ಅಂಗಡಿ ಮುಂಗಟ್ಟು ಬಂದ್ – ರಿಕ್ಷಾ ಚಾಲಕರಿಂದ ಓಡಾಟ ಸ್ಥಗಿತ – ಸಹಾಯಕ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ
ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆಯಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೆಲ್ಯಾಡಿ – ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ವತಿಯಿಂದ ನ.23 ರಂದು ಬೆಳಿಗ್ಗೆ ನೆಲ್ಯಾಡಿಯಲ್ಲಿ ಪ್ರತಿಭಟನೆ ನಡೆಯಿತು.
ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ರಿಕ್ಷಾ ಚಾಲಕರು ಓಡಾಟ ಸ್ಥಗಿತಗೊಳಿಸಿದ್ದರು.
ಪ್ರತಿಭಟನಾ ಸಭೆಯಲ್ಲಿ ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಬಾಣಜಾಲು, ನೆಲ್ಯಾಡಿ ಕೇಂದ್ರ ಜುಮಾ ಮಸೀದಿ ಖತೀಬ್ ಶೌಕತ್ ಅಲ್ ಅಮಾನಿ,
ನೆಲ್ಯಾಡಿ ಜ್ಞಾನೋದಯ ಬೆಥನಿ ಪ.ಪೂ.ಕಾಲೇಜು ಪ್ರಾಂಶುಪಾಲರಾದ ರೆ.ಫಾ. ವರ್ಗೀಸ್ ಕೈಪುನಡ್ಕ, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ, ವರ್ತಕ ಸಂಘದ ಉಪಾಧ್ಯಕ್ಷ ಗಣೇಶ್ ರಶ್ಮಿ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ. ಸದಾನಂದ ಕುಂದರ್, ನೆಲ್ಯಾಡಿ ಬೆಥನಿ ಐಟಿಐ ವಿದ್ಯಾರ್ಥಿ ಅನ್ವಿತ್, ಡಿಕೆಆರ್ ಡಿಸಿ ಸದಸ್ಯೆ ಡೈಸಿ ಜೋಯ್ ಅವರು ಮಾತನಾಡಿ ಈಗಿನ ರಸ್ತೆ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿ ಫ್ಲೈ ಓವರ್ ಆಗಬೇಕೇಂದು ಒತ್ತಾಯಿಸಿದರು. ನೆಲ್ಯಾಡಿ -ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ. ವರ್ಗಿಸ್ ಅವರು ಮಾತನಾಡಿ ಈ ತನಕ ನಡೆದಿರುವ ಹೋರಾಟದ ಬೆಳವಣಿಗೆ ಕುರಿತು ಮಾಹಿತಿ ನೀಡಿ ಮುಂದಿನ ಹೋರಾಟಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ಸಹಾಯಕ ಆಯುಕ್ತರಿಂದ ಮನವಿ ಸ್ವೀಕಾರ :
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರು ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿ ಅವರಿಗೆ ಮನವಿ ಕಳಿಸಿ ಕೊಡುವುದಾಗಿ ಹೇಳಿದರು. ಹೋರಾಟ ಸಮಿತಿ ಸದಸ್ಯ ಎಂ.ಕೆ.ಇಬ್ರಾಹಿಂ ಮನವಿ ವಾಚಿಸಿದರು.
ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ ಹೆಚ್., ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋರಾಟ ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ಸರ್ವೋತ್ತಮ ಗೌಡ ವಂದಿಸಿದರು. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸಿ ಹೆಚ್., ಜೊತೆ ಕಾರ್ಯದರ್ಶಿ ಉಷಾ ಅಂಚನ್, ಸುರೇಶ್ ಪಡಿಪಂಡ ನಿರೂಪಿಸಿದರು.
ಜನಪ್ರತಿನಿಧಿಗಳು, ವರ್ತಕರು, ರಿಕ್ಷಾ ಚಾಲಕರು, ವಿವಿಧ ಸಂಘಟನೆಗಳ ನೂರಾರು ಮಂದಿ ಪಾಲ್ಗೊಂಡಿದ್ದರು.