ನಿವೃತ್ತ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ ಹುಟ್ಟುಹಬ್ಬ ಪ್ರಯುಕ್ತ ಕುಶಾಲನಗರದಲ್ಲಿ ಗುರು-ಶಿಷ್ಯರ ಸಮ್ಮಿಲನ

0

ಸಾಧಕ ಇಬ್ಬರು ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ

ಶ್ರೀನಿವಾಸ್ ಎಚ್.ಬಿ ಶಿಷ್ಯಂದಿರು, ಹಿತೈಷಿಗಳು ಹಾಗೂ ಅಭಿಮಾನಿಗಳಿಂದ ಸಂಭ್ರಮ

ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಅವರ 65ನೇ ಹುಟ್ಟು ಹಬ್ಬದ ಪ್ರಯುಕ್ತ ಹಿರಿಯ ವಿದ್ಯಾರ್ಥಿ ದಿನಾಚರಣೆ ಮತ್ತು ಸಾಧಕ ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ‘ಗುರು ಶಿಷ್ಯರ ಸಮ್ಮಿಲನ’ ಅ.19ರಂದು ಕುಶಾಲನಗರ ಪರಂಪರಾ ರೆಸಾರ್ಟ್‌ನಲ್ಲಿ ನಡೆಯಿತು.


ಬೆಳಿಗ್ಗೆ ಭಕ್ತಕೋಡಿ ಜಂಕ್ಷನ್‌ನಲ್ಲಿ ಡಾ.ಸೀತರಾಮ ಭಟ್ ಕಲ್ಲಮ ಅವರು ತೆಂಗಿನಕಾಯಿ ಒಡೆಯುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು.

ಪರಂಪರಾ ರೆಸಾರ್ಟ್‌ನಲ್ಲಿ ಸಮಾರಂಭ:
ಕುಶಾಲನಗರ ಪರಂಪರಾ ರೆಸಾರ್ಟ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಸೀತಾರಾಮ ಭಟ್ ಕಲ್ಲಮ ವಹಿಸಿದ್ದರು. ಪ್ರವಾಸದ ನೇತೃತ್ವ ವಹಿಸಿದ್ದವರಲ್ಲಿ ಓರ್ವರಾದ ಸುರೇಶ್ ಎಸ್.ಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಕುಮಾರ್ ಕಲ್ಕಾರ್ ಅವರ ಭಾವಗೀತೆಯೊಂದಿಗೆ ಸಭೆಗೆ ಚಾಲನೆ ನೀಡಲಾಯಿತು. ಜೀವ ವಿಮಾ ಸಲಹೆಗಾರ ಜಿ.ಕೆ ಪ್ರಸನ್ನ ಕಲ್ಲಗುಡ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್ ಲೋಕೇಶ್ ಸುವರ್ಣ, ಕೊಣಾಜೆ ಪೊಲೀಸ್ ಠಾಣಾ ಎಎಸ್ಸೈ ಚೇತನ್ ಬೊಟ್ಯಾಡಿ, ಹಿರಿಯ ವಿದ್ಯಾರ್ಥಿಗಳಾದ ಗುಣಕರ ಶೆಟ್ಟಿ ಮತ್ತು ಚಿತ್ರ ನಟ ರವಿಸ್ನೇಹಿತ್ ನಡುಬೈಲು ಉಪಸ್ಥಿತರಿದ್ದರು. ಕೆ.ಎಂ ಹನೀಫ್ ರೆಂಜಲಾಡಿ ಕಾರ್ಯಕ್ರಮ ನಿರೂಪಿಸಿದರು.

ಜೆರ್ಸಿ ಬಿಡುಗಡೆ:
ಶ್ರೀನಿವಾಸ್ ಎಚ್.ಬಿ ಅವರ 65 ವರ್ಷದ ಹುಟ್ಟುಹಬ್ಬ ಪ್ರಯುಕ್ತ ಅವರ ಹೆಸರಿನ ಜೆರ್ಸಿ ಬಿಡುಗಡೆಗೊಳಿಸಲಾಯಿತು. ಪ್ರಕಾಶ್ ಶೆಟ್ಟಿಮಜಲು ಜೆರ್ಸಿ ಪ್ರಾಯೋಜಕರಾಗಿ ಸಹಕರಿಸಿದರು.

ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ:
ಶ್ರೀನಿವಾಸ್ ಎಚ್.ಬಿ ಅವರ ಶಿಷ್ಯಂದಿರಾದ ಸಿವಿಲ್ ಇಂಜಿನಿಯರ್ ಗುಣಕರ ಶೆಟ್ಟಿ ಮತ್ತು ಚಿತ್ರ ನಟ ರವಿಸ್ನೇಹಿತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಗುಣಕರ ಶೆಟ್ಟಿ ಮತ್ತು ರವಿಸ್ನೇಹಿತ್ ಸಂತಸ ವ್ಯಕ್ತಪಡಿಸಿ, ಗುರುಗಳ ನೇತೃತ್ವದಲ್ಲಿ ಸಿಕ್ಕಿದ ಈ ಸನ್ಮಾನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತೀ ವರ್ಷ ಶ್ರೀನಿವಾಸ್ ಎಚ್.ಬಿ ಹುಟ್ಟುಹಬ್ಬದಂದ ಇಬ್ಬರು ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ನಡೆಸುತ್ತಾ ಬಂದಿದ್ದಾರೆ.

ಹುಟ್ಟುಹಬ್ಬ ಸನ್ಮಾನ:
ಶ್ರೀನಿವಾಸ್ ಎಚ್.ಬಿ ಹುಟ್ಟುಹಬ್ಬವನ್ನು ಶಿಷ್ಯಂದಿರು, ಹಿತೈಷಿಗಳು, ಅಭಿಮಾನಿಗಳು ಸೇರಿಕೊಂಡು ಆಚರಿಸಿದರು. ಬಳಿಕ ಶ್ರೀನಿವಾಸ್ ಎಚ್.ಬಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಭ್ರಮ, ಸಡಗರ:
ಪ್ರವಾದಲ್ಲಿ ಸಂಭ್ರಮ, ಸಡಗರ ಭರ್ಜರಿಯಾಗಿತ್ತು. ಹಿರಿಯರು-ಕಿರಿಯರು ಸೇರಿದಂತೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಶ್ರೀನಿವಾಸ್ ಎಚ್.ಬಿ ಅವರ ಡ್ಯಾನ್ಸ್ ಸ್ಟೆಪ್ ಕೂಡಾ ಸಖತ್ ಆಗಿತ್ತು. ತಮ್ಮ ನೆಚ್ಚಿನ ಗುರುವಿನ ಹುಟ್ಟುಹಬ್ಬ ವಿಭಿನ್ನವಾಗಿ ನೆರವೇರಿಸುವ ಮೂಲಕ ಸ್ಮರಣೀಯವಾಗಿಸಿಕೊಂಡರು.

5ನೇ ವರ್ಷದ ಪ್ರವಾಸ:
ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ತಮ್ಮ 61ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊದಲ ಬಾರಿ ‘ಹಿರಿಯ ವಿದ್ಯಾರ್ಥಿಗಳ ಗೌರವ ದಿನ’ ಎನ್ನುವ ಹೆಸರಿನಲ್ಲಿ 2021ರಲ್ಲಿ ಬಿಸಿಲೆ ಘಾಟ್‌ಗೆ ಪ್ರವಾಸ ಆಯೋಜಿಸಲಾಗಿತ್ತು. 2022ರಲ್ಲಿ ಮಡಿಕೇರಿಯಲ್ಲಿ ಗುರು ಶಿಷ್ಯ ಸಮ್ಮಿಲನ ಹಮ್ಮಿಕೊಳ್ಳಲಾಗಿತ್ತು. 2023ರಲ್ಲಿ ಮಂಗಳೂರಿನಲ್ಲಿ ಮತ್ತು 2024ರಲ್ಲಿ ಮಡಿಕೇರಿ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‌ನಲ್ಲಿ ಗುರು ಶಿಷ್ಯರ ಸಮ್ಮಿಲನ ನಡೆದಿತ್ತು. ಇದೀಗ 5ನೇ ವರ್ಷದ ಗುರು ಶಿಷ್ಯರ ಸಮ್ಮಿಲನ ಕುಶಾಲನಗರ ಪರಂಪರಾ ರೆಸಾರ್ಟ್‌ನಲ್ಲಿ ನಡೆಯಿತು.


ಹಿರಿಯ ವಿದ್ಯಾರ್ಥಿಗಳನ್ನು ಅಪಾರವಾಗಿ ಪ್ರೀತಿಸುವ, ಗೌರವಿಸುವ ಶ್ರೀನಿವಾಸ್ ಎಚ್.ಬಿ ಅವರು ಶಿಕ್ಷಕ ವೃತ್ತಿ ಸಂದರ್ಭದಲ್ಲೇ ‘ಜನ ಮೆಚ್ಚಿದ’ ಶಿಕ್ಷಕ ಎನ್ನುವ ಖ್ಯಾತಿಯನ್ನು ಗಳಿಸಿದ್ದಲ್ಲದೇ ಮಾದರಿ ಶಿಕ್ಷಕರಾಗಿ ಗುರುತಿಸಿಕೊಂಡು ಅಪಾರ ಜನಮನ್ನಣೆ ಗಳಿಸಿದ್ದರು. ತಮ್ಮ ನೆಚ್ಚಿನ ಶಿಕ್ಷಕನ ಹುಟ್ಟುಹಬ್ಬವನ್ನು ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಒಂದೊಂದು ಜಿಲ್ಲೆಯಲ್ಲಿ ಆಚರಿಸುತ್ತಾ ಬರುತ್ತಿದ್ದಾರೆ. ಗುರುವಿನ ಹುಟ್ಟುಹಬ್ಬವನ್ನು ಈ ರೀತಿ ಪ್ರತೀ ವರ್ಷ ಆಚರಿಸುವುದು ಮತ್ತು ಗುರು-ಶಿಷ್ಯ ಸಮ್ಮಿಲನ ನಡೆಸುವುದು ದೇಶದಲ್ಲೇ ಪ್ರಥಮ ಎನ್ನಲಾಗುತ್ತಿದೆ.

ಹಿರಿಯ ವಿದ್ಯಾರ್ಥಿಗಳಾದ ಸುರೇಶ್ ಎಸ್.ಡಿ ಹಾಗೂ ಸುಬ್ರಹ್ಮಣ್ಯ ಕರುಂಬಾರು ಗುರು ಶಿಷ್ಯ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಜವಾಬ್ದಾರಿ ವಹಿಸಿದ್ದರು. ಷಣ್ಮುಖ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಶ್ರೀನಿವಾಸ್ ಎಚ್.ಬಿ ಅವರ ಅಭಿಮಾನಿಗಳು ವಿವಿಧ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here