಾಸಕಿ ಉಮಾಶಂಕರಿ ಎಸ್. ಕೆ. ವಂದಿಸಿದರು. ಇಂಗ್ಲಿಷ್ ಉಪನ್ಯಾಸಕ ಬಾಲಕೃಷ್ಣ ಬೇರಿಕೆ ಕಾರ್ಯಕ್ರಮ ನಿರೂಪಿಸಿದರು.