





ಕಾರು,ಸ್ಕೂಟರೆಲ್ಲಿ ಬಂದು ಕೃತ್ಯ


ಓರ್ವ ಆರೋಪಿ ಪೊಲೀಸರ ವಶಕ್ಕೆ





ಇನ್ನೋರ್ವನಿಗಾಗಿ ಪೊಲೀಸರ ಹುಡುಕಾಟ
ವೀಡಿಯೋ ವೈರಲ್
ಮನೆಯಲ್ಲಿ ಕಳವು ಮಾಡಿದ್ದ ಅಡಿಕೆ ಸಮೇತ ಕಾರಿನೊಂದಿಗೆ ಸಿಕ್ಕಿ ಬಿದ್ದಿರುವ ಆರೋಪಿ ಬಶೀರ್‌ನನ್ನು ಸೇರಿದವರು ವಿಚಾರಿಸುತ್ತಿರುವುದು ಮತ್ತು ಕಳವು ಮಾಡಿ ಕಾರಿಗೆ ತುಂಬಿಸಿಟ್ಟಿದ್ದ ಅಡಿಕೆಯನ್ನು ಆತನಿಂದ ಕಾರಿನಿಂದ ಕೆಳಗಿಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಸವಣೂರು:ಕಾರು,ಸ್ಕೂಟರೊಂದರಲ್ಲಿ ಮನೆಯಂಗಳಕ್ಕೆ ಬಂದ ಅಪರಿಚಿತರೀರ್ವರು ಅಡಿಕೆ ಕಳ್ಳತನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಮನೆ ಮಾಲಕರ ಪುತ್ರನಿಗೆ ತಲವಾರ್‌ನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ವೇಳೆ ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸವಣೂರುನಿಂದ ವರದಿಯಾಗಿದೆ.ಪರಾರಿಯಾಗಿರುವಾತನಿಗೆ ಹುಡುಕಾಟ ಮುಂದುವರಿದಿದೆ.
ಸವಣೂರು ಪಣೆಮಜಲು ಎಡಪತ್ಯ ಫಾರ್ಮ್ಸ್ ನಿವಾಸಿ, ಪ್ರಗತಿಪರ ಕೃಷಿಕರಾಗಿರುವ ಎ.ಆರ್.ಚಂದ್ರ ಅವರ ಮಗ ನಿಷ್ಕಲ್‌ರಾಮ ಹಲ್ಲೆಗೊಳಗಾದವರು.ಈ ಕುರಿತು ಎ.ಆರ್.ಚಂದ್ರ ಅವರು ನೀಡಿರುವ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾನು ಸವಣೂರು ಗ್ರಾಮದಲ್ಲಿ ಅಡಿಕೆ, ತೆಂಗು ಮತ್ತಿತರ ಕೃಷಿಯನ್ನು ಹೊಂದಿದ್ದು,ತೋಟದಲ್ಲಿ ಬೆಳೆದ ಅಡಿಕೆಯನ್ನು ಪ್ರಸ್ತುತ ನಮ್ಮ ಮನೆಯ ಅಂಗಳದಲ್ಲಿರುವ ಸೋಲಾರ್ ಡ್ರೈಯರ್ ನಲ್ಲಿ ಒಣಗಿಸುತ್ತಿದ್ದು ಒಣಗಿದ ಅಡಿಕೆಯನ್ನು ಮನೆಯ ಹಿಂಬದಿಯ ಗೋಡೌನ್‌ನಲ್ಲಿ ಸಂಗ್ರಹಿಸಿಡುತ್ತಿರುವುದಾಗಿದೆ.ದಿನಾಂಕ 25.11.2023ರಂದು ಮುಂಜಾನೆ 03.30 ಗಂಟೆಯ ಸುಮಾರಿಗೆ ಮಗ ನಿಷ್ಕಲ್‌ರಾಮ ಮೈಸೂರಿನಿಂದ ಮೋಟಾರ್ ಸೈಕಲಿನಲ್ಲಿ ನಮ್ಮ ಮನೆಗೆ ಬರುತ್ತಿರುವಾಗ ಮನೆಯ ಅಂಗಳದಲ್ಲಿ ಒಂದು ಕಾರು ಮತ್ತು ಒಂದು ಸ್ಕೂಟರ್ ನಿಂತಿತ್ತು.ಆ ಪೈಕಿ ಸ್ಕೂಟರಿನಲ್ಲಿ 2 ಗೋಣಿಚೀಲದಲ್ಲಿ ಸುಲಿದ ಅಡಿಕೆಯನ್ನು ತುಂಬಿಸಿ ಇಟ್ಟಿರುವುದು ಕಂಡು ಬಂದಿದ್ದು, ಮನೆಯ ಅಂಗಳದಲ್ಲಿರುವ ಸೋಲಾರ್ ಡ್ರೈಯರಿನ ಒಳಗಿನಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗೋಣಿ ಚೀಲದಲ್ಲಿ ಒಣಗಿದ ಅಡಿಕೆಯನ್ನು ಗೋಣಿ ಚೀಲದಲ್ಲಿ ತುಂಬಿಸಿ ಅಂಗಳದಲ್ಲಿದ್ದ ಅವರ ಬಾಬ್ತು ಕಾರಿಗೆ ತುಂಬಿಸುತ್ತಿರುವುದು ಕಂಡು ಬಂದಿತ್ತು.ಆ ವೇಳೆ ಮಗ ನಿಷ್ಕಲ್‌ರಾಮನು ಸದ್ರಿ ವ್ಯಕ್ತಿಗಳಲ್ಲಿ ಅಡಿಕೆಯನ್ನು ಯಾಕೆ ಕಾರಿನಲ್ಲಿ ತುಂಬಿಸುತ್ತಿದ್ದೀರಿ? ಎಂದು ಕೇಳಿದಾಗ ಅವರಲ್ಲಿ ಒಬ್ಬ ನಾವು ಅಡಿಕೆಯನ್ನು ತೆಗೆದುಕೊಂಡು ಹೋಗುತ್ತೇವೆ,ನೀನೇನಾದರೂ ಅಡ್ಡ ಬಂದರೆ ನಿನ್ನನ್ನು ಇಲ್ಲಿಯೇ ಕೊಂದು ಬಿಡುತ್ತೇವೆ ಎಂದು ಹೇಳಿ ಆತನ ಕೈಯಲ್ಲಿದ್ದ ತಲವಾರನ್ನು ತೋರಿಸಿರುತ್ತಾನೆ.
ಆ ವೇಳೆ ನಿಷ್ಕಲ್‌ರಾಮ್ ಭಯದಿಂದ ಜೋರಾಗಿ ಬೊಬ್ಬೆ ಹಾಕಿದ್ದು ಬೊಬ್ಬೆಯನ್ನು ಕೇಳಿದ ನಾನು ಮತ್ತು ಪತ್ನಿ ಅಲ್ಲಿಗೆ ಬಂದಾಗ ಅವರ ಪೈಕಿ ಒಬ್ಬ ವ್ಯಕ್ತಿಯು ನೀವು ಹತ್ತಿರ ಬಂದರೆ ನಿಮ್ಮ ಮಗನನ್ನು ಕೊಂದು ಬಿಡುತ್ತೇವೆ ಎಂದು ಹೇಳಿ ಮಗನಿಗೆ ತಲವಾರಿನಿಂದ ಹಲ್ಲೆ ನಡೆಸಿದ್ದಾನೆ.ಇದರಿಂದಾಗಿ ಎಡ ಕೈಯಲ್ಲಿ ತೀವ್ರ ಗಾಯವಾಗಿ ರಕ್ತ ಸುರಿಯಲಾರಂಭಿಸಿರುತ್ತದೆ.ಇದನ್ನು ನೋಡಿ ನನಗೆ ಅಪರಿಚಿತರ ಬಗ್ಗೆ, ಭಯ ಉಂಟಾಗಿ ಬೊಬ್ಬೆ ಹೊಡೆದಾಗ ಬೊಬ್ಬೆಯನ್ನು ಕೇಳಿದ ನೆರೆಕರೆಯ ಕೃಷ್ಣ ಭಟ್, ಹೂವಯ್ಯ ಮತ್ತಿತರರು ಸದ್ರಿ ಸ್ಥಳಕ್ಕೆ ಬಂದಿದ್ದಾರೆ.ಇದನ್ನು ನೋಡಿದ ಸದ್ರಿ ಅಪರಿಚಿತ ವ್ಯಕ್ತಿಗಳ ಪೈಕಿ ಒಬ್ಬ ವ್ಯಕ್ತಿಯು, ಆವೇಳೆಗಾಗಲೇ ಎರಡು ಗೋಣಿ ಚೀಲದಲ್ಲಿ ಸುಲಿದ ಅಡಿಕೆಯನ್ನು ತುಂಬಿಸಿಟ್ಟಿದ್ದ ಸ್ಕೂಟರನ್ನು ಚಲಾಯಿಸಿಕೊಂಡು ಸ್ಥಳದಿಂದ ತೆರಳಿರುತ್ತಾನೆ.ಬಳಿಕ ಸ್ಥಳದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೂಡಾ ಅಡಿಕೆಯನ್ನು ತುಂಬಿಸಿಟ್ಟಿದ್ದ. ಕಾರಿನೊಂದಿಗೆ ಸ್ಥಳದಿಂದ ವರಾರಿಯಾಗಲು ಪ್ರಯತ್ನಿಸಿದ್ದ.ಆವೇಳೆ ನಾನು ಮತ್ತು ಇತರರು ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದಾಗ, ಆತನು ತನ್ನ ಹೆಸರು ಬಶೀರ್ ಎಂಬುದಾಗಿ ಹೇಳಿದ್ದು ಆತ ನನ್ನ ಮಗನಿಗೆ ತಲವಾರಿನಿಂದ ಹಲ್ಲೆ ನಡೆಸಿದ ವ್ಯಕ್ತಿಯಾಗಿರುತ್ತಾನೆ.
ಅದೇ ರೀತಿ ಸ್ಕೂಟರ್‌ನಲ್ಲಿ ಸ್ಥಳದಿಂದ ಪರಾರಿಯಾದ ವ್ಯಕ್ತಿಯ ಬಗ್ಗೆ, ಬಶೀರ್‌ನಲ್ಲಿ, ವಿಚಾರಿಸಿದಾಗ ಆತನ ಹೆಸರು ಹಕೀಂ ಎಂಬುದಾಗಿ ತಿಳಿಸಿರುತ್ತಾನೆ.ಬಳಿಕ ನಾನು ಮನೆಯ ಅಡಿಕೆ ಗೋಡೌನ್‌ಗೆ ತೆರಳಿ ನೋಡಿದಾಗ ಅಲ್ಲಿ ತುಂಬಿಸಿಟ್ಟಿದ್ದ ಅಡಿಕೆಯ ಪೈಕಿ ಎರಡು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಒಟ್ಟು ಸುಮಾರು 60 ಕೆ.ಜಿ ಸುಲಿದ ಅಡಿಕೆಯನ್ನು ಅಲ್ಲಿಂದ ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ.ಸದ್ರಿ ಅಡಿಕೆಯ ಅಂದಾಜು ಮೌಲ್ಯ ರೂ.24 ಸಾವಿರ ಆಗಬಹುದು ಅದೇ ರೀತಿ ಸೋಲಾರ್ ಡ್ರೈಯರ್ನನ ಒಳಗೆ ನೋಡಿದಾಗ ಅದರಲ್ಲಿ ಸುಮಾರು 8 ಗೋಣಿ ಚೀಲದಷ್ಟು ಸುಲಿಯದ ಒಣ ಅಡಿಕೆಯನ್ನು ಕಳವು ಮಾಡಿರುವುದು ಕಂಡು ಬಂದಿರುತ್ತದೆ.ಆಪಾದಿತ ಸದ್ರಿ ವ್ಯಕ್ತಿಗಳು ಸೋಲಾರ್ ಡೈಯರ್‌ನಿಂದ ಕಳವು ಮಾಡಿ ಸ್ವಿಫ್ಟ್ ಕಾರಿನಲ್ಲಿ(ಕೆ.ಎ.19 ಎಂಎಂ7319)ತುಂಬಿಸಿಟ್ಟಿದ್ದ ಸುಲಿಯದ ಒಣ ಅಡಿಕೆಯನ್ನು ನೋಡಲಾಗಿ ಅದರಲ್ಲಿ ಒಟ್ಟು 8 ಪ್ಲಾಸ್ಟಿಕ್ ಗೋಣಿ ಚೀಲ ಸುಲಿಯದ ಅಡಿಕೆಯನ್ನು ತುಂಬಿಸಿಟ್ಟಿರುವುದು ಕಂಡು ಬಂದಿದೆ.ಸದ್ರಿ ಅಡಿಕೆಯ ಅಂದಾಜು ಬೆಲೆ ರೂ.75 ಸಾವಿರ ಆಗಬಹುದು ಎಂದು ಎ.ಆರ್.ಚಂದ್ರ ಅವರು ಬೆಳ್ಳಾರೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪರಾರಿಯಾಗಲೆತ್ನಿಸಿದ್ದ ಆರೋಪಿ ಬಶೀರ್‌ನನ್ನು ಸೇರಿದವರು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಘಟನೆ ಕುರಿತು ಕಲಂ 392,397, ಜೊತೆಗೆ 34 ಐಪಿಸಿಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.







