ಪುತ್ತೂರು: ಕೊಂಬೆಟ್ಟು ಸರಕಾರಿ ಪ ಪೂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರ ಬಳಿಕ ಸಭಾಂಗಣದಲ್ಲಿ ಸೇರಿದ್ದ ವಿದ್ಯಾರ್ಥಿಗಳ ಬಳಿ ತೆರಳಿದ ಶಾಸಕ ಅಶೋಕ್ ರೈ, ನಿಮಗೆ ಏನಾದರೂ ಸಮಸ್ಯೆ ಇದೆಯೇ? ಇದ್ದರೆ ತಿಳಿಸಿ ಪರಿಹರಿಸುವಂತದ್ದಾಗಿದ್ದರೆ ಈಗಲೇ ಪರಿಹಾರ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಕೆಲವು ವಿದ್ಯಾರ್ಥಿಗಳು ಬಸ್ಸು ನಿಲ್ಲಿಸದೆ ಇರುವ ಬಗ್ಗೆ ಶಾಸಕರ ಗಮನಕ್ಕೆ ತಂದರು. ಕಬಕ ಮತ್ತು ಉಪ್ಪಿನಂಗಡಿ, ಸಂಟ್ಯಾರ್‌ನಲ್ಲಿ ಸರಕಾರಿ ಬಸ್ಸುಗಳನ್ನು ನಿಲ್ಲಿಸುವುದಿಲ್ಲ. ಅದರಲ್ಲೂ ವಿದ್ಯಾರ್ಥಿಗಳನ್ನು ಕಂಡರೆ ಬಸ್ಸು ನಿಲ್ಲಿಸುವುದೇ ಇಲ್ಲ ಎಂದು ಶಾಸಕರಲ್ಲಿ ಹೇಳಿದರು.
ತಕ್ಷಣ ಬಸ್ಸು ನಿಲ್ಲಿಸದೇ ಇರುವ ಬಗ್ಗೆ ಡಿಪೋ ಮೆನಜರ್‌ಗೆ ಗಮನಕ್ಕೆ ತಂದ ಶಾಸಕರು ವಿದ್ಯಾರ್ಥಿಗಳಿಗೆ ಬಸ್ಸು ನಿಲ್ಲಿಸದೆ ತೊಂದರೆಯಾಗುತ್ತಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆಯನ್ನು ನೀಡಿದರು. ನಮಗೆ ಬಸ್ಸೇ ಇರಲಿಲ್ಲ, ನೀವು ಶಾಸಕರಾದ ಮೇಲೆ ನಮ್ಮೂರಿಗೂ ಬಸ್ಸು ಬಂದಿದೆ. ನಿಮಗೆ ಅಭಿನಂದನೆಗಳು ಸರ್ ಎಂದು ಹೆಚ್ಚಿನ ವಿದ್ಯಾರ್ಥಿಗಳು ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಆ ಬಳಿಕ ಮಾತನಾಡಿದ ಶಾಸಕರು ಇನ್ನೂ ಕೆಲವು ಬಸ್ಸುಗಳು ಬರಲಿದೆ. ಬಸ್ಸುಗಳು ಕಡಿಮೆ ಇರುವ ಗ್ರಾಮಾಂತರ ಭಾಗಕ್ಕೆ ಹೊಸ ಬಸ್ಸುಗಳು ಶೀಘ್ರದಲ್ಲೇ ಬರಲಿದೆ. ಸುಳ್ಯಪದವು ಕಡೆಗಳಲ್ಲಿ ಬಸ್ಸಿನ ಕೊರತೆ ಇದೆ, ಕಾಟುಕುಕ್ಕೆಯಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆ ಇದೆ ಎಲ್ಲವನ್ನೂ ಪರಿಹಾರ ಮಾಡುತ್ತೇನೆ ಎಂದು ಶಾಸಕರು ಭರವಸೆ ನೀಡಿದರು.