ಪುತ್ತೂರು: ನಾಡು ಕಂಡ ದೊಡ್ಡ ದಾರ್ಶಾನಿಕ ಕನಕದಾಸರು ಕೀರ್ತನೆಯ ಜೊತೆಗೆ ಅನೇಕ ಕಾವ್ಯಗಳನ್ನು ಬರೆದಿದ್ದಾರೆ. ಯುವ ಜನತೆ ದಾಸ ಸಾಹಿತ್ಯ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂಬ ಉದ್ದೇಶದಿಂದ ವಿವೇಕಾನಂದ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಸಹಯೋಗದದಲ್ಲಿ ಕನಕದಾಸ ಜಯಂತಿಯ ಪ್ರಯುಕ್ತ ದಾಸ ಸಾಹಿತ್ಯ ಒಳನೋಟಗಳು ಎನ್ನುವ ವಿಷಯವನ್ನು ಇಟ್ಟುಕೊಂಡು ನ.30ರಂದು ಕಾಲೇಜಿನ ಸುವರ್ಣಮಹೋತ್ಸವ ಸಭಾಭವನದಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿಯ ಅಧ್ಯಕ್ಷ ಗಣರಾಜ ಕುಂಬ್ಳೆ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ವಿಚಾರ ಸಂಕಿರಣ ಕಾರ್ಯಕ್ರಮ ಬೆಳಿಗ್ಗೆ ಗಂಟೆ 9.30ಕ್ಕೆ ಆರಂಭಗೊಳ್ಳಲಿದೆ. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ಸಮಿತಿ ಅಧ್ಯಕ್ಷ ಪ್ರೊ. ಗಣಪತಿ ಭಟ್ ಕುಳಮರ್ವ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ವಿದ್ವತ್ ಗೋಷ್ಠಿ ನಡೆಯಲಿದ್ದು, ಗೋಷ್ಟಿಯ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹತ್ಯ ಪರಿಷತ್ತು ಪುತ್ತೂರು ಸಮಿತಿ ಗೌರವಾಧ್ಯಕ್ಷ ಪ್ರೊ ವಿ.ಬಿ.ಅರ್ತಿಕಜೆ ವಹಸಲಿದ್ದಾರೆ. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಶಕುಮಾರ್ ಎಂ.ಕೆ. ಕನಕ ಪುರಂದರ ಅರ್ಥಾನುಸಂಧಾನ ಎನ್ನುವ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ವಿದ್ಯಾರ್ಥಿ ಗೋಷ್ಟಿ ನಡೆಯಲಿದ್ದು, ಪುತ್ತೂರು ಸಮಿತಿಯ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಸತೀಶ್ ಇರ್ದೆ ವಹಿಸಲಿದ್ದು, ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಮಧ್ಯಾಹ್ನ ನಂತರ ಸಮಾರೋಪ ಸಮಾರಂಭ ನಡೆಯಲಿದ್ದು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಸಮಾರೋಪ ಸಮಾರಂಭದ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭ ದಾಸ ಗೌರವ ಸಮರ್ಪಣೆಯನ್ನು ಶ್ರೀ ಮಧ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ನೀಡಲಾಗುವುದು. ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಪುತ್ತೂರು ಸಮಿತಿ ಗೌರವಾಧ್ಯಕ್ಷ ವಿ.ಬಿ.ಅರ್ತಿಕಜೆ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಮನಮೋಹನ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಉಪಸ್ಥಿತರಿದ್ದರು.