ಪಾಣಾಜೆಯಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ, ಸಂಘದ ನೂತನ ಕಟ್ಟಡ ಉದ್ಘಾಟನೆ

0

ಪುತ್ತೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದ.ಕ.ಜಿಲ್ಲಾ ಸಹಕಾರಿ ಯೂನಿಯನ್, ಪುತ್ತೂರು ತಾಲೂಕು ಸಹಕಾರಿ ಯೂನಿಯನ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಾಣಾಜೆ ಮತ್ತು ಪುತ್ತೂರು ಹಾಗೂ ಕಡಬ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹ-2023 ಆಚರಣೆ ಹಾಗೂ ಪಾಣಾಜೆ ಪ್ರಾ.ಕೃ.ಪ. ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು.


ಸಂಘ ಹಲವು ಏಳುಬೀಳುಗಳ ದಾಟಿ ಹೊಸಬೆಳಕನ್ನು ಕಂಡಿದೆ-ನಳಿನ್ ಕುಮಾರ್ ಕಟೀಲು:
ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ನಾಮ ಫಲಕ ಅನಾವರಣ, ನೂತನ ಸಭಾಂಗಣ, ಅಟಲ್ ಸೇವಾ ಕೇಂದ್ರ ಉದ್ಘಾಟಿಸಿ ಬಳಿಕ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ದ.ಕ. ಸಂಸದ ನಳಿನ್ ಕುಮಾರ್ ಕಟೀಲುರವರು, ದೇಶದ ಅಭಿವೃದ್ಧಿಯಲ್ಲಿ ಸಹಕಾರಿರಂಗದ ಕೊಡುಗೆ ಅಪಾರವಿದೆ. ಕೃಷಿಕರಿಗೆ, ಬಡವರಿಗೆ ವ್ಯವಹಾರ ಜ್ಞಾನವನ್ನು ಕಲಿಸಿಕೊಟ್ಟದ್ದು ಸಹಕಾರಿ ರಂಗ. ಸಹಕಾರಿ ರಂಗಕ್ಕೆ ಹೊಸ ಮಂತ್ರಾಲಯವನ್ನು ರಚಿಸಿ ಸಹಕಾರಿ ರಂಗಕ್ಕೆ ಒಳ್ಳೆಯ ಕೊಡುಗೆಯನ್ನು ಕೇಂದ್ರ ಸರಕಾರ ನೀಡಿದೆ. ಅಲ್ಲದೆ ರೈತರಿಗೆ ಕೇಂದ್ರ ಸರಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದು ರೈತರಲ್ಲಿ ಆಶಾಕಿರಣವನ್ನು ಮೂಡಿಸಿದೆ ಎಂದರು. ಅತ್ಯಂತ ಉನ್ನತವಾದ ಸಹಕಾರಿ ಚಳುವಳಿ ನಮ್ಮ ಜಿಲ್ಲೆಯಲ್ಲಿದೆ. ಒಂದು ಸಂಸ್ಥೆ ಎಷ್ಟು ವರ್ಷದಿಂದ ಇದೆ ಎನ್ನುವುದು ಮುಖ್ಯ ಅಲ್ಲ. ಎಷ್ಟು ಸಾಧನೆ ಮಾಡಿದೆ ಎನ್ನುವುದು ಮುಖ್ಯ. ಇವತ್ತು ಪಾಣಾಜೆ ಸಹಕಾರಿ ಸಂಘ ಈ ದಿಶೆಯಲ್ಲಿ ಮುನ್ನಡೆದಿದೆ. ಹಲವು ಏಳುಬೀಳುಗಳನ್ನು ಕಂಡ ಸಂಘವು ಎದ್ದು ನಿಂತಿದೆ. ಹೊಸಬೆಳಕನ್ನು ಕಂಡಿದೆ. ನಷ್ಟದಿಂದ ಲಾಭವನ್ನು ತಂದುಕೊಟ್ಟ ಈ ಸಂಘದಲ್ಲಿ ವ್ಯವಹಾರ ಜಾಣ್ಮೆ ಕಂಡುಬಂದಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿ ಈ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ. ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘ ಮಾದರಿ ಸಂಘವಾಗಲಿ ಎಂದು ಶುಭಹಾರೈಸಿದರು.


ಎಲ್ಲಾ ಸಹಕಾರ ಸಂಘಗಳ ಒಗ್ಗೂಡುವಿಕೆಯಿಂದ ಸಹಕಾರಿ ಸಪ್ತಾಹ-ಶಶಿಕುಮಾರ್ ರೈ ಬಾಲ್ಯೊಟ್ಟು:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ನೂತನ ಸ್ವಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಸಪ್ತಾಹ ಕಾಟಾಚಾರಕ್ಕೆ ಆಗಬಾರದು ಎನ್ನುವ ದೃಷ್ಟಿಯಿಂದ ಕಳೆದ 8 ವರುಷಗಳಿಂದ ಎಲ್ಲಾ ಸಹಕಾರ ಸಂಘಗಳ ಒಗ್ಗೂಡುವಿಕೆಯಿಂದ ಸಹಕಾರಿ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ೨೨ ಕೃಷಿ ಪತ್ತಿನ ಸಹಕಾರ ಸಂಘಗಳ ಆರ್ಥಿಕ ಕ್ರೊಢೀಕರಣದಲ್ಲಿ ಸಹಕಾರಿ ಸಪ್ತಾಹ ನಡೆಯುತ್ತಿದೆ. ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘ ಕಳೆದ 12 ವರುಷಗಳಿಂದ ಲಾಭದ ಕಡೆಗೆ ಮುಖ ಮಾಡಿದೆ. ನಷ್ಟದಲ್ಲಿದ್ದ ಸಂಘವನ್ನು ಲಾಭದ ಕಡೆಗೆ ಕೊಂಡೊಯ್ಯುವಲ್ಲಿ ಸಂಘದ ಅಧ್ಯಕ್ಷರ ನೇತೃತ್ವದ ತಂಡ ಉತ್ತಮ ಕೆಲಸ ಮಾಡಿದೆ. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ರೂ.6 ಲಕ್ಷ ಅನುದಾನ ನೀಡಲಾಗಿದೆ ಎಂದು ಹೇಳಿದರು. ನ.30ರಂದು ಪುತ್ತೂರಿನಲ್ಲಿ ನಡೆಯಲಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನವೋದಯ ಸ್ವಸಹಾಯ ಸಂಘದ ಸದಸ್ಯರ ಕ್ರೀಡಾಕೂಟದ ಕುರಿತು ಅವರು ಮಾಹಿತಿ ನೀಡಿದರು.


ಪುತ್ತೂರಿನಿಂದ ಆರಂಭವಾದ ಸಹಕಾರಿ ರಂಗ ರಾಷ್ಟ್ರಮಟ್ಟದವರೆಗೆ ವ್ಯಾಪಿಸಿದೆ-ಎಸ್.ಬಿ.ಜಯರಾಮ ರೈ ಬಳೆಜ್ಜ:
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಎಸ್.ಬಿ.ಜಯರಾಮ ರೈ ಬಳೆಜ್ಜ ಮಾತನಾಡಿ ಮೊಳಹಳ್ಳಿ ಶಿವರಾಯರು ಪುತ್ತೂರಿನಿಂದ ಆರಂಭಿಸಿದ ಸಹಕಾರಿ ರಂಗ ರಾಷ್ಟ್ರಮಟ್ಟದವರೆಗೆ ವ್ಯಾಪಿಸಿದೆ. ಸಹಕಾರಿ ಕ್ಷೇತ್ರದಲ್ಲಿ ದ.ಕ.ಜಿಲ್ಲೆಯ ಸಹಕಾರ ಸಂಘಗಳು ಮಾತೃ ಸಂಘಗಳಾಗಿವೆ. ಡಾ| ರಾಜೇಂದ್ರ ಕುಮಾರ್‌ರವರ ಮಾರ್ಗದರ್ಶನದಲ್ಲಿ ಸಹಕಾರಿ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತಿದೆ. ಅವರ ಸಹಕಾರದಿಂದ ಸಂಘಗಳು ಪುನಶ್ಚೇತನಗೊಳ್ಳುತ್ತಿವೆ ಎಂದರು. ಎಷ್ಟು ಸಮಯ ಆಡಳಿತ ನಡೆಸಿದ್ದೇವೆ ಎನ್ನುವುದು ಮುಖ್ಯ ಅಲ್ಲ. ಆ ಸಮಯದಲ್ಲಿ ಎಷ್ಟು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ ಎಂದು ಹೇಳಿ ಅವರು ಎಲ್ಲರನ್ನು ಅಭಿನಂದಿಸಿದರು.


ಪುತ್ತೂರಿನಲ್ಲಿ ಹಾಲು ಒಕ್ಕೂಟ:
ಪುತ್ತೂರಿನಲ್ಲಿ ಹಾಲಿನ ಒಕ್ಕೂಟವನ್ನು ರಚಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಎಂದು ಹೇಳಿದ ಎಸ್.ಬಿ. ಜಯರಾಮ ರೈಯವರು, ಹೈನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ ರೂ.72000 ಸಾಲ ನೀಡುವ ಯೋಜನೆ ಇದೆ ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದರು.


ಪಾಣಾಜೆಯಲ್ಲಿ ಸಹಕಾರಿ ಸಪ್ತಾಹ ನಡೆಯಬೇಕೆಂಬ ತುಡಿತ-ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ:
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ ಕಳೆದ ಹಲವು ವರುಷಗಳಿಂದ ಸಹಕಾರಿ ಕ್ಷೇತ್ರ ಬಹಳಷ್ಟು ಬೆಳೆದಿದೆ. ಡಾ|ರಾಜೇಂದ್ರ ಕುಮಾರ್ ಸಹಕಾರಿ ಕ್ಷೇತ್ರವನ್ನು ಮುನ್ನಡೆಸಿದ್ದಾರೆ. ಅಲ್ಲದೆ ಎಲ್ಲರನ್ನು ಸಹಕಾರಿ ಕ್ಷೇತ್ರಕ್ಕೆ ಬರುವಂತೆ ಮಾಡಿದ್ದಾರೆ. ಕಳೆದ 4 ದಿನಗಳಿಂದ ಸಹಕಾರಿ ಸಪ್ತಾಹ ಆಚರಣೆ ನಡೆಯುತ್ತಿದೆ. ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಿಗೆ ಈ ಬಾರಿ ಪಾಣಾಜೆಯಲ್ಲಿ ನಡೆಯಬೇಕೆಂಬ ತುಡಿತವಿತ್ತು ಎಂದರಲ್ಲದೆ ಸಂಘವನ್ನು ಅಭಿವೃದ್ಧಿ ಮಾಡಿ ಸಪ್ತಾಹ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.


ನಷ್ಟದಲ್ಲಿದ್ದ ಸಂಘ ಮುನ್ನಡೆದದ್ದು ಒಂದು ಇತಿಹಾಸ- ವೆಂಕಟ್ರಮಣ ಬೋರ್ಕರ್:
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ ಸಹಕಾರಿ ರಂಗದಲ್ಲಿ ಕೆಲಸ ಮಾಡುವವರೂ ತುಂಬಾ ಮಂದಿ ಇದ್ದಾರೆ. ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕನಾಗಿಯೂ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ಸಂಘದಲ್ಲಿ ಒಂದೂವರೆ ಕೋಟಿ ಅವ್ಯವಹಾರ ನಡೆದು ಬಳಿಕ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಾನು ನಿರ್ದೇಶಕನಾಗಿ ಆಯ್ಕೆಯಾಗಿದ್ದೆ. ನಷ್ಟದಲ್ಲಿದ್ದ ಸಂಘ ಮುನ್ನಡೆದದ್ದು ಒಂದು ಇತಿಹಾಸ ಎಂದು ಹೇಳಿ ಆಗಿನ ಘಟನೆಗಳನ್ನು ಮೆಲುಕು ಹಾಕಿದರು. ವ್ಯಕ್ತಿ ಸಾಧನೆ ಮಾಡಿದಾಗ ಜನಮಾನಸದಲ್ಲಿ ಉಳಿಯುತ್ತಾನೆ. ಆಗ ಅವನು ಸನ್ಮಾನಕ್ಕೆ ಯೋಗ್ಯನಾಗುತ್ತಾನೆ. ಯೋಗ ಯೋಗ್ಯತೆಯಿಂದ ವ್ಯಕ್ತಿ ನಾಯಕನಾಗಿ ಬೆಳೆಯುತ್ತಾನೆ. ಇದನ್ನು ಇಲ್ಲಿನ ಅಧ್ಯಕ್ಷರಾದ ಪದ್ಮನಾಭ ಬೋರ್ಕರ್ ತೋರಿಸಿಕೊಟ್ಟಿದ್ದಾರೆ ಎಂದ ಅವರು ಸಹಕಾರಿ ತತ್ವದಡಿಯಲ್ಲಿ ಎಲ್ಲರೂ ಮುನ್ನಡೆಯೋಣ. ಪಾಣಾಜೆ ಸಹಕಾರಿ ಸಂಘ ಬೆಳೆದು ದಾರಿದೀಪವಾಗಲಿ ಎಂದರು.
ಕೃಷಿಕರಿಗೆ ಸಹಕಾರಿ ಕ್ಷೇತ್ರದಿಂದ ಉಪಯೋಗವಾಗಲಿ-ಮೈಮೂನತ್ತುಲ್ ಮೆಹ್ರಾ: ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ ಮಾತನಾಡಿ ಸಹಕಾರಿ ರಂಗ ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದೆ. ಕೃಷಿಕರಿಗೆ, ಬಡವರಿಗೆ ಸಹಕಾರಿ ಕ್ಷೇತ್ರದಿಂದ ಉಪಯೋಗವಾಗಲಿ ಎಂದು ಹೇಳಿ ಶುಭಹಾರೈಸಿದರು.

ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎನ್ನುವ ಧ್ಯೇಯ-ಡಾ|ಎಸ್.ಆರ್.ಹರೀಶ್ ಆಚಾರ್ಯ:
ಮಂಗಳೂರು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ|ಎಸ್.ಆರ್.ಹರೀಶ್ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ದೇಶದ ಎಲ್ಲಾ ರಾಜ್ಯ, ಜಿಲ್ಲೆಗಳಲ್ಲಿ ಸಹಕಾರಿ ಸಪ್ತಾಹ ಏಳು ದಿನ ನಡೆಯುತ್ತಿದೆ. ನಾವೆಲ್ಲ ಒಂದು ಎನ್ನುವ ಸಹಕಾರಿ ತತ್ವದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಎನ್ನುವ ಧ್ಯೇಯದಲ್ಲಿ ಸಪ್ತಾಹ ನಡೆಯುತ್ತಿದೆ. ಎಲ್ಲಾ ವರ್ಗದವರು ಭಾಗಿಯಾಗಿದ್ದೀರಿ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್, ಕ್ಯಾಂಪ್ಕೋ ಸಂಸ್ಥೆ ಹುಟ್ಟಿದ್ದು ಪುತ್ತೂರಿನಲ್ಲಿ. ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘ ನವೀನ ಉದ್ಯಮಶೀಲತೆಯನ್ನು ಮಾಡಿದೆ. ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾಥಮಿಕ ರಂಗಗಳಾಗಿ ಪ್ರಾಥಮಿಕ ಅವಶ್ಯಕತೆ ಪೂರೈಸಿದೆ ಎಂದ ಅವರು, ಸಹಕಾರಿ ರಂಗ ಡಿಜಿಟಲೈಜೇಶನ್ ಮೂಲಕ ಸಹಕಾರಿ ಅಭಿವೃದ್ಧಿಯಾಗಿದೆ. ಪಾಣಾಜೆ ಸಹಕಾರಿ ಸಂಘ ಮಾದರಿ ಸಂಘವಾಗಿ ಬೆಳೆದಿದೆ. ಶಿಥಿಲಾವಸ್ಥೆಗೆ ಹೋಗಿರುವ ಸಂಘವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ದು ಸಂಘ ಮಾದರಿಯಾಗಿದೆ ಇದು ಜ್ವಲಂತ ಉದಾಹರಣೆಯಾಗಿದೆ ಎಂದರು.



ಸಹಕಾರಿ ಸಪ್ತಾಹ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕ- ಪದ್ಮನಾಭ ಬೋರ್ಕರ್:
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್ ಪ್ರಾಸ್ತಾವಿಕ ಮಾತನಾಡಿ ಸಹಕಾರಿ ಸಂಘಗಳು ರೈತರ ಜೀವನಾಡಿಯಾಗಿದೆ. ಸರಕಾರ ಸಹಕಾರಿ ರಂಗಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ. ಸರಕಾರದ ಯೋಜನೆಗಳನ್ನು ರೈತರಿಗೆ ನೇರವಾಗಿ ನೀಡುವ ಮೂಲಕ ಸಹಕಾರಿ ಕ್ಷೇತ್ರ ಜನಪ್ರಿಯತೆ ಗಳಿಸಿದೆ. ಏಳು ದಿನಗಳ ಕಾಲ ನಡೆಯುವ ಸಹಕಾರಿ ಸಪ್ತಾಹ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮವಾಗಿದೆ ಎಂದರು. 1935ರಲ್ಲಿ ಪಾಣಾಜೆ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಯಾಗಿದೆ. ಆರ್ಥಿಕವಾಗಿ ಶೋಷಣೆ ನಡೆಯುತ್ತಿದ್ದ ಕಾಲವದು. ಜನರ ಅಭಿವೃದ್ಧಿಗಾಗಿ ಸಂಘ ಸ್ಥಾಪನೆಯಾಯಿತು. ಇಂದು ಊರಿನ ಹಿರಿಯರ ಸಹಕಾರದಿಂದ ಸಂಘ ಹೆಮ್ಮರವಾಗಿ ಬೆಳೆದಿದೆ ಎಂದರು. 1998-1999ರ ಸಮಯದಲ್ಲಿ ಸಂಘದಲ್ಲಿ ನಡೆದ ಅವ್ಯವಹಾರದಿಂದ ಅರಾಜಕತೆ ಸೃಷ್ಟಿಯಾಯಿತು. ಡಾ|ರಾಜೇಂದ್ರ ಕುಮಾರ್‌ರವರ ಭರವಸೆಯೊಂದಿಗೆ ಸಂಘಕ್ಕೆ ಪುನಶ್ಚೇತನ ದೊರೆಯಿತು. ಇದನ್ನು ಸವಾಲಾಗಿ ಸ್ವೀಕರಿಸಿಕೊಂಡು ಸಂಘವನ್ನು ಬೆಳೆಸಿದ್ದೇವೆ ಎಂದು ಹೇಳಿ ಸಂಘ ನಷ್ಟದಲ್ಲಿದ್ದ ಸಮಯದಲ್ಲಿ ನಡೆದ ಘಟನೆಗಳನ್ನು ತಿಳಿಸಿದರು. ಕಳೆದ ಬಾರಿ 84ಲಕ್ಷ ರೂ. ಲಾಭ ಗಳಿಸಿದ್ದೇವೆ. ಶೇ.12 ಡಿವಿಡೆಂಡ್ ನೀಡಲಾಗಿದೆ ಎಂದು ಹೇಳಿದ ಅವರು ಹಿರಿಯರ, ನಿರ್ದೇಶಕರ, ಸದಸ್ಯರ ಹಾಗೂ ಸಿಬಂದಿಗಳ ಸಹಕಾರ ನೆನಪಿಸಿದರು.


ಸಹಕಾರಿ ಧ್ವಜಾರೋಹಣ :
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಸಹಕಾರಿ ಧ್ವಜಾರೋಹಣ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಕಾರಿ ಕ್ಷೇತ್ರದ ಪಿತಾಮಹ ದಿ.ಮೊಳಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಸನ್ಮಾನ:
ಸಂಸದರಾಗಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ನಂಬರ್ ವನ್ ಸಂಸದ ಎಂದು ಹೆಗ್ಗಳಿಕೆಗೆ ಪಾತ್ರರಾದುದಕ್ಕೆ ನಳಿನ್ ಕುಮಾರ್ ಕಟೀಲ್‌ರವರನ್ನು ಶಲ್ಯ, ಹಾರ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಗೌರವಾರ್ಪಣೆ: ಪುತ್ತೂರು ಮತ್ತು ಕಡಬ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಸಿ.ಇ.ಒ.ಗಳನ್ನು ಹೂಗುಚ್ಚ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ವಾಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಅಶೋಕ್ ಗೌಡರವರನ್ನು ಗೌರವಿಸಲಾಯಿತು.


ಸುದ್ದಿ ಚಾನೆಲ್ ನಿರ್ಮಿತ ವಿಡಿಯೋ ಡಾಕ್ಯುಮೆಂಟರಿಗೆ ಚಾಲನೆ:
ಇದೇ ವೇಳೆ ಸಂಘದ ಸಾಧನೆಗಳು, ಏಳು ಬೀಳಿನ ಸಂಪೂರ್ಣ ಚಿತ್ರಣ ನೀಡುವ ವಿಡಿಯೋ ಡಾಕ್ಯುಮೆಂಟರಿಯನ್ನು ‘ಸುದ್ದಿ ಚಾನೆಲ್’ ನಿರ್ಮಾಣ ಮಾಡಲಿದ್ದು, ಸಭಾ ಕಾರ್ಯಕ್ರಮದಲ್ಲಿ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಕಂಪ್ಯೂಟರ್ ಗುಂಡಿ ಒತ್ತುವುದರ ಮೂಲಕ ಚಾಲನೆ ನೀಡಿದರು. ಸುದ್ದಿ ಚಾನೆಲ್ ಮುಖ್ಯಸ್ಥ ಗೌತಮ್ ಶೆಟ್ಟಿ, ಡಾಕ್ಯುಮೆಂಟರಿ ವ್ಯವಸ್ಥಾಪಕ ಹಮೀದ್ ಕೂರ್ನಡ್ಕ ಹಾಗೂ ಉಮೇಶ್ ಮಿತ್ತಡ್ಕ ಉಪಸ್ಥಿತರಿದ್ದರು.


ನವೋದಯ ಸ್ವಸಹಾಯ ಸಂಘ ಉದ್ಘಾಟನೆ:
ನೂತನ ಸ್ವಸಹಾಯ ಸಂಘಗಳಾದ ಪಾಣಾಜೆ ಈಶ ನವೋದಯ ಸ್ವಸಹಾಯ ಸಂಘ ಮತ್ತು ನಿಡ್ಪಳ್ಳಿಯ ಶ್ರೀಕೃಷ್ಣ ಸ್ವಸಹಾಯ ಸಂಘವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಂಘದ ಪದಾಽಕಾರಿಗಳಿಗೆ ಪುಸ್ತಕ ನೀಡುವ ಮೂಲಕ ಉದ್ಘಾಟಿಸಿದರು.

ಕಾರ್ಡ್ ವಿತರಣೆ: ನೂತನವಾಗಿ ಉದ್ಘಾಟನೆಗೊಂಡ ಅಟಲ್ ಜನಸೇವಾ ಕೇಂದ್ರದ ಮೂಲಕ ಪಡೆದ ಈಶ್ರಂ ಕಾರ್ಡ್‌ನ್ನು ಫಲಾನುಭವಿಗಳಿಗೆ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಹಸ್ತಾಂತರಿಸಿದರು.
ಚೈತನ್ಯ ಆರೋಗ್ಯ ವಿಮೆ ಹಸ್ತಾಂತರ: ನವೋದಯ ಸ್ವಸಹಾಯ ಸಂಘದ ಸದಸ್ಯರಿಗೆ ಚೈತನ್ಯ ಆರೋಗ್ಯ ವಿಮೆಯ ಚೆಕ್‌ನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳೆಜ್ಜ ಹಸ್ತಾಂತರಿಸಿದರು.


ಪುತ್ತೂರು ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಶುಭಹಾರೈಸಿದರು. ದ.ಕ.ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ಕೆ., ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರುಗಳಾದ ರಾಜಶೇಖರ ಜೈನ್, ಸಾವಿತ್ರಿ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಣಾಜೆ ಪ್ರಾ.ಕೃ. ಪ. ಸಹಕಾರಿ ಸಂಘದ ಉಪಾಧ್ಯಕ್ಷ ಡಾ.ಅಖಿಲೇಶ್ ಪಿ.ಎಂ., ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಕುಮಾರ್, ನಿರ್ದೇಶಕರಾದ ನಾರಾಯಣ ರೈ ಕೊಪ್ಪಳ, ಕುಮಾರ ನರಸಿಂಹ ಬುಳೆನಡ್ಕ, ತಿಮ್ಮಣ್ಣ ರೈ ಆನಾಜೆ, ರಾಮನಾಯ್ಕ ಜರಿಮೂಲೆ, ರವೀಂದ್ರ ಭಂಡಾರಿ ಬೈಂಕ್ರೋಡು, ಗೀತಾ ಆರ್. ರೈ ಪಡ್ಯಂಬೆಟ್ಟು, ಗುಣಶ್ರೀ ಜೆ. ಪರಾರಿ, ಪ್ರೇಮಾ ಬರಂಬೊಟ್ಟು, ಎಸ್‌ಸಿಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕ ವಸಂತ ಎಸ್. ಅತಿಥಿಗಳನ್ನು ಗೌರವಿಸಿದರು. ನಿರ್ದೇಶಕರಾದ ಸಂಜೀವ ಕೀಲಂಪಾಡಿ, ರವಿಶಂಕರ ಶರ್ಮ ಬೊಳ್ಳುಕಲ್ಲು, ಲೆಕ್ಕಿಗರಾದ ಸಂದೇಶ್ ಬಿ., ಪ್ರದೀಪ್ ರೈ ಎಸ್., ಗುಮಾಸ್ತರಾದ ತೃಪ್ತಿ ಬಿ., ಯಂ.ಕೆ.ಕುಮಾರ್, ಸುಧಾಕರ ಭಟ್ ಬಿ., ಅನುರಾಧ ಕೆ., ಪದ್ಮನಾಭ ಮೂಲ್ಯ ಜಿ., ರಮೇಶ್ ನಾಯ್ಕ ಎ.ಎನ್., ಸಿಬಂದಿಗಳಾದ ಚಿತ್ರಕುಮಾರ್, ಜಯಶ್ರೀ, ಸ್ವಸ್ತಿಕ್ ಶ್ರೀರಾಮ್, ಅಶ್ವಿನಿ, ಅವಿನಾಶ್ ಸಿ.ಎಚ್., ವಿಶ್ವನಾಥ ಯು, ಸುಜಿತ್ ಎ.ಆರ್., ಸುಮಿತ್ರ ವಿ.ಎಮ್.ರವರು ಸಹಕರಿಸಿದರು. ಸಹಕಾರಿ ರಂಗದ ಗಣ್ಯರು, ರಾಜಕೀಯ ಮುಖಂಡರುಗಳು, ಪುತ್ತೂರು ಮತ್ತು ಕಡಬ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಸಿ.ಇ.ಒ.ಗಳು, ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು. ವಾಣಿ ಬೈಂಕ್ರೋಡು ಪ್ರಾರ್ಥಿಸಿದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಽಕಾರಿ ಎಸ್.ವಿ.ಹಿರೇಮಠ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.

ಅಭಿವೃದ್ಧಿ ಪಥದತ್ತ ಮುನ್ನಡೆಸಿದ ಅಧ್ಯಕ್ಷರಿಗೆ ಸನ್ಮಾನ
ಸಂಘದಲ್ಲಿ 1998ರಲ್ಲಿ ನಡೆದ ಅವ್ಯವಹಾರದಿಂದ ನಷ್ಟದಲ್ಲಿದ್ದ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಸಂಘವನ್ನು ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಸಿದ ಅಧ್ಯಕ್ಷ ಪದ್ಮನಾಭ ಬೋರ್ಕರ್‌ರವರನ್ನು ದಂಪತಿ ಸಮೇತ ಶಲ್ಯ, ಪೇಟ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ನ.30ರಂದು ಸಹಕಾರಿ ಜಾತ್ರೆ
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರವರ್ತಿತ ನವೋದಯ ಸ್ವಸಹಾಯ ಸಂಘದ ಸದಸ್ಯರ ಕ್ರೀಡಾಕೂಟ ನ.30ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದರು. ಸುಮಾರು 10000 ಸದಸ್ಯರಿಂದ ಪಥಸಂಚಲನ ನಡೆಯಲಿದೆ. ಈ ಕ್ರೀಡಾಕೂಟ ಜಾತ್ರೋತ್ಸವದ ಹಾಗೆ ನಡೆಯಬೇಕು ಎಲ್ಲರೂ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ವಿನಂತಿಸಿದರು.

ಗಣ್ಯರಿಗೆ ಸಹಕಾರಿ ಶಾಲು:
ಸಭಾ ಅತಿಥಿ ಗಣ್ಯರಿಗೆ ಹಾಗೂ ಸಹಕಾರಿ ಕ್ಷೇತ್ರದ ಪ್ರಮುಖರಿಗೆ ಸಂಘದ ವತಿಯಿಂದ ಸಹಕಾರಿ ಶಾಲು ಹಾಕಿ ಗೌರವಿಸಲಾಯಿತು. ಚೆಂಡೆ ಕೊಂಬು ವಾದನದ ಮೂಲಕ ಗಣ್ಯರಿಗೆ ಸ್ವಾಗತ: ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಕೊಂಬು, ಚೆಂಡೆ ವಾದನದ ಮೂಲಕ ವೇದಿಕೆಯತ್ತ ಬರಮಾಡಿಕೊಳ್ಳಲಾಯಿತು. ಈ ವೇಳೆ ಸಿಡಿಮದ್ದು ಪ್ರದರ್ಶನವೂ ನಡೆಯಿತು

LEAVE A REPLY

Please enter your comment!
Please enter your name here