ಬರಹ: ಲೋಕೇಶ್ ಬನ್ನೂರು
ಪುತ್ತೂರು:ತಲೆಗೆ ರುಮಾಲು ಸುತ್ತಿ, ಬಣ್ಣದ ನಿಲುವಂಗಿ ತೊಟ್ಟು, ಕೊರಳಿಗೆ ಮಣಿ ಸರ ಧರಿಸಿ, ಹಣೆಗೆ ವಿಭೂತಿ-ಹೆಗಲಿಗೊಂದು ಜೋಳಿಗೆ, ಕೈಯಲ್ಲಿ ಕೋಲು ಕಿನ್ನರಿ ಹಿಡಿದು ಹಾಡುಗಳನ್ನು ಹಾಡುತ್ತ ಮನೆ ಮನೆಗೆ ಭೇಟಿಕೊಡುವ ಕಿನ್ನರಿ ಜೋಗಿ ದೀಪಾವಳಿ ಸಂದರ್ಭ ನಾಲ್ಕು ದಿನ ಪುತ್ತೂರುನಲ್ಲಿ ಕಾಣಸಿಗುತ್ತಾರೆ.ಪ್ರಸ್ತುತ ನಶಿಸಿ ಹೋಗುತ್ತಿರುವ ಸಂಪ್ರದಾಯ ಆಚರಣೆಗಳನ್ನು ದಾವಣಗೆರೆಯ ನೀರ‍್ಲಿಗೆ ಗ್ರಾಮದ ಮಂಜಪ್ಪ ಅವರು, ಭಾರತೀಯ ಸೇನೆಯಲ್ಲಿರುವ ತನ್ನ ಮಗ ನಾಪತ್ತೆಯಾದ ದುಃಖದ ನಡುವೆಯೂ ಸಂಪ್ರದಾಯ ಉಳಿಸಿಕೊಂಡಿರುವುದು ವಿಶೇಷ.
ಕಿನ್ನರಿ ಜೋಗಿಗಳಲ್ಲಿ ಹೆಚ್ಚಿನವರು ಮಲೆನಾಡು, ಬಯಲು ಸೀಮೆಯವರು.ಕಿನ್ನರಿ ಭಾರಿಸುವುದರಿಂದ ಇವರಿಗೆ ಈ ಹೆಸರು ಬಂತು ಎನ್ನುವ ಐತಿಹ್ಯವಿದೆ.ಇವರ ಕೈಯಲ್ಲಿರುವ ಸೋರೆ ಬುರುಡೆಯಿಂದ ಮಾಡಿದ ಸಂಗೀತ ಸಾಧನವಿದ್ದು ಇದನ್ನು ಬಿದಿರಿನ ಕೋಲು, ಚೆಕ್ಕೆ, ಜೇನುಮೇಣ, ತಂತಿ ಬಳಸಿ ತಯಾರಿಸಲಾಗುತ್ತದೆ.ಇದರ ತಂತಿಯನ್ನು ಹೆಬ್ಬೆರಳಿಗೆ ಸಿಕ್ಕಿಸಿಕೊಂಡ ಗಗ್ಗರದಿಂದ ಮೀಟಿ, ಶ್ರುತಿಗೆ ಸರಿಹೊಂದುವಂತೆ ಹಾಡು ಹೇಳುತ್ತಾರೆ.ಹಿಂದೆ ಕಿನ್ನರಿ ಜೋಗಿಗಳು ವರ್ಷ ಪೂರ್ತಿ ಊರೂರು ತಿರುಗಿ ಅಲೆಮಾರಿಗಳಂತೆ ಜೀವನ ನಡೆಸುತ್ತಿದ್ದರು.ಆದರೆ ಇತ್ತೀಚಿಗೆ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಕಾಣಸಿಗುತ್ತಾರೆ.ಮಿಕ್ಕುಳಿದ ದಿನದಲ್ಲಿ ಊರಿನಲ್ಲಿ ಬೇರೆ-ಬೇರೆ ಕೆಲಸ ನಿರ್ವಹಿಸುತ್ತಾರೆ.ಮಂಜಪ್ಪ ಅವರು ದೀಪಾವಳಿ ಸಂದರ್ಭ ಪುತ್ತೂರು, ಸುಳ್ಯದಲ್ಲಿ, ಶಿವರಾತ್ರಿ ಸಂದರ್ಭ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾಣಸಿಗುತ್ತಾರೆ,ಉಳಿದ ದಿನಗಳಲ್ಲಿ ಊರಲ್ಲೇ ಇರುತ್ತಾರೆ.
ಮಹಾಭಾರತದ ಸನ್ನಿವೇಶಗಳ ವರ್ಣನೆ:
ಪಾಂಡವರ ವಂಶಸ್ಥರು ಎಂದು ಕರೆದುಕೊಳ್ಳುವ ಇವರು ಮಹಾಭಾರತದ ವನವಾಸ, ಜೂಜಾಟ, ವಸಾಪಹರಣ ಸನ್ನಿವೇಶಗಳನ್ನು ಹಾಡಿನ ರೂಪದಲ್ಲಿ ಕಟ್ಟಿಕೊಡುತ್ತಾರೆ.ಇವರಲ್ಲಿ ಕೆಲವರು ಮಹಾಭಾರತದ ಹತ್ತು-ಹದಿಮೂರು ಪರ್ವಗಳನ್ನು ಬಾಯಿಪಾಠ ಮಾಡಿ ಹಾಡುತ್ತಾರೆ.
ಕಟ್ಟುಕಟ್ಟಲೆ ಸೇವೆ:
ವರ್ಷಕ್ಕೊಮ್ಮೆ ಬೇರೆ-ಬೇರೆ ಊರಿಗೆ ತೆರಳಿ ಹಾಡು ಹಾಡಿ ಹಣ, ಧವಸ ಧಾನ್ಯಗಳನ್ನು ಸಂಗ್ರಹಿಸಿ ಕುಲದೇವ ಭೆರವ ಸ್ವಾಮಿ ಮತ್ತು ಗುರು ಪೀಠಕ್ಕೆ ಕಾಣಿಕೆ ಸಲ್ಲಿಸಿ ಊರಿಗೆ ತೆರಳಬೇಕು ಎನ್ನುವುದು ಇವರಲ್ಲಿ ತಲೆತಲಾಂತರದಿಂದ ಬಂದ ಸಂಪ್ರದಾಯವಾಗಿದೆ.ಮಕ್ಕಳು ವಿದ್ಯಾವಂತರಾಗಿರುವುದರಿಂದ ಕೆಲವರು ಆರ್ಥಿಕವಾಗಿಯೂ ಸದೃಢರಾಗಿದ್ದಾರೆ.ಆದರೂ ಧಾರ್ಮಿಕ ನಂಬಿಕೆ ಗಟ್ಟಿಯಾಗಿರುವುದರಿಂದ ಮನೆಯಲ್ಲೊಬ್ಬರು ಅಥವಾ ಕುಟುಂಬದಲ್ಲೊಬ್ಬರು ವರ್ಷದಲ್ಲಿ ಒಂದು ತಿಂಗಳು ಊರೂರು ತಿರುಗಾಟ ನಡೆಸುತ್ತಾರೆ.ಮಂಜಪ್ಪ ಅವರು ಹರಕೆ ರೂಪದಲ್ಲಿ ಸಂಗ್ರಹವಾದ ಹಣದಲ್ಲಿ ಅಹಾರಕ್ಕೆ ಅಗತ್ಯವಾದುದನ್ನು ಇರಿಸಿಕೊಂಡು ಉಳಿದಿರುವುದನ್ನು ಮಂಗಳೂರು ಕದ್ರಿ ದೇವಸ್ಥಾನಕ್ಕೆ ಜೋಗಿ ದೇವರಿಗೆ ಸಮರ್ಪಿಸುತ್ತಾರೆ.
ಕುಲದೇವರಿಗೆ ಕಾಣಿಕೆ:
ನನ್ನ ತಂದೆಯವರಿಂದ ನನಗೆ ಈ ಸಂಪ್ರದಾಯ ಬಂದಿದೆ.ವರ್ಷದಲ್ಲಿ ಒಂದು ಬಾರಿ ನಾವು ಇದನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕು.ಹಾಡು ಹೇಳಿ ಮನೆಯವರು ಕೊಟ್ಟ ಹಣವನ್ನು ಸ್ವೀಕರಿಸಿ ಒಳ್ಳೆಯದಾಗಲಿ ಎಂದು ಹರಸಿ ಕುಲದೇವರಿಗೆ ಕಾಣಿಕೆ ಸಲ್ಲಿಸುತ್ತೇವೆ.ಕರಾವಳಿ ಭಾಗದಲ್ಲಿ ಮಂಗಳೂರು ಕದ್ರಿ ದೇವಸ್ಥಾನದಲ್ಲಿ ಜೋಗಿ ದೇವರಿಗೆ ಸಮರ್ಪಿಸುತ್ತೇನೆ ಎಂದು ಕಿನ್ನರಿ ಜೋಗಿ ಮಂಜಪ್ಪ ದಾವಣಗೆರೆ ಹೇಳಿದರು.
ನನ್ನ ಮಗ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ.12 ವರ್ಷ ಸೇವೆ ಸಲ್ಲಿಸಿ ಮೊಮ್ಮಗನ ನಾಮಕರಣಕ್ಕೆ 2014ರ ಅ.15ರಂದು ರೈಲು ಹತ್ತಿ ಊರಿಗೆ ಬರಬೇಕಾಗಿತ್ತು.ಆದರೆ ಆತ ಬರಬೇಕಾಗಿದ್ದ ರೈಲಿನಲ್ಲಿ ಆತನ ಬ್ಯಾಗ್, ಕಂಪ್ಯೂಟರ್ ಮಾತ್ರ ಬಂದಿತ್ತು.ಮಗನ ಮಾಹಿತಿಯೇ ಇಲ್ಲ.ಈ ಕುರಿತು ಚೆನ್ನೈಯಲ್ಲಿ ಪೊಲೀಸ್ ದೂರು ನೀಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನೋವಿನಲ್ಲೂ ನಮ್ಮ ಹರಕೆಯ ಸಂಪ್ರದಾಯವನ್ನು ನಿಲ್ಲಿಸಿಲ್ಲ-
ಮಂಜಪ್ಪ ದಾವಣಗೆರೆ, ಕಿನ್ನರಿ ಜೋಗಿ