ಅಂಬಿಕಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಹಿಂದೂ ಆಚರಣೆಗಳಲ್ಲಿರುವ ವೈಜ್ಞಾನಿಕ ಸಂಗತಿಯನ್ನು ಅರಿಯಬೇಕು : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ನಮ್ಮ ಆಚರಣೆಗಳ ಹಿಂದಿರುವ ಅರ್ಥವನ್ನು ಅರಿಯದಿರುವ ಪರಿಣಾಮದಿಂದ ಆಚರಣೆಗಳ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ. ಮೂಲ ಹಾಗೂ ನೈಜ ವಿಚಾರಗಳಿಗೆ ದೊರಕಬೇಕಾದ ಆದ್ಯತೆ ಮರೆಯಾಗಿ ವಿಕೃತಿಯ ವೈಭವೀಕರಣಕ್ಕೆ ಎಡೆ ಮಾಡಿಕೊಡುತ್ತಿದೆ. ಹಾಗಾಗಿ ನಮ್ಮ ಪ್ರತಿಯೊಂದು ಹಬ್ಬ ಹರಿದಿನಗಳ, ಆಚಾರ ವಿಚಾರಗಳ ಹಿಂದೆ ಅಡಗಿರುವ ವೈಜ್ಞಾನಿಕ ತತ್ತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಶನಿವಾರ ’ಆಚರಣೆಗಳನ್ನು ಅರಿಯೋಣ’ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು.

ಹಿಂದೂ ಧರ್ಮ ಉಳಿಯಬೇಕಾದರೆ ಮುಂದಿನ ತಲೆಮಾರು ಧರ್ಮದ ಆಚರಣೆ, ಪರಂಪರೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಿರಿಯರು ನಮಗೆ ಅದನ್ನು ತಿಳಿಸಿಕೊಡದಿದ್ದಲ್ಲಿ ಅದು ಅವರ ತಪ್ಪು. ಹಾಗೆಂದು ನಾವು ನಮ್ಮ ಮಕ್ಕಳಿಗೆ ತಿಳಿಸಿಕೊಡದಿದ್ದರೆ ಅದು ನಮ್ಮ ತಪ್ಪಾಗುತ್ತದೆ. ಆದ್ದರಿಂದ ಯಾವ ಹಬ್ಬ ಹರಿದಿನಗಳು ಬಂದರೂ ಅದರ ಹಿಂದೆ ಅಡಕವಾಗಿರುವ ವೈಜ್ಞಾನಿಕ ಸತ್ಯವನ್ನು ಮೊದಲು ಅರ್ಥ ಮಾಡಿಕೊಂಡು ಅದರ ಆಶಯಕ್ಕನುಗುಣವಾಗಿ ನಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಬಲಿ ಚಕ್ರವರ್ತಿಯನ್ನು ವಾಮನರೂಪಿಯಾದ ವಿಷ್ಣು ಪಾತಾಳಕ್ಕೆ ತಳ್ಳಿದ ಕತೆಗಳನ್ನು ನಾವು ಕೇಳಿದ್ದೇವೆ. ಬಲಿಯನ್ನು ತಳ್ಳಿದಾಗ ಆತನ ಆಪ್ತ ಮಂತ್ರಿಯಾಗಿದ್ದ ಮಾಯಾಸುರನೂ ಆತನ ಜತೆ ಪಾತಾಳಕ್ಕಿಳಿಯುತ್ತಾನೆ. ಭಾರತದಿಂದ ನೇರವಾಗಿ ಆಳಕ್ಕಿಳಿದರೆ ಆಚೆ ಬದಿಯಲ್ಲಿ ಮೆಕ್ಸಿಕೋ ಕಾಣಿಸುತ್ತದೆ. ಆ ಮೆಕ್ಸಿಕೋ ನಗರದಲ್ಲಿ ಇತ್ತೀಚೆಗೆ ಉತ್ಖನನ ನಡೆಸಿದಾಗ ಸುಮಾರು ಆರೂವರೆ ಸಾವಿರ ವರ್ಷಗಳ ಹಿಂದಿನದು ಎಂದು ಅಂದಾಜಿಸಲಾದ ಮಾಯಾ ನಗರ ಎಂಬ ನಗರ ನಿರ್ಮಾಣವಾದದ್ದು ಕಂಡು ಬಂದಿದೆ. ಅಲ್ಲಿ ಕಾಣಿಸಿದ ಆ ಮಾಯಾನಗರದ ನಾಗರಿಕತೆಯು ಬಲಿಯೊಂದಿಗೆ ಪಾತಾಳಕ್ಕಿಳಿದ ಮಾಯಾಸುರ ನಿರ್ಮಿಸಿದ್ದೇ ಆಗಿದೆ. ಆದ್ದರಿಂದ ಪುರಾಣ ಸುಳ್ಳು ಎನ್ನುವವರಿಗೆ ಸ್ಪಷ್ಟ ಉತ್ತರ ನೀಡುವಂತಹ ವಿಚಾರಗಳು ನಮ್ಮಲ್ಲಿ ಸಾಕಷ್ಟಿವೆ ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಪದವಿಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ ಕಮ್ಮಜೆ, ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ, ಬೋಧಕ ಬೋಧಕೇತರ ವೃಂದ ಹಾಗೂ ವಿದ್ಯಾಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here