ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಆಡಳಿತಾವಧಿ ಪೂರ್ಣ – ಪುತ್ತೂರು, ಕಡಬದ 15 ದೇವಸ್ಥಾನಗಳಿಗೆ ಆಡಳಿತಾಧಿಕಾರಿಗಳ ನೇಮಕ

0

ಪುತ್ತೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವ್ಯಾಪ್ತಿಯಲ್ಲಿರುವ ಪುತ್ತೂರು ಹಾಗೂ ಕಡಬ ತಾಲೂಕಿನ 15 ‘ಸಿ’ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಿ ಜಿಲ್ಲಾ ಧಾರ್ಮಿಕ ಪರಿಷತ್‌ನ ಪದನಿಮಿತ್ತ ಕಾರ್ಯದರ್ಶಿ ಹಾಗೂ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತ ಆದೇಶಿಸಿದ್ದಾರೆ.
‘ಸಿ’ ಗ್ರೇಡ್ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅಧಿಕಾರದ ಅವಧಿಯು ನ.4ಕ್ಕೆ ಅಂತ್ಯಗೊಂಡಿದೆ. ಇಲಾಖಾ ಕಾಯ್ದೆಯಂತೆ ವಿಧಿ 25ರ ಪ್ರಕಾರ ನೂತನ ವ್ಯವಸ್ಥಾಪನಾ ಸಮಿತಿ ರಚಿಸಲು ಕ್ರಮಕೈಗೊಳ್ಳಲು ಸಾಕಷ್ಟು ಕಾಲಾವಕಾಶ ಆವಶ್ಯಕವಾಗಿರುವುದರಿಂದ ಸದರಿ ದೇವಸ್ಥಾನ, ದೈವಸ್ಥಾನಗಳಿಗೆ ಕಾಯ್ದೆಯ 29ರ ಪ್ರಕಾರ ಹೊಸ ವ್ಯವಸ್ಥಾಪನಾ ಸಮಿತಿ ರಚನೆಯಾಗುವ ತನಕ ಆಡಳಿತಾಧಿಕಾರಿಗಳ ನೇಮಕಾತಿ ಮಾಡಲಾಗುತ್ತದೆ. ದೇವಳದ ಆಡಳಿತಾತ್ಮಕ ಹಿತದೃಷ್ಠಿಯಿಂದ ಜಿಲ್ಲಾ ಧಾರ್ಮಿಕ ಪರಿಷತ್‌ನ ಘಟನ್ನೋತ್ತರ ಅನುಮೋದನೆ ಪಡೆಯುವ ನಿರೀಕ್ಷಣೆಯ ಮೇರೆಗೆ ಸಿ ಗ್ರೇಡ್ ಸೇರಿದ ಅಧಿ ಸೂಚಿತ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿಲಾಗಿದೆ.

ನೇಮಕಾತಿ ಮಾಡಲಾದ ಅಧಿಕಾರಿಗಳು ಸಂಬಂಧಿಸಿದ ದೇವಸ್ಥಾನ/ದೈವಸ್ಥಾನಗಳ ಅವಧಿ ಮುಗಿಯುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಂದ ಕೂಡಲೇ ಸಂಪೂರ್ಣ ಪ್ರಭಾರವನ್ನು ಪಡೆದುಕೊಂಡು ವರದಿ ನೀಡುವಂತೆ ಸೂಚಿಸಲಾಗಿದೆ. ಅಲ್ಲದೆ ಕಾಯ್ದೆಯ ಕಲಂ 7ರ ಪ್ರಕಾರ ನಿಯೋಜಿಸಲಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಕರಣಿಕರು ಹಿಂದೂಯೇತರರಾಗಿದ್ದಲ್ಲಿ ಆಡಳಿತಾಧಿಕಾರಿ ಹುದ್ದೆಯನ್ನು ಪ್ರಭಾರ ವಹಿಸಲು ಅವಕಾಶವಿರುವುದಿಲ್ಲ. ಅಂತಹ ಪ್ರಕರಣಗಳಿದ್ದಲ್ಲಿ ಪ್ರಸ್ತಾವಣೆ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಆಡಳಿತಾಧಿಕಾರಿ ನೇಮಕಗೊಂಡಿರುವ ದೇವಸ್ಥಾನಗಳು:
ಮಾಡ್ನೂರು ಗ್ರಾಮದ ಕಾವು ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಪುತ್ತೂರು ಹೋಬಳಿ ಕಂದಾಯ ನಿರೀಕ್ಷಕ, ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತಾಲೂಕು ಕಚೇರಿ ಭೂಮಿ ಶಾಖೆಯ ಉಪತಹಶೀಲ್ದಾರ್, ಕಲ್ಲೇಗ ಕಲ್ಕುಡ-ಕಲ್ಲುರ್ಟಿ ದೈವಸ್ಥಾನಕ್ಕೆ ಪುತ್ತೂರು ಕಸಬ ಗ್ರಾಮಕರಣಿಕ, ಇರ್ದೆ ಗ್ರಾಮದ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಪೂಮಾಣಿ, ಕಿನ್ನಿಮಾಣಿ ದೈವಸ್ಥಾನಕ್ಕೆ ಬೆಟ್ಟಂಪಾಡಿ ಗ್ರಾಮಕರಣಿಕ, ಬಡಗನ್ನೂರು ಗ್ರಾಮದ ಪಡುಮಲೆ ಶ್ರೀಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬಡಗನ್ನೂರು ಗ್ರಾಮಕರಣಿಕ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಪುತ್ತೂರು ತಾಲೂಕು ಕಚೇರಿ ಚುನಾವಣಾ ಶಾಖಾ ಉಪತಹಶೀಲ್ದಾರ್, ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೆಯ್ಯೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖ ದೇವಸ್ಥಾನಕ್ಕೆ ಮುಡ್ನೂರು ಗ್ರಾಮಕರಣಿಕ, ಶಿರಾಡಿ ಅಮ್ಮಾಜೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿರಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀಮಹಿಷಮರ್ದಿನಿ ದೇವಸ್ಥಾನಕ್ಕೆ ಕೋಡಿಂಬಾಡಿ ಗ್ರಾಮಕರಣಿಕ, ಶಾಂತಿಗೋಡು ಗ್ರಾಮದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಶಾಂತಿಗೋಡು ಗ್ರಾಮಕರಣಿಕ, ಕೊಲ ಗ್ರಾಮದ ಆತೂರು ಶ್ರೀಸದಾಶಿವ ಮಹಾಗಣಪತಿ ದೇವಸ್ಥಾನಕ್ಕೆ ಆಲಂಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಚಾರ್ವಾಕ ಗ್ರಾಮದ ಕಾಸ್ಪಾಡಿ ಶ್ರೀಕಪಿಲೇಶ್ವರ ದೇವಸ್ಥಾನಕ್ಕೆ ಚಾರ್ವಾಕ ಗ್ರಾಮಕರಣಿಕ, ಬಳ್ಪ ಶ್ರೀ ಸಂಪುಟ ನರಸಿಂಹ ದೇವಸ್ಥಾನ ಮತ್ತು ಯಜ್ಞಮೂರ್ತಿ ದೇವಸ್ಥಾನಕ್ಕೆ ಬಳ್ಪ ಗ್ರಾಮಕರಣಿಕ ಹಾಗೂ ಸರ್ವೆ ಗ್ರಾಮದ ಎಲಿಯ ಶ್ರೀವಿಷ್ಣುಮೂರ್ತಿ ದೇವಸ್ಥಾನ್ಕಕೆ ಸರ್ವೆ ಗ್ರಾಮಕರಣಿಕರನ್ನು ನೇಮಿಸಿ ಆದೇಶಿಸಲಾಗಿದೆ.

LEAVE A REPLY

Please enter your comment!
Please enter your name here