ಎಲೆಚುಕ್ಕಿ ರೋಗ, ಬೆಳೆ ವಿಮೆ ಪರಿಹಾರಕ್ಕೆ ತಿಂಗಳೊಳಗೆ ಉತ್ತರ ಸಿಗದಿದ್ದರೆ ತಾಲೂಕು, ಜಿಲ್ಲಾ ಮಟ್ಟಗಳಲ್ಲಿ ಹೋರಾಟ – ಆಮ್ ಆದ್ಮಿ ಪಾರ್ಟಿ ಎಚ್ಚರಿಕೆ

0

ಪುತ್ತೂರು: ಎಲೆಚುಕ್ಕಿ ರೋಗ ಮತ್ತು ಬೆಳೆ ವಿಮೆ ಪರಿಹಾರ ಸಿಗದೆ ಬಹಳಷ್ಟು ರೈತರು ತೊಂದರೆಗೆ ಒಳಗಾಗಿದ್ದಾರೆ. ಆದರೆ ಸರಕಾರ ರೈತರ ಬೆಳೆ ನಾಶ, ಹಳದಿ ರೋಗ, ಎಲೆ ಚುಕ್ಕಿ ರೋಗ ಸಹಿತ ಬೆಳೆ ವಿಮೆ ಪರಿಹಾರ ರೈತರಿಗೆ ಇನ್ನೂ ಸಿಕ್ಕಿಲ್ಲ. ಈ ಕುರಿತು ನಮಗೆ ಒಂದು ತಿಂಗಳೊಳಗೆ ಸರಕಾರ ಉತ್ತರ ನೀಡಬೇಕು. ತಪ್ಪಿದಲ್ಲಿ ಎಲ್ಲಾ ರೈತರನ್ನು ಸೇರಿಸಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡಲಿದ್ದು, ರೈತರಿಗೆ ಪರಿಹಾರ ಸಿಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಡಾ.ವಿಶು ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿ ಹಲವು ಸಂಶೋಧನೆ ನಡೆಯುತ್ತಿದೆ. ಆದರೆ ಯಾವುದೇ ಫಲಿತಾಂಶ ಬಂದಿಲ್ಲ. ಇಷ್ಟೇ ಕಾಲವಾಧಿಯಲ್ಲಿ ಫಲಿತಾಂಶ ಸಿಗಬೇಕೆಂಬ ಯಾವ ಒಂದು ಪ್ರಕ್ರಿಯೆ ನಡೆದಿಲ್ಲ. ರೈತರು ದಿನೆ ದಿನೆ ಸಮಸ್ಯೆಯಿಂದ ಕಂಗೆಡುತ್ತಿದ್ದಾರೆ. ಅವರ ತೋಟದಲ್ಲಿ ದಿನೇ ದಿನೇ ಮರಗಳು ಹಾಳಾಗುತ್ತಿವೆ. ಅಧಿಕಾರಿಗಳಾಗಲಿ, ಸರಕಾರವಾಲಿ ಇದರ ಬಗ್ಗೆ ಯಾವುದೇ ಸ್ಪಂದನೆ ನೀಡಿಲ್ಲ. ನಾನೊಬ್ಬ ಕೃಷಿ ವಿಜ್ಞಾನಿಯಾಗಿ ರೈತರ ತೋಟಗಳಿಗೆ ಭೇಟಿ ಕೊಟ್ಟಾಗ ರೈತರು ಅಡಿಕೆ ತೋಟಗಳಿಗೆ ಪರಿಹಾರ, ಬೆಳೆ ವಿಮೆ ಪರಿಹಾರಕ್ಕೆ ಕಾಯುತ್ತಿರುವುದು ಕಂಡು ಬಂದಿದೆ. ಸರಕಾರ ಪರಿಹಾರವಾಗಿ ಹಿಂದಿನ ಸರಕಾರ ಒಂದು ಎಕ್ರೆಗೆ ರೂ. 30ಸಾವಿರ ಘೋಷಣೆ ಮಾಡಿದ್ದು ಮಾತ್ರ ಇಲ್ಲಿನ ತನಕ ಬಂದಿಲ್ಲ. ಈಗಿನ ಸರಕಾರ ಬಂದು ಆರು ತಿಂಗಳಾಗಿದೆ. ಆದರೆ ಯಾವುದೇ ಯೋಜನೆ ಅನುಷ್ಠಾನಗೊಂಡಿಲ್ಲ. ಪುತ್ತೂರಿನ ಶಾಸಕರು ವಿಧಾನ ಸೌಧದಲ್ಲಿ ಪ್ರಸ್ತಾಪ ಮಾಡಿರುವುದು ಗೊತ್ತಿದೆ. ಅದೇ ರೀತಿ ವಿಧಾನಸಭೆ ಅಧ್ಯಕ್ಷರು ನಮ್ಮ ಜಿಲ್ಲೆಯವರೇ ಆಗಿದ್ದಾರೆ. ಅವರೆಲ್ಲ ಪರಿಹಾರ ಕೊಡುವ ಭರವಸೆ ಮಾತ್ರ ಹೇಳಿದ್ದಾರೆ. ಇಲ್ಲಿನ ತನಕ ಯಾವುದೇ ಪರಿಹಾರ ಬರಲಿಲ್ಲ. ಈ ನಿಟ್ಟಿನಲ್ಲಿ ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ತಕ್ಷಣ ಸಂಶೋಧನೆ ಮಾಡಬೇಕು. 6 ತಿಂಗಳೊಳಗೆ ಪರಿಹಾರ ಕೊಡಬೇಕು. ಹೊಸ ವಿಜ್ಞಾನಿಗಳನ್ನು ನೇಮಕ ಮಾಡಿ ಅವರಿಗೆ ಸಂಶೋಧನೆ ಗಡುವು ನೀಡಬೇಕು. ಒಟ್ಟಿನಲ್ಲಿ ಎಲೆ ಚುಕ್ಕಿ ರೋಗಕ್ಕೆ ಸಂಶೋಧನೆ ನಡೆಯಬೇಕು ಹೊರತು ಅದಕ್ಕೆ ಪರಿಹಾರ ನೀಡಿದರೆ ಪ್ರಯೋಜನವಿಲ್ಲ. ತೋಟ ನಶಿಸಿ ಹೋಗುತ್ತಾ ಇರುತ್ತದೆ. ರೈತರು ಕಂಗಾಲು ಆಗುತ್ತಾ ಹೋಗುತ್ತಾರೆ. ಈ ನಿಟ್ಟಿನಲ್ಲಿ ಯಾವುದೇ ರೋಗ ಬಂದಾಗ ಅದಕ್ಕೆ ಚಿಕಿತ್ಸೆ ಮುಖ್ಯ ಎಂದರು. ಇದರ ಜೊತೆಗೆ ಬೆಳೆ ವಿಮೆಯೂ ಸಹ ಪ್ರತಿ ವರ್ಷ ವಿಮೆ ಕಟ್ಟುವಲ್ಲಿ ವ್ಯತ್ಯಾಸ ಬರುತ್ತಿದೆ. ಇದನ್ನು ಸರಕಾರ ಗಮನಿಸಬೇಕು. ಬೆಳೆ ವಿಮೆ ಸರಿಯಾಗಿ ಸಿಗಬೇಕು. ಈ ಎಲ್ಲಾ ವಿಚಾರಗಳಿಗೆ ಒಂದು ತಿಂಗಳೊಳಗೆ ಉತ್ತರ ಸಿಗದಿದ್ದೆ ಆಮ್ ಆದ್ಮಿ ಪಾರ್ಟಿಯಿಂದ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಪುತ್ತೂರು ತಾಲೂಕು ಅಧ್ಯಕ್ಷ ಉದಯಶಂಕರ್, ಸಂಘಟನಾ ಕಾರ್ಯದರ್ಶಿ ಜನಾರ್ದನ ಬಂಗೇರ, ಮಾಜಿ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here