ಪುತ್ತೂರು: ವೀರಮಂಗಲ ಶುಭೋದಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವವು ನ.10ರಂದು ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಕುಮಾರಧಾರಾ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ವೀರಮಂಗಲ ಶ್ರೀವಿಷ್ಣುಮೂರ್ತಿ ದೇವಸ್ಥಾನದ ಅರ್ಚಕ ರಾಧಾಕೃಷ್ಣ ಶಗ್ರಿತ್ತಾಯರವರು ಮಾತನಾಡಿ, ಯೋಜನೆಯಲ್ಲಿ ಹಲವಾರು ಕಾರ್ಯಕ್ರಮ ನಡೆಸುತ್ತಿದ್ದು, ಮಹಿಳೆಯರಲ್ಲಿ ನವಚೈತನ್ಯ ತುಂಬಲು ಜ್ಞಾನವಿಕಾಸ ಕಾರ್ಯಕ್ರಮವು ಮಹತ್ತರ ಪಾತ್ರ ಪಡೆದಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ್ ಮಾತನಾಡಿ, ಯೋಜನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವೀರಮಂಗಳ ಹಿ.ಪ್ರಾ ಶಾಲಾ ಮುಖ್ಯ ಗುರು ತಾರಾನಾಥ ಸವಣೂರು, ವಲಯದ ಜನಜಾಗ್ರತಿ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಜಾನಕಿ ಅಧ್ಯಕ್ಷತೆ ವಹಿಸಿದ್ದರು. ವಲಯಧ್ಯಕ್ಷ ಸುಂದರ್, ಒಕ್ಕೂಟದ ಅಧ್ಯಕ್ಷ ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು. ಸೇವಾಪ್ರತಿನಿಧಿ ಯಮುನಾ ಸ್ವಾಗತಿಸಿದರು. ಕೇಂದ್ರದ ಸದಸ್ಯೆ ನಾಗವೇಣಿ ವಂದಿಸಿದರು. ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕೇಂದ್ರದ ಸದಸ್ಯರು, ಇತರ ಸ್ವ ಸಹಾಯ ಪ್ರಗತಿ ಬಂದು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.