ಪುತ್ತೂರು: ಉದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವ ವ್ಯಕ್ತಿಗಳು ಬಿಜೆಪಿಗೆ ಬುದ್ದಿವಾದ ಹೇಳುತ್ತಿದ್ದಾರೆ. ಅಂತಹವರಿಂದ ಬಿಜೆಪಿಗೆ ಬುದ್ದಿವಾದ ಬೇಕಿಲ್ಲ. ಮೊದಲು ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ಸಾಜ ರಾಧಾಕೃಷ್ಣ ಆಳ್ವ ಹೇಳಿದ್ದಾರೆ.
ಹಿಂದೂ ಸಮಾಜ ತೊಂದರೆಗೆ ಒಳಗಾದಾಗ, ಹಿಂದೂಗಳ ಮೇಲೆ ದಾಳಿ ನಡೆದಾಗ ರಕ್ಷಣೆಗೆ ನಿಲ್ಲುವುದು ಹಿಂದೂ ಪರ ಸಂಘಟನೆಗಳ ಕರ್ತವ್ಯ ಸಮಾಜ ಪರ ಕೆಲಸಮಾಡುವ ಸಂಘಟನೆಯ ಕಾರ್ಯಕರ್ತರನ್ನು ಗಡಿಪಾರು ಮಾಡಲು ಹೊರಟಿರುವ ಕ್ರಮ ಎಷ್ಟು ಸರಿ ಎಂದು ಪ್ರಶ್ನಿಸಿರುವ ಸಾಜ ರಾಧಾಕೃಷ್ಣ ಆಳ್ವ ಐದು ಯುವಕರ ಗಡಿಪಾರು ಆದೇಶಕ್ಕೆ ಸಂಬಂಧಪಟ್ಟಂತೆ, ಬಿಜೆಪಿ ಸರಕಾರವಿದ್ದಾಗ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದು ಅದೇ ಆಧಾರದಲ್ಲಿ ಗಡಿಪಾರು ಆದೇಶ ಮಾಡಲಾಗಿದೆ. ಬಿಜೆಪಿಯವರು ಯುವಕರನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಂಡು ಬಳಿಕ ಬಲಿಪಶು ಮಾಡುತ್ತಿದ್ದಾರೆ ಎಂಬ ಶಾಸಕ ಅಶೋಕ್ ಕುಮಾರ್ ರೈ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಗಡಿಪಾರು ಆದೇಶದ ಬಗ್ಗೆ ಶಾಸಕರ ಹೇಳಿಕೆಯನ್ನು ಖಂಡಿಸಿ ಮಾಧ್ಯಮದೊಂದಿಗೆ ಮಾತನಾಡಿದ ಸಾಜ ರಾಧಾಕೃಷ್ಣ ಆಳ್ವ, ಶಾಸಕರು ಸ್ಮಾರ್ಟ್ ಆಗಿ ಕೆಲಸ ಮಾಡುತ್ತಾರೆ. ಅವರ ಕೆಲಸದ ಬಗ್ಗೆ ಗೌರವವಿದೆ. ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಹೇಳಿಕೆಗಳನ್ನು ನೀಡುವಾಗ ತಿಳಿದುಕೊಂಡು ಪೂರ್ಣ ಮಾಹಿತಿಯೊಂದಿಗೆ ಹೇಳಿಕೆ ನೀಡಬೇಕು. ಯುವಕರ ವಿರುದ್ಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಪ್ರಕರಣ ದಾಖಲಾಗಿದೆ. ಶಾಸಕರು ಯಾರನ್ನೋ ಮೆಚ್ಚಿಸಲು ಹೇಳಿಕೆಗಳನ್ನು ನೀಡಬಾರದು. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳು ಜನರನ್ನು ತಪ್ಪುದಾರಿಗೆ ಎಳೆಯಬಾರದು. ಅವರ ತಪ್ಪನ್ನು ತಿದ್ದಿಕೊಂಡು ಒಳ್ಳೆಯ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ಹೇಳುವ ಮೂಲಕ ಕುಟುಕಿದ್ದಾರೆ.