ಪುತ್ತೂರು: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಸಹಯೋಗದಲ್ಲಿ ಕ್ಷಯ ರೋಗ ಜಾಗೃತಿ ಮತ್ತು ನಿರ್ಮೂಲನೆ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ ಕ್ಷಯರೋಗ ನಿರ್ಮೂಲನೆ ಕುರಿತು ಉಪನ್ಯಾಸ ನೀಡಿದರು. ಕ್ಷಯ ರೋಗವು ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಮೈಕೋಬ್ಯಾಕ್ಟೀರಿಯಂ ಟ್ಯೂಬರ್ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಕೆಲ ದಶಕಗಳ ಹಿಂದೆ ಈ ಕಾಯಿಲೆ ಬಂದರೆ ಸಾವೇ ಗತಿ ಎಂಬ ಮನೋಭಾವ ಇತ್ತು. ಆದರೆ ಈಗ ಸೂಕ್ತ ಚಿಕಿತ್ಸೆಯ ಮೂಲಕ ಈ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿದೆ. ಹಾಗಾಗಿ ಈ ಕಾಯಿಲೆ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವ ಮೂಲಕ ಕ್ಷಯರೋಗಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯುವಂತೆ ಮಾಡುವುದು ಅತಿ ಮಹತ್ವದ್ದಾಗಿದೆ.ವಿಶ್ವ ಆರೋಗ್ಯ ಸಂಸ್ಥೆಯು 2030 ರ ಒಳಗಡೆ ಜಾಗತಿಕವಾಗಿ ಕ್ಷಯ ರೋಗ ಮುಕ್ತ ಪರಿಸರ ಹೊಂದುವ ಗುರಿಯನ್ನು ಹೊಂದಿದೆ. ಭಾರತದ ಪ್ರಧಾನಮಂತ್ರಿಗಳು 2030ಕ್ಕಿಂತ 5 ವರ್ಷ ಮುಂಚಿತವಾಗಿ ಅಂದರೆ 2025 ರ ಒಳಗಡೆ ಕ್ಷಯ ಮುಕ್ತ ಭಾರತವನ್ನಾಗಿ ಮಾಡಲು ಕರೆ ಕೊಟ್ಟಿದ್ದು, ಈ ಹಿನ್ನಲೆಯಲ್ಲಿ ದೇಶಾದ್ಯಂತ ಕ್ಷಯರೋಗ ನಿರ್ಮೂಲನಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪಿ ಪಿ ಟಿ ಮೂಲಕ ಕ್ಷಯ ರೋಗದ ಲಕ್ಷಣಗಳು, ಚಿಕಿತ್ಸಾ ವಿಧಾನಗಳು, ಮತ್ತು ತಡೆಗಟ್ಟುವ ಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಹ ಸಂಯೋಜಕ ಡಾ.ಸೀತಾರಾಮ ಪಿ ಕ್ಷಯರೋಗ ನಿರ್ಮೂಲನೆಯ ಕುರಿತು ಪಡೆದುಕೊಳ್ಳಬೇಕಾದ ಮಾಹಿತಿ ಮತ್ತು ಅದಕ್ಕೆ ತಕ್ಕಂತೆ ಬದ್ಧತೆ ಬೆಳೆಸಿಕೊಳ್ಳಬೇಕಿದೆ. ಕ್ಷಯ ರೋಗ ನಿಯಂತ್ರಣ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯೊಂದಿಗೆ ಶ್ರಮಿಸುತ್ತಿದ್ದು ಅಭಿಯಾನದ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕ್ಷಯ ರೋಗ ಬರುವುದಕ್ಕಿಂತ ಮುನ್ನ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕಿದೆ. ಈ ಮೂಲಕ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯದ ಕುರಿತು ಜಾಗೃತಿ ಬೆಳೆಸಿಕೊಂಡಲ್ಲಿ ಉತ್ತಮ ಆರೋಗ್ಯ ಸಮಾಜವನ್ನು ಸೃಷ್ಟಿಸುವಲ್ಲಿ ಸಾಧ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಅನ್ನಮ್ಮ, ಸಿಬ್ಬಂದಿ ಗುರುಪ್ರಸಾದ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂಸೇವಕರು, ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಭವ್ಯಶ್ರೀ ಮತ್ತು ತಂಡ ಪ್ರಾರ್ಥಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಶ್ರುತಿ ಸ್ವಾಗತಿಸಿ,ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ನೂರಂದಪ್ಪ ವಂದಿಸಿ, ವಿದ್ಯಾರ್ಥಿನಿ ಪ್ರಥ್ವಿ ಕಾರ್ಯಕ್ರಮ ನಿರ್ವಹಿಸಿದರು.