ಪುತ್ತೂರು: ಸುಮಾರು ಎರಡು ವರ್ಷಗಳ ಹಿಂದೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪವನ್ನು ಎದುರಿಸುತ್ತಿದ್ದ ರಾಮಕುಂಜ ಗ್ರಾಮದ ಖಂಡಿಗ ನಿವಾಸಿ ಸೇಸಪ್ಪ ರವರಿಗೆ ಜಿಲ್ಲಾ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
2020ನೇ ಅ.4ರಂದು ಬಾಲಕಿಯೋರ್ವಳಿಗೆ ಒತ್ತಾಯ ಪೂರ್ವಕವಾಗಿ ದೈಹಿಕ ಸಂಪರ್ಕ ಮಾಡಿ ಆಕೆ ಗರ್ಭವತಿಯಾದ ಬಗ್ಗೆ ತಿಳಿದು ಬಂದ ಹಿನ್ನೆಲೆಯಲ್ಲಿ ಬಾಲಕಿಯ ತಾಯಿಯು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಖ್ಯೆಯ ಕಲಂ 376 ಮತ್ತು ಪೋಕ್ಸೋ ಕಾಯಿದೆಯ ಕಲಂ 5 ಮತ್ತು 6 ರನ್ವಯ ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರಿಸಿ, ಆರೋಪಿಯನ್ನಲಾಗಿದ್ದ ಸೇಸಪ್ಪ ರವರನ್ನು ದಸ್ತಗಿರಿ ಮಾಡಿ ಪೊಲೀಸರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಎಸ್ ವಿ ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಮಹೇಶ್ ಕಜೆ ವಾದಿಸಿದರು.
ಸಾಕ್ಷಾಧಾರಗಳ ಕೊರತೆ:
ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದಾಗ ಆರೋಪಿ ಸೇಸಪ್ಪ ಅವರು ತನ್ನ ಪರ ವಕೀಲರಾದ ಕಜೆ ಲಾ ಚೇಂಬರ್ಸ್ನ ಮಹೇಶ್ ಕಜೆ ಅವರ ಮುಖಾಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿಯು ಈ ಕೃತ್ಯ ನಡೆಸಿದ್ದಾರೆ ಎಂಬುವುದಕ್ಕೆ ಯಾವುದೇ ಪೂರಕವಾದ ಸಾಕ್ಷಾಧಾರಗಳು ಮೇಲ್ನೋಟಕ್ಕೆ ಕಂಡು ಬಂದಿರಲಿಲ್ಲ. ವಿಳಂಬವಾದ ದೂರು, ಡಿಎನ್ಎ ಋಣಾತ್ಮಕ ವರದಿ, ಸೂಕ್ತ ವೈಜ್ಞಾನಿಕ ಸಾಕ್ಷಾಧಾರಗಳ ಕೊರತೆ, ಎಂಬಿತ್ಯಾದಿ ಅಂಶಗಳನ್ನು ವಾದಿಸಿದ್ದರು. ಇದಕ್ಕೆ ಸರಕಾರಿ ಅಭಿಯೋಜಕರು ಆಕ್ಷೇಪವನ್ನು ಸಲ್ಲಿಸಿದ್ದರು. ವಾದ -ವಿವಾದವನ್ನು ಆಲಿಸಿದ ಪುತ್ತೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್ ವಿ ರವರು ಆರೋಪಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.