ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದಿಂದ 6ನೇ ವರ್ಷದ ಕೆಸರುಡೊಂಜಿ ದಿನ

0

ಯುವ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ, ತುಳು ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ

ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಕೆಲಸ ಯುವಶಕ್ತಿ ಬಳಗದಿಂದ ಆಗುತ್ತಿದೆ : ಪುತ್ತಿಲ

ಪುತ್ತೂರು: ಯುವಕರು ಮನಸ್ಸು ಮಾಡಿದರೆ ಸಮಾಜದಲ್ಲಿ ಏನು ಸಾಧನೆ ಮಾಡಬಹುದು ಮತ್ತು ಸಮಾಜಕ್ಕೆ ಏನನ್ನು ಕೊಡಬಹುದು ಎಂಬುದನ್ನು ಮಜ್ಜಾರಡ್ಕದ ಶ್ರೀ ವಿಷ್ಣು ಯುವಶಕ್ತಿ ಬಳಗದ ಯುವಕರು ತೋರಿಸಿಕೊಟ್ಟಿದ್ದಾರೆ.ಸಾಮಾಜಿಕ ಚಿಂತನೆಗಳೊಂದಿಗೆ ಸಮಾಜಮುಖಿ ಜವಬ್ದಾರಿಗಳೊಂದಿಗೆ ಸಂಘಟನೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅಶಕ್ತರ ಪಾಲಿಗೆ ಬೆಳಕಾಗುವ ಮೂಲಕ ಸಂಘಟನೆ ಸಮಾಜದ ವಿವಿಧ ಸ್ತರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೆಲಸ ಮಾಡುತ್ತಿದೆ. ಆ ಮೂಲಕ ಯುವ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ರವಾನೆ ಮಾಡುವ ಕೆಲಸ ಯುವಶಕ್ತಿ ಬಳಗದಿಂದ ಆಗುತ್ತಿರುವ ಶ್ಲಾಘನೀಯ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಅವರು ತಾಲೂಕು ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕೃತ ಅರಿಯಡ್ಕ ಗ್ರಾಮದ ಶ್ರೀ ವಿಷ್ಣು ಯುವಶಕ್ತಿ ಬಳಗ ಮಜ್ಜಾರಡ್ಕ ಇದರ ವತಿಯಿಂದ ಮಜ್ಜಾರು ಗದ್ದೆಯಲ್ಲಿ ನಡೆದ 6ನೇ ವರ್ಷದ ಕೆಸರುಡೊಂಜಿ ದಿನ ಕಾರ್ಯಕ್ರಮದಂಗವಾಗಿ ನ.18ರಂದು ದಿ.ಜಯಂತಿ ಮಜ್ಜಾರು ವೇದಿಕೆಯಲ್ಲಿ ನಡೆದ ಯುವಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಕೃತಿಯ ರಕ್ಷಣೆಯೊಂದಿಗೆ ಧರ್ಮವನ್ನು ಉಳಿಸುವ ಕೆಲಸ ಸಂಘಟನೆಯಿಂದ ಆಗುತ್ತಿದೆ ಎಂದ ಪುತ್ತಿಲರವರು ಮುಂದಿನ ದಿನಗಳಲ್ಲಿ ಸಂಘಟನೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಎರಡು ದಿನಗಳ ಅನ್ನದಾನ ಪ್ರಾಯೋಜಕರಾಗಿದ್ದ ಓಲೆಮುಂಡೋವು ಮೋಹನ್ ರೈಯವರ ಪತ್ನಿ ಮೀರಾ ಮೋಹನ್ ರೈಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಸಹಜ್ ರೈ ಬಳಜ್ಜ ಮಾತನಾಡಿ, ಸಮಾಜಮುಖಿ ಕೆಲಸಗಳ ಮೂಲಕ ಜಿಲ್ಲೆಯಲ್ಲೇ ಗುರುತಿಸಿಕೊಂಡಿರುವ ಮಜ್ಜಾರಡ್ಕದ ಈ ಸಂಘಟನೆಯಿಂದ ಮುಂದೆಯೂ ಉತ್ತಮ ಕೆಲಸಗಳು ನಡೆಯಲಿ ನಾವೂ ಕೂಡ ನಿಮ್ಮ ಜೊತೆ ಸದಾ ಇದ್ದೇವೆ, ಮುಂದಿನ ದಿನಗಳಲ್ಲಿ ಸಂಘಟನೆಗೆ ರಾಜ್ಯ ಮಟ್ಟದ ಪ್ರಶಸ್ತಿಗಳು ದೊರೆಯಲಿ ಎಂದು ಹೇಳಿ ಶುಭ ಹಾರೈಸಿದರು. ಪ್ರವೀಣ್ ನೆಟ್ಟಾರುರವರ ಪತ್ನಿ ನೂತನಾ ಪ್ರವೀಣ್ ನೆಟ್ಟಾರು ಮಾತನಾಡಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರ ಸೇರಿದಂತೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವ ಮಜ್ಜಾರಡ್ಕದ ಈ ಸಂಘಟನೆಗೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ, ಗ್ರಾಮೀಣ ಪ್ರದೇಶದಲ್ಲಿ ಸಂಘಟನೆ ಮಾಡುತ್ತಿರುವ ಕೆಲಸ ಅದ್ಭುತವಾಗಿದೆ, ಮುಂದೆಯೂ ಸಂಘಟನೆಯಿಂದ ಸಮಾಜಮುಖಿ ಕೆಲಸಗಳು ಮೂಡಿಬರಲಿ ಎಂದು ಹೇಳಿ ಶುಭ ಹಾರೈಸಿದರು. 44 ವರ್ಷದಲ್ಲಿ 147 ಬಾರಿ ರಕ್ತದಾನ ಮಾಡಿದ ರಕ್ತದಾನಿ ಪಿ.ಬಿ ಸುಧಾಕರ ರೈ ಪೆರಾಜೆ ಮಾತನಾಡಿ, ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರ ಜೊತೆ ಸೇರಿಕೊಳ್ಳುವುದು ನಮ್ಮ ಜಾಣತನವಾಗಿದೆ. ಮಜ್ಜಾರಡ್ಕದ ಈ ಯುವಶಕ್ತಿ ಬಳಗ ಎಂಬ ಸಂಘಟನೆಯ ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ತಿಳಿದ ವಿಚಾರ, ಇಂತಹ ಸಂಘಟನೆಯ ಜೊತೆ ಸೇರಿಕೊಂಡು ನಾವು ಕೂಡ ನಮ್ಮಿಂದ ಸಾಧ್ಯವಾಗುವ ಒಳ್ಳೆಯ ಕೆಲಸಗಳನ್ನು ಮಾಡಲು ಅವಕಾಶವಿದೆ. ಕೇವಲ ಪ್ರಶಸ್ತಿ, ಸನ್ಮಾನಕ್ಕಾಗಿ ನಾವು ಸಮಾಜ ಸೇವೆ ಮಾಡುವುದು ಬೇಡ, ಅರ್ಜಿ ಹಾಕಿ ಪ್ರಶಸ್ತಿ ತೆಗೆದುಕೊಳ್ಳುವುದಕ್ಕೆ ನಾವು ಸಮಾಜ ಸೇವೆ ಮಾಡಬಾರದು ಎಂದ ಅವರು, ಮುಂದಿನ ದಿನಗಳಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಮಜ್ಜಾರಡ್ಕ ಸಂಘಟನೆಯನ್ನು ಗುರುತಿಸುವ ಕೆಲಸ ಮಾಡುತ್ತೇವೆ. ಇವರ ಮಾಡುವ ಸಮಾಜಮುಖಿ ಕೆಲಸಗಳಿಗೆ ಪ್ರೋತ್ಸಾಹ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಅಧ್ಯಕ್ಷ ರಘುನಾಥ ಗೋಳ್ತಿಲರವರು ಮಾತನಾಡಿ, ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಸಂಘಟನೆ ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಮುಂದೆಯೂ ತಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸಂಘಟನೆಯ ಮೇಲಿರಲಿ, ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ ಎಂದರು.

ಕುಂಬ್ರ ಮಾತೃಶ್ರೀ ಅರ್ಥ್ ಮೂವರ‍್ಸ್ ಮಾಲಕ, ಉದ್ಯಮಿ, ದಾನಿ ಮೋಹನ್‌ದಾಸ ರೈ ಕುಂಬ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಣಿತ ಭಜನೆಯಲ್ಲಿ ಭಾಗವಹಿಸಿದ ನಾಲ್ಕು ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಚಂದ್ರಿಕಾ ಸ್ವಾಮಿನಗರ ಪ್ರಾರ್ಥಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ ಸ್ವಾಗತಿಸಿದರು. ಕೀರ್ತಿ ಮಾಯಿಲಕೊಚ್ಚಿರವರು ವರದಿ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘಟನೆಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಮಯೂರ ಗೋಳ್ತಿಲ, ಸದಾಶಿವ ಮಣಿಯಾಣಿ, ರವಿ ಮಜ್ಜಾರು, ವಿನೋದ್ ಸ್ವಾಮಿನಗರ,ನವೀನ್ ಮಜ್ಜಾರು, ಲೋಕೇಶ್ ಸ್ವಾಮಿನಗರ, ಹರೀಶ್ ಕೋಡಿಯಡ್ಕ ಅತಿಥಿಗಳಿಗೆ ಶಾಲು, ವೀಳ್ಯ ನೀಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭರತ್ ಓಲ್ತಾಜೆ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ಸಂಘಟನೆಯ ಸರ್ವ ಸದಸ್ಯರುಗಳು ಸಹಕರಿಸಿದ್ದರು.

ಯುವ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ
ಸಂಘಟನೆಯ ಎಲ್ಲಾ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೇವೆ ಮಾಡುತ್ತಿರುವ ಶಮಿತ್ ಮಜ್ಜಾರುರವರು ಈ ವರ್ಷದ ಯುವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧಕರಲ್ಲಿ ತನ್ನ ಮೂರು ಮಕ್ಕಳನ್ನು ಸೇನೆಗೆ ಕಳುಹಿಸುವ ಮೂಲಕ ದೇಶಸೇವೆಗೆ ಪಾತ್ರರಾದ ಗಿರಿಜಾ ಪಟ್ಟೆ, 44 ವರ್ಷಗಳಲ್ಲಿ 147 ಬಾರಿ ರಕ್ತದಾನ ಮಾಡಿದ ಮಹಾ ರಕ್ತದಾನಿ ಪಿ.ಬಿ.ಸುಧಾಕರ ರೈ ಪೆರಾಜೆ, ಕಂಬಳ ತಂಡದ ಮಾಲಕ ಲೋಹಿತ್ ಬಿ.ಬಿ ಬಾಲಯ ತಿಂಗಳಾಡಿ, ಸೋಶಿಯಲ್ ಮೀಡಿಯಾದ ಮೂಲಕ ಸಮಾಜ ಸೇವೆ ಮಾಡುತ್ತಿರುವ ವಿ.ಜೆ ವಿಖ್ಯಾತ್ ಸುಳ್ಯ ಮತ್ತು ರಾಜ್ಯಮಟ್ಟದ ಕಬಡ್ಡಿ ಕ್ರೀಡಾಪಟು ದೀಕ್ಷಾ ಎಸ್.ತ್ಯಾಗರಾಜನಗರ ಹಾಗೇ ಮಹಾಅನ್ನದಾನಿ ಮೀರಾ ಮೋಹನ್ ರೈ ಓಲೆಮುಂಡೋವುರವರುಗಳನ್ನು ಈ ಸಂದರ್ಭದಲ್ಲಿ ಶಾಲು, ಹಾರ ಹಾಕಿ, ಪೇಟಾ ತೊಡಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತ ಪರವಾಗಿ ವಿ.ಜೆ ವಿಖ್ಯಾತ್ ಸುಳ್ಯರವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕೀರ್ತಿ ಮಾಯಿಲಕೊಚ್ಚಿ ಸನ್ಮಾನಿತರ ಪರಿಚಯ ಮಾಡಿದರು.

ಮನರಂಜಿಸಿದ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’
ಸಭಾ ಕಾರ್ಯಕ್ರಮದ ಮೊದಲು ಮತ್ತು ಬಳಿಕ ದಿ. ಜಯಂತಿ ಮಜ್ಜಾರು ವೇದಿಕೆಯಲ್ಲಿ ಸ್ಥಳೀಯರಿಂದ ನೃತ್ಯ, ಹಾಡು ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರಾತ್ರಿ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ತಂಡದವರಿಂದ ‘ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ಎಂಬ ಭಕ್ತಿ ಪ್ರಧಾನ, ಹಾಸ್ಯಮಯ ನಾಟಕ ನಡೆಯಿತು. ನೂರಾರು ಮಂದಿ ನಾಟಕ ವೀಕ್ಷಿಸಿ ಖುಷಿಪಟ್ಟರು.

LEAVE A REPLY

Please enter your comment!
Please enter your name here