ಪುತ್ತೂರು: ಬಂಜೆತನ ಎನ್ನುವುದು ಮಾನಸಿಕವಾಗಿ ಅತ್ಯಂತ ಹೆಚ್ಚು ನೋವು ತರುತ್ತದೆ, ಇದರ ಪರಿಹಾರಕ್ಕೆ ನಾವು ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆಯ ಮೂಲಕ ಪ್ರಯತ್ನಿಸಬೇಕು ಎಂದು ಮಂಗಳೂರಿನ ನೋವಾ ಐವಿಎಫ್ ಫರ್ಟಿಲಿಟಿ ಸಂಸ್ಥೆಯ ವೈದ್ಯೆ ಡಾ.ಶವೀಝ್ ಫೈಝಿ ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಎಲೈಟ್, ಇನ್ಹರ್ ವ್ಹೀಲ್ ಕ್ಲಬ್ ಪುತ್ತೂರು ಇವರ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಸಹಕಾರದೊಂದಿಗೆ ರೋಟರಿ ಮನಿಷಾ ಸಭಾಂಗಣದಲ್ಲಿ ನ.18 ರಂದು ನಡೆದ “ಬಂಜೆತನ -ಉಚಿತ ನಿವಾರಣಾ ಶಿಬಿರ” ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ನೋವಾ ಐವಿಎಫ್ ಸಂಸ್ಥೆ ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಆ ಮುಖೇನ ಚಿಕಿತ್ಸೆ ನೀಡಿ ಸಮಸ್ಯೆಗೆ ಸೂಕ್ತ ಪರಿಹಾರವನ್ನು ನೀಡುತ್ತಾ ಬಂದಿದೆ ಎಂದರು.
ರೋಟರಿ ಜಿಲ್ಲೆ 3181ರ ವಲಯ 4ರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಆಗಿಲ್ಲ ಎನ್ನುವ ಚಿಂತೆ ನಮ್ಮನ್ನು ಕೊರಗುವಂತೆ ಮಾಡುತ್ತದೆ, ಸೂಕ್ತ ವೈದ್ಯಕೀಯ ಸಲಹೆಯ ಮೂಲಕ ಪರಿಹಾರ ಕೊಂಡುಕೊಳ್ಳುವುದು ಅಗತ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿಯವರು ಮಾತನಾಡಿ, ಮಕ್ಕಳಾಗದ ದಂಪತಿ ಕೆಲವೊಂದು ಬಾರಿ ಸಾಮಾಜಿಕವಾಗಿಯೂ ದೂಷಣೆಗೆ ಒಳಗಾಗುತ್ತಾರೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಎಲ್ಲರ ಕಣ್ತೆರೆಸಲು ಸಹಾಯವಾಗುತ್ತದೆ ಎಂದರು. ತಾಲೂಕು ಸ್ತ್ರೀಶಕ್ತಿ ಒಕ್ಕೂಟದ ಕಾರ್ಯದರ್ಶಿ ಮಮತಾಂಜಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನೋವಾ ಐವಿಎಫ್ ಸಂಸ್ಥೆಯ ಸಮಾಲೋಚಕಿ ಸುರೇಖಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಪುತ್ತೂರು ಸಿಟಿಯ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಇನ್ಹರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಅಶ್ವಿನಿಕೃಷ್ಣ ಮುಳಿಯ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್ ವಂದಿಸಿದರು. ರೋಟರಿ ಪುತ್ತೂರು ಎಲೈಟ್ ನ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು.