ಪುತ್ತೂರು:ಆರು ದಿನಗಳ ಹಿಂದೆ ತಲ್ವಾರ್‌ನೊಂದಿಗೆ ಕಾರಲ್ಲಿ ಬಂದು ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿಯ ಬಳಿಯಲ್ಲಿ ಮನೀಷ್ ಕುಲಾಲ್ ಎಲ್ಲಿ ಎಂದು ಕೇಳಿ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆಯೊಡ್ಡಿದ್ದ 7 ಮಂದಿ ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ನ.10ರಂದು ಘಟನೆ ನಡೆದಿತ್ತು.ರಾಜಕೀಯ ವಿಚಾರದಲ್ಲಿ ವಾಟ್ಸಾಪ್‌ನಲ್ಲಿ ರವಾನೆಯಾದ ಸಂದೇಶದ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿಯೇ ಚರ್ಚೆ ನಡೆದು ದೂರವಾಣಿ ಮಾತುಕತೆ ಸಂದರ್ಭ ವಾಗ್ವಾದ ನಡೆದು ಬಳಿಕ ಹಿಂಜಾವೇ ಮುಖಂಡ ದಿನೇಶ್ ಪಂಜಿಗ ಅವರ ನೇತೃತ್ವದ ತಂಡ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಛೇರಿಯ ಮುಂಭಾಗಕ್ಕೆ ಬಂದು ಮನೀಶ್ ಕುಲಾಲ್ ಎಂಬವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು.
ಈ ಸಂದರ್ಭ ಪುತ್ತಿಲ ಪರಿವಾರದ ಕಚೇರಿಯೊಳಗಿದ್ದ ಪ್ರಮುಖರು ಹೊರಬಂದು ತಂಡವನ್ನು ಸಮಾಧಾನಪಡಿಸಿದ ವೇಳೆ ತಂಡದವರು, ತಾವು ಬಂದಿದ್ದ ಕಾರಿನ ಬಳಿಗೆ ವಾಪಸ್ ಹೋಗುವಾಗ ದಿನೇಶ್ ಪಂಜಿಗ ಅವರ ಬೆನ್ನಿನ ಹಿಂದಿನ ಭಾಗದಲ್ಲಿ ತಲ್ವಾರ್ ಮಾದರಿಯ ಆಯುಧ ಇರುವುದು ಪತ್ತೆಯಾಗಿತ್ತು.ಸಿಸಿ ಟಿವಿಯಲ್ಲಿಯೂ ದೃಶ್ಯ ಸೆರೆಯಾಗಿತ್ತು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸುತ್ತುವರಿದು ಆರೋಪಿಗಳನ್ನು ಬಂಧಿಸಿದ್ದರು.ಈ ಪೈಕಿ ಇಬ್ಬರು ಅಪ್ರಾಪ್ತ ಬಾಲಕರನ್ನು ಬಿಡುಗಡೆಗೊಳಿಸಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಾದ ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ, ನರಿಮೊಗರು ಗ್ರಾಮದ ಭವಿತ್, ಬೊಳುವಾರು ನಿವಾಸಿ ಮನ್ವಿತ್, ಚಿಕ್ಕಮುಡ್ನೂರು ನಿವಾಸಿ ಜಯಪ್ರಕಾಶ್, ಚರಣ್, ಬನ್ನೂರು ಗ್ರಾಮದ ಮನೀಶ್, ಕಬಕದ ವಿನೀತ್ ಎಂಬವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ನ್ಯಾಯಾಲಯ ಆದೇಶಿಸಿದೆ.ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡು, ಯಶವಂತ್ ವಾದಿಸಿದ್ದರು.